ಹೊಸದಿಲ್ಲಿ : ನಾಳೆ ಮಂಗಳವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಅದಕ್ಕೆ ಮುನ್ನ ಸರಕಾರ ಸರ್ವ ಪಕ್ಷ ಸಭೆ ಕರೆದಿದ್ದು ವಿಪಕ್ಷಗಳ ಜತೆಗೆ ಎಲ್ಲ ವಿಷಯಗಳ ಚರ್ಚೆಗೆ ನಾವು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ವಿರೋಧ ಪಕ್ಷಗಳು ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ನಾವು ಚರ್ಚೆಗೆ ಸಿದ್ಧ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನ ಫಲಪ್ರದವೂ ರಚನಾತ್ಮಕವೂ ಆಗಿರುವುದೆಂದು ಹಾರೈಸುತ್ತೇನೆ. ಎಲ್ಲ ಪಕ್ಷಗಳಿಂದ ಸಂಸತ್ ಕಲಾಪ ಯಶಸ್ವಿಗೆ ಪೂರ್ಣ ಬೆಂಬಲ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಅವರು ಉನ್ನತ ವಿಪಕ್ಷ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಹೇಳಿದರು.
ಅಗತ್ಯ ಬಿದ್ದರೆ ತಡ ಸಂಜೆಯ ವರೆಗೂ ಮುಖ್ಯ ಮಸೂದೆಗಳನ್ನು ನಾವು ಪಾಸು ಮಾಡುವೆವು ಎಂದು ಪ್ರಧಾನಿ ಹೇಳಿದರು.
ಆದರೆ ಪ್ರಧಾನಿಯವರ ಈ ಮಾತುಗಳಿಂದ ಸಂತುಷ್ಟಗೊಳ್ಳದ ವಿರೋಧ ಪಕ್ಷ, ರಫೇಲ್ ಜೆಟ್ ಡೀಲ್ ಕುರಿತಾಗಿ ಜಂಟಿ ಸಂಸದೀಯ ಸಮಿತಿಯ ತನಿಖೆಯನ್ನು ಆಗ್ರಹಿಸುವುದಾಗಿ ಹೇಳಿದೆ.
ಉನ್ನತ ಕೇಂದ್ರ ತನಿಖಾ ದಳಗಳ ದುರುಪಯೋಗ, ಆರ್‌ಬಿಐ ಸ್ವಾಯತ್ತೆಯೇ ಮೊದಲಾದ ಇನ್ನೂ ಅನೇಕ ವಿಷಯಗಳನ್ನು ವಿರೋಧ ಪಕ್ಷಗಳು ಸಭೆಯಲ್ಲಿ ಎತ್ತಿದವು. ಇವೆಲ್ಲವನ್ನೂ ತಾವು ಮಂಗಳವಾರದಿಂದ ಆರಂಭಗೊಳ್ಳುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಎತ್ತುವುದಾಗಿ ಹೇಳಿದವು.