ನವದೆಹಲಿ: ದೇಶದಲ್ಲಿ ಲೋಕಸಭೆಗೆ ತಕ್ಷಣದಲ್ಲಿ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಜಯಗಳಿಸಲಿದೆ. ಆದರೆ, ಹೊಸತಾಗಿ ರಚನೆಯಾಗಿರುವ 26 ಪ್ರತಿಪಕ್ಷಗಳ ಒಕ್ಕೂಟ ಐ.ಎನ್.ಡಿ.ಐ.ಎ. ಪ್ರಬಲ ಸ್ಪರ್ಧೆ ನೀಡಲಿದೆ. ಎನ್‌ಡಿಎಗೆ 300 ಸ್ಥಾನಗಳು ಲಭಿಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ಒಕ್ಕೂಟಕ್ಕೆ 160ರಿಂದ 190 ಸ್ಥಾನಗಳು ಪ್ರಾಪ್ತವಾಗಲಿದೆ. ಇತರರಿಗೆ 70ರಿಂದ 80 ಸ್ಥಾನಗಳು ಸಿಗಲಿವೆ ಎಂದು ಆಂಗ್ಲ ಸುದ್ದಿವಾಹಿನಿ “ಟೈಮ್ಸ್ ನೌ’ ಮತ್ತು ಇ.ಟಿ.ಜಿ. ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ. ಹಾಲಿ ಲೋಕಸಭೆಯಲ್ಲಿ ಎನ್‌ಡಿಎಗೆ 353 ಸದಸ್ಯರ ಬಲವಿದೆ. ಬಿಜೆಪಿಗೆ 288ರಿಂದ 314 ಸ್ಥಾನಗಳು ಸಿಗಲಿದ್ದರೆ, ಕಾಂಗ್ರೆಸ್‌ಗೆ 62ರಿಂದ 80 ಸ್ಥಾನಗಳು ದೊರಕುವ ಸಾಧ್ಯತೆಗಳು ಇವೆ.
ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಪ್ರತಿಪಕ್ಷಗಳ ಒಕ್ಕೂಟ ಎನ್‌ಡಿಎ ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ. ಆದರೆ, ಮೈತ್ರಿಕೂಟದಲ್ಲಿನ ಪಕ್ಷಗಳ ಭಿನ್ನ ನಿಲುವು ಅವುಗಳಿಗೆ ಮುಳುವಾಗಲಿದೆ. ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ 28ರಿಂದ 32, ಪ್ರತಿಪಕ್ಷಗಳ ಒಕ್ಕೂಟಕ್ಕೆ 15ರಿಂದ 19 ಸ್ಥಾನಗಳು ಸಿಗುವ ಸಾಧ್ಯತೆ ಇದೆ. ಬಿಹಾರದಲ್ಲಿ ಎನ್‌ಡಿಎಗೆ 22ರಿಂದ 24, ಐ.ಎನ್.ಡಿ.ಐ.ಎ.ಗೆ 16ರಿಂದ 18 ಸ್ಥಾನಗಳು ಪ್ರಾಪ್ತವಾಗಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಕೇರಳದಲ್ಲಿ ಇರುವ 20 ಸ್ಥಾನಗಳ ಪೈಕಿ 19 ಸ್ಥಾನಗಳಲ್ಲಿ ಯುಡಿಎಫ್ ಗೆಲ್ಲಲಿದ್ದರೆ, 1 ಸ್ಥಾನದಲ್ಲಿ ಎನ್‌ಡಿಎ ಜಯ ಗಳಿಸುವ ಸಾಧ್ಯತೆ ಸಮೀಕ್ಷೆಯಲ್ಲಿದೆ. ತಮಿಳುನಾಡಿನಲ್ಲಿ ಐ.ಎನ್.ಡಿ.ಐ.ಎ.ಗೆ 34ರಿಂದ 39 ಸ್ಥಾನಗಳು, ಎನ್‌ಡಿಎಗೆ 4ರಿಂದ8 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ. 2024ರ ಚುನಾವಣೆಯಲ್ಲಿ ಎನ್‌ಡಿಎ ಜಯ ಸಾಧಿಸಿದ್ದೇ ಆದರೆ, ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಬಳಿಕ ಸತತ ಮೂರನೇ ಬಾರಿಗೆ ಆಯ್ಕೆಯಾಗಲಿರುವ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ.
ಬಿಜೆಪಿಗೆ 20 ಸ್ಥಾನ
ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದರೂ ಐ.ಎನ್.ಡಿ.ಐ.ಎ. ಮೈತ್ರಿಕೂಟಕ್ಕೆ ಎಂಟರಿಂದ ಹತ್ತು ಸ್ಥಾನ, ಬಿಜೆಪಿಗೆ 18ರಿಂದ 20 ಸ್ಥಾನಗಳು ಲಭಿಸುವ ನಿರೀಕ್ಷೆ ಇದೆ.