Advertisement

Dharwad; ಪಿಎಂ ಕಿಸಾನ್ ಸಮ್ಮಾನ್ ಅನ್ನದಾತರ ಕಾಳಜಿಗೆ ಸಾಕ್ಷಿ: ಕುಮಾರಸ್ವಾಮಿ

08:36 PM Jun 18, 2024 | Team Udayavani |

ಧಾರವಾಡ: 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿದ ಮೊದಲ ಕ್ಯಾಬಿನೆಟ್‌ ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಮಾಡಿದ್ದು ಅನ್ನದಾತರ ಬಗ್ಗೆ ಅವರಿಗಿದ್ದ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ 17ನೇ ಕಂತಿನ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಕಾರ್ಯಕ್ರಮದ ನೇರ ವೀಕ್ಷಣೆ ಮತ್ತು ಪಶು ಸಖಿ, ಕೃಷಿ ಸಖಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದ 50 ಕೃಷಿ ವಿಜ್ಞಾನ ಕೇಂದ್ರದಲ್ಲಿ ಏಕ ಕಾಲಕ್ಕೆ ರೈತರ ಖಾತೆಗೆ 17ನೇ ಕಂತಿನ 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಪೈಕಿ ಇಂದು ಸಾಂಕೇತಿಕವಾಗಿ 1458 ಕೋಟಿ ರೈತರ ಖಾತೆಗೆ ಹಂಚಿಕೆಯಾಗಿದೆ. ಧಾರವಾಡ ಜಿಲ್ಲೆಯ 1 ಲಕ್ಷ ರೈತರಿಗೆ 20 ಕೋಟಿ, ರಾಜ್ಯದ 45 ಲಕ್ಷ ರೈತರಿಗೆ 365 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಅತ್ಯಂತ ಅನುಕೂಲವಾಗಿದ್ದು, ವರ್ಷದಲ್ಲಿ ಮೂರು ಕಂತಿನಲ್ಲಿ ರೈತರ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡುತ್ತ ಬರಲಾಗುತ್ತಿದೆ. ಸದ್ಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರು.

ರೈತರ ಅಭ್ಯುದಯ ಕೇಂದ್ರ ಸರಕಾರದ ಮುಖ್ಯ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರಿಗೆ ಯೋಜನೆಯ ಫಲ ದೊರೆಯಲಿದೆ. ಈಗಾಗಲೇ 16 ಕಂತಿನಲ್ಲಿ 3.02 ಸಾವಿರ ಕೋಟಿ ಬಿಡಗುಡೆ ಮಾಡಲಾಗಿದೆ. ಇದರಿಂದ ಸಾಕಷ್ಟು ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಂಡು ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಂಡಿದ್ದಾರೆ. ಅಲ್ಲದೇ ಇಂದು ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಸಖಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ರಾಜ್ಯದ ಇಬ್ಬರು ಕೃಷಿ ಮಹಿಳೆಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.

ನಂತರ ಆನ್‌ಲೈನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಕಾರ್ಯಕ್ರಮವನ್ನು ವೀಕ್ಷಿಸಿದರು. ಕೃಷಿ ವಿವಿ ಕುಲಪತಿ ಡಾ. ವಿ.ಎಲ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಉಪಸ್ಥಿತರಿದ್ದರು.

Advertisement

ಕುಮಾರಸ್ವಾಮಿಗೆ ರೈತ ಮುಖಂಡರ ಮನವಿ

ಕಳೆದ ವರ್ಷದ ಬೆಳೆ ಹಾನಿ ಪರಿಹಾರ ಇನ್ನು ಅರ್ಧ ಜನ ರೈತರಿಗೆ ತಲುಪಿಯೇ ಇಲ್ಲ.ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಬೇಕು. ಕಳಸಾ ಬಂಡೂರಿ ಯೋಜನೆ ಜಾರಿಗೆ ತರಬೇಕು ಮತ್ತು ರಾಜ್ಯದ ರೈತರ ಹಿತಕ್ಕೆ ಅನುಕೂಲವಾಗುವ ಕೆಲಸಗಳನ್ನು ಕೇಂದ್ರ ಸಚಿವರಾಗಿ ಮಾಡಿಕೊಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಕುಮಾರಸ್ವಾಮಿ ಖಂಡಿತವಾಗಿಯೂ ರಾಜ್ಯದ ರೈತರ ಹಿತ ಕಾಯುವ ಕೆಲಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next