ಹುಬ್ಬಳ್ಳಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಗಳಿದ್ದಾಗ ಸುಮಾರು 5 ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮತ್ತೆ 525 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.
ಕೇಂದ್ರ ಸರಕಾರ, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ, ಹು-ಧಾ ಮಹಾನಗರ ಪಾಲಿಕೆ ಆಶ್ರಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 525ರಲ್ಲಿ ಬೆಂಗೇರಿ ಗಾಂಧಿನಗರದಲ್ಲಿ 265 ಮನೆಗಳ ನಿರ್ಮಾಣ ಮಾಡಲಾಗುತ್ತದೆ.
ಪರಿಶಿಷ್ಟ ಫಲಾನುಭವಿಗಳು 48 ಸಾವಿರ, ಇತರೆ ವರ್ಗದವರು 58 ಸಾವಿರ ಹಣ ನೀಡಿದರೆ 5 ಲಕ್ಷ ರೂ.ಗಳ ಮನೆ ನಿರ್ಮಿಸಿ ಕೊಡಲಾಗುತ್ತದೆ ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, 2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಿಕೊಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯಾಗಿದೆ.
8 ರಿಂದ 10 ತಿಂಗಳೊಳಗೆ ಈ ಭಾಗದ ಜನರಿಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಕೇಂದ್ರ ಸರಕಾರಿದಿಂದ 7. 87 ಕೋಟಿ, ರಾಜ್ಯ ಸರಕಾರದಿಂದ 8.90 ಕೋಟಿ, ಮಹಾನಗರ ಪಾಲಿಕೆಯಿಂದ 10.93 ಕೋಟಿ ರೂ. ಅನುದಾನ ಹಾಗೂ ಫಲಾನುಭವಿಗಳ ವಂತಿಗೆ ಸೇರಿ ಒಟ್ಟು 30.64 ಕೋಟಿ ರೂ. ವೆಚ್ಚದಲ್ಲಿ 525 ಮನೆಗಳ ನಿರ್ಮಾಣ ಮಾಡಲಾಗುವುದು ಎಂದರು.
ವಿಪ ಸದಸ್ಯ ಪ್ರದೀಪ ಶೆಟ್ಟರ, ಮಹಾಪೌರ ಡಿ.ಕೆ. ಚವ್ಹಾಣ, ಉಪಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಬೀರಪ್ಪ ಖಂಡೇಕಾರ, ಮೇನಕಾ ಹುರಳಿ, ವೀರಭದ್ರಪ್ಪ ಹಾಲಹರವಿ, ನಾಗೇಶ ಕಲುºರ್ಗಿ, ಮಲ್ಲಿಕಾರ್ಜುನ ಸಾವುಕಾರ ಇತರರಿದ್ದರು.