Advertisement
ನಾವು ಬೆಂಗಳೂರಿನಲ್ಲಿರುವ ಜ್ಞಾನಭಾರತಿ ಬಡಾವಣೆಗೆ ಬಂದ ಹೊಸತು. ಸುತ್ತಮುತ್ತಲಿನ ಹೊಲವೆಲ್ಲ ಸೈಟ್‌ಗಳಾಗಿ ರೂಪಾಂತರಗೊಳ್ಳುತ್ತಿದ್ದ ಕಾಲ ಅದು. ಅಲ್ಲಿ ಮನೆಗಳಿಗಿಂತ ಹುತ್ತಗಳೇ ಹೆಚ್ಚಾಗಿ, ಹಾವುಗಳೇ ನಮ್ಮ ಸಹವಾಸಿಗಳಾಗಿದ್ದವು. ತಾವು ಹೊಲದಲ್ಲಿ ಕಷ್ಟಪಟ್ಟು ಬಿತ್ತಿ ಬೆಳೆಯುತ್ತಿದ್ದ ಬೆಳೆಗಿಂತ, ತಮ್ಮ ಭೂಮಿಗೆ ಚಿನ್ನದಂಥ ಬೆಲೆ ಬಂದೀತೆಂಬ ಹಿಗ್ಗಿನಲ್ಲಿ ಆ ಜಮೀನಿನ ಒಡೆಯರಾದ ಬಹುಪಾಲು ರೈತರೆಲ್ಲ ರಿಯಲ್ ಎಸ್ಟೇಟ್‌ದಾರರಿಗೆ ಮಾರಿ ಸುಖಾಸುಮ್ಮನೆ ಕೈತುಂಬ ಹಣ ಗಳಿಸಿದೆವೆಂಬ ಸುಖದ ಮರೀಚಿಕೆಯಲ್ಲಿದ್ದರು. ಹಾಗಾಗಿ, ಉತ್ತಿ ಬೆಳೆಯುವವರು ಇಲ್ಲದೆ ಹೊಲಗಳೆಲ್ಲ ಬೀಳಾಗಿ ಬಿಟ್ಟಿತ್ತು. ಬೇಸಿಗೆಯಲ್ಲಂತೂ ಮಣ್ಣಿನಹಾದಿಯಲ್ಲಿ ನಡೆಯುತ್ತಾ ಹೋಗುತ್ತಿದ್ದರೆ- ನೀರಿಗಾಗಿ ಹಾತೊರೆಯುತ್ತ ಜೀವಕಳೆಯನ್ನು ಕಳೆದುಕೊಂಡು ಒಣಗಿರುತ್ತಿದ್ದ ಭೂಮಿಯನ್ನು ನೋಡುತ್ತಿದ್ದರೆ ಮನಸ್ಸು ತಳಮಳಗೊಂಡು ಸಂಕಟವಾಗುತ್ತಿತ್ತು. ಅಲ್ಲಿದ್ದ ಉಳಿದುಬಳಿದ ಕಳೆಗಿಡಗಳನ್ನು ಮೇಯಿಸುತ್ತಿದ್ದ ದನಕುರಿ ಕಾಯುವ ಮುದುಕ ಅಜ್ಜ-ಅಜ್ಜಿಯರನ್ನು ಮಾತನಾಡಿಸಿದರೇ ಅವರ ಒಡಲಲ್ಲಿ ಹುದುಗಿದ್ದ ಯಾತನೆ ಎಲ್ಲವೂ ಕಣ್ಣೀರಿನೊಡನೆ ಹೊರಬರುತ್ತಿತ್ತು. ಇದನ್ನೆಲ್ಲಾ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ಭೂಮಿತಾಯಿ, ತನ್ನ ಮೈಮೇಲೆ ಬೀಳುತ್ತಿದ್ದ ಆ ಉಪ್ಪುನೀರಿನ ಹನಿಯನ್ನು ಕ್ಷಣಾರ್ಧದಲ್ಲೇ ಕುಡಿದುಬಿಡುತ್ತಿದ್ದಳು. ಹಸಿರು ತೆನೆಗಳನ್ನು ಹೊತ್ತು ತೊನೆದಾಡುತ್ತಿದ್ದ ಭೂಮಿ ಅಷ್ಟೊಂದು ಬೆಂದು ಬೆಂಗಾಡಿ ಹೋಗಿದ್ದಳು.
Related Articles
Advertisement
ಸೊಪ್ಪು ಸಂಗ್ರಹಹೀಗೆ ಅಂದುಕೊಳ್ಳುತ್ತ ಒಂದು ದಿನ ತಿರುಗಾಡಲು ಹೋದಾಗ ಅಕ್ಕಪಕ್ಕದ ಹಳ್ಳಿಯ ಹತ್ತಾರು ಹೆಂಗಸರ ಕೂಟವೇ ಅಲ್ಲಿ ಏನ್ನನ್ನೋ ಅರಸುವ ಕಾರ್ಯದಲ್ಲಿ ನಿರತವಾಗಿತ್ತು. ಅವರ ಸೀರೆಯ ಮಡಿಲು ತುಂಬಿಕೊಂಡು ದಿನತುಂಬಿದ ಬಸಿರಿನ ಹೊಟ್ಟೆಯಂತೆ ಉಬ್ಬಿಕೊಂಡಿತ್ತು. ಹತ್ತಿರ ಹೋಗಿ ನೋಡಿದಾಗ ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಸರಸರನೆ ಬಗ್ಗಿ ಶೋಧಿಸಿ ಶೋಧಿಸಿ ಸೊಪ್ಪನ್ನು ಚಿಗುಟಿ ಕೊಯ್ದು ಮಡಿಲೊಳಗೆ ತುಂಬಿಸಿಕೊಳ್ಳುತ್ತಿದ್ದರು. ತಡೆಯಲಾರದ ಕುತೂಹಲದಿಂದ “ಎಂಥ ಮಾಡುತ್ತಿದ್ದೀರಾ? ಏನು ಕುಯ್ಯುತ್ತಿದ್ದೀರಾ?’ ಅಂತ ನಾನವರನ್ನು ಕೇಳಿದೆ. ಒಂದರೆಕ್ಷಣ ನನ್ನೆಡೆ ಕಣ್ಣು ಹಾಯಿಸಿ “ಸೊಪ್ಪು ಕಣಕ್ಕಾ’ ಎಂದು ಉತ್ತರಿಸಿ ಮತ್ತೆ ಸೊಪ್ಪಿನ ಹುಡುಕಾಟದಲ್ಲಿ ತೊಡಗಿದರು. ಆ ಮೊಟಕು ಉತ್ತರದಲ್ಲಿ “ಅಯ್ಯೋ ಈ ಪೇಟೆ ಅಕ್ಕನಿಗೆ ಅಷ್ಟೂ ತಿಳಿಯಕಿಲ್ವಾ’ ಅನ್ನೋ ಭಾವವಿತ್ತು. ಹೌದು. ನಾ ದಡ್ಡಿ ಎಂದು ಒಪ್ಪಿಕೊಂಡು, ಏನದು ನೋಡೇಬಿಡುವ ಅಂತ ಅವರ ಬಳಿ ಸಾರಿ “ಎಲ್ಲಿ ತೋರಿಸಿ ಎಂಥ ಸೊಪ್ಪೆಂದು?’ ಎಂದೆ. ಆಗ ಬಗ್ಗಿಬಗ್ಗಿ ಸುಸ್ತಾಗಿದ್ದ ಅಜ್ಜಿಯೊಬ್ಬಳು ಒಂದು ಕಡೆ ಕೂತು “ಇತ್ತ ಕಡೆ ಬಾ ಮಗ. ಕಣ್ ಹಾಯಿಸುವಂತೆ’ ಎಂದೆನ್ನುತ್ತಾ ತನ್ನ ಮುಚ್ಚಿದ್ದ ಮಡಿಲನ್ನು ನಿಧಾನವಾಗಿ ನಿಧಿ ತೋರಿಸುವಂತೆ ಬಿಚ್ಚಿ ತೋರಿಸಿದಳು. ಅಬ್ಟಾ! ಎಷ್ಟೊಂದು ಬಗೆಯ ಎಲೆಗಳು! ಏನೊಂದು ಹಸಿರುಬಣ್ಣಗಳು. ನಾನು ಕಳೆಗಿಡವೆಂದುಕೊಂಡಿದ್ದ ಅನೇಕವು ಆ ಸೊಪ್ಪಿನ ರಾಶಿಯಲ್ಲಿ ಸ್ಥಾನ ಪಡೆದಿದ್ದವು! ಅದನ್ನು ನೋಡಿ “ಅಯ್ಯೋ ಅಜ್ಜಮ್ಮಾ, ಕಳೆಗಿಡವನ್ನೆಲ್ಲ ಬೆರೆಸಿಬಿಟ್ಟಿದ್ದೀರಲ್ಲ ‘ ಅಂತ ಪರಿತಾಪಪಟ್ಟೆ. ಆಗ ಆ ಅಜ್ಜಿ ನನ್ನ ಅಜ್ಞಾನಕ್ಕಾಗಿ ಮರುಗಿ, “ಅಯ್ಯೋ ಅದು ಕಳೆಯಲ್ಲ ಮಗಾ ಅಣ್ಣೆಸೊಪ್ಪು. ಇದು ನೆಲನೆಲ್ಲಿಯ ಕುಡಿ, ಇದು ಮುಳ್ಳು ಕೀರೆ, ಕನ್ನೆಸೊಪ್ಪು, ಹೊನೆಗೊನೆಸೊಪ್ಪು, ಕಾಕಿಸೊಪ್ಪು, ದಗ್ಗಲರಿವೆೆಸೊಪ್ಪು, ನಗ್ಗಲಿ ಸೊಪ್ಪು, ಹುಳಿಸೊಪ್ಪು, ತುಂಬೆ ಸೊಪ್ಪು, ಒಂದೆಲಗ, ಚಗತೆ ಸೊಪ್ಪು’-ಅಂತೆಲ್ಲಾ ಅಷ್ಟೂ ಸೊಪ್ಪಿನ ಹೆಸರನ್ನು ಪಾಠ ಒಪ್ಪಿಸಿದ ಹಾಗೆ ಪಟಪಟನೆ ಹೇಳಿತು. “ಇದನ್ನೆಲ್ಲ ಸೇರಿಸಿ ಬೆರಕೆಸೊಪ್ಪಿನ ಸಾರೋ, ಮಸೊಪ್ಪೋ, ಉಪ್ಪೆಸರು ಖಾರ ಮಾಡಿದರೋ ಎರಡು, ಮೂರು ಮುದ್ದೆಯನ್ನ ಆರಾಮವಾಗಿ ಹೊಟ್ಟೆಯೊಳಗೆ ಇಳಿಸಬಹುದು’ ಎಂದಳು. ಅಜ್ಜಮ್ಮ ಹೇಳಿದ ರೀತಿಗೆ ನನ್ನ ಬಾಯಲ್ಲೂ ನೀರೂರಿತು. ಅಲ್ಲಿಂದ ಸೀದಾ ನಮ್ಮ ಮನೆ ಬಳಿ ಇರುವ “ಮಂಗಳೂರು ಸ್ಟೋರ್ಗೆ ಹೋದೆ. ಅಲ್ಲಿ ನೋಡಿದರೆ ಮತ್ತಷ್ಟು ಬಗೆಯ ಸೊಪ್ಪುಗಳ ಕಂತೆ- ಪಾಲಕ್, ದಂಟು, ಅಗಸೆ, ಕೆಂಪುದಂಟು, ಬಸಳೆ, ಮೆಂತ್ಯ, ಸಬ್ಬಸ್ಸಿಗೆ, ಕಿಲ್ಕಿàರೆ, ಚಕ್ಕೋತ, ಪುದೀನಾ, ಕೊತ್ತಂಬರಿ, ಕರಿಬೇವು, ಪುಂಡಿಸೊಪ್ಪು, ರಾಜಗಿರಿ, ಕೀರೆ, ನುಗ್ಗೆ, ಚಕ್ರಮುನಿ, ಕೆಸುವಿನಎಲೆ, ಅರಿಸಿನದ ಎಲೆ- ಹೀಗೆ ನಾನಾ ಬಗೆಯ ಸೊಪ್ಪು. ನನಗೆ ಸೊಪ್ಪಿನ ಜಗತ್ತೇ ಅಯೋಮಯವಾಗಿ- “ಮಸೊÕಪ್ಪು ಸಾರು ಮಾಡಲು ಸೊಪ್ಪನ್ನು ಆರಿಸಿ ಕೊಟ್ಟು, ಅದನ್ನು ಹೇಗೆ ಮಾಡುವುದೆಂದು ಹೇಳಿಕೊಡು’ ಎಂದು ಪರಿಚಯದ ಅಂಗಡಿ ಹುಡುಗನನ್ನು ಕೇಳಿದೆ. ಆತ ಹೇಳಿದ “ಆಂಟೀ, ನಮ್ಮ ಮಂಗಳೂರಿನ ಕಡೆ ತಂಬುಳಿ, ಕೆಸುವಿನ ಪತ್ರೊಡೆ, ಗೊಜ್ಜು, ಬಸಳೆ ಸೊಪ್ಪಿನ ಪದಾರ್ಥ, ಇತರೆ ಸೊಪ್ಪಿನ ಸಾಂಬಾರು ಮಾಡುತ್ತೇವೆ. ಆದರೆ ಮಸೊಪ್ಪು ಹೇಗೆ ಮಾಡುವುದೆಂದು ಗೊತ್ತಿಲ್ಲ. ಒಂದು ಕೆಲಸ ಮಾಡಿ. ಎಲ್ಲ ಸೊಪ್ಪಿನ ಒಂದೊಂದು ಕಂತೆ ತೆಗೆದುಕೊಂಡು ಹೋಗಿ. ಬೇಳೆಯೊಟ್ಟಿಗೆ ಬೇಯಿಸಿ, ಸಾಂಬಾರು ಪುಡಿ ಹಾಕಿ ಕುದಿಸಿ. ನೋಡುವ ಹೇಗೆ ಆಗುತ್ತದೆ’ ಎಂದು ಪುಕ್ಕಟೆ ಸಲಹೆ ಕೊಟ್ಟ. ಹಾಗೆಲ್ಲ ಪ್ರಯೋಗ ಮಾಡಲು ನಾನು ಸಿದ್ಧಳಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ನನ್ನ ಗೆಳತಿಯ ಸಹಾಯ ಸರಿಯಾದ ಸಮಯಕ್ಕೆ ಒದಗಿತು. ನನಗೆ ಬೇಕಾದ ಸೊಪ್ಪನ್ನು ಆರಿಸಿ ಕೊಟ್ಟದ್ದಲ್ಲದೇ, ನನ್ನ ಜೊತೆಯಲ್ಲಿಯೇ ಮನೆಗೆ ಬಂದು ಕಾಫಿ ಕುಡಿಯುತ್ತ ಮಸ್ಸಪ್ಪು, ಉಪ್ಸಾರು-ಖಾರವ ಮಾಡುವ ವಿಧಾನವನ್ನು ನನ್ನ ತಲೆಗೆ ಕೊರೆದು ಕೊರೆದು ತುಂಬಿಸಿದಳು. ಅದಕ್ಕೆ ಪ್ರತಿಯಾಗಿ ಅವಳ ಮನೆ ಊಟಕ್ಕೆ ನನ್ನ ಸೊಪ್ಪುಸಾರಿನ ಭಾಗ್ಯ ದೊರಕಿತು. ಅದನ್ನು ತಿಂದವಳು- “ರುಚಿ ಏನೋ ಪರವಾಗಿಲ್ಲ. ಆದರೆ ಇನ್ನೊಂದು ಎರಡು-ಮೂರು ಬಾರಿ ಮಾಡಿದರೆ ನಾನು ಮಾಡುವ ಮಟ್ಟಕ್ಕೆ ಬರಬಹುದು’ ಎಂದು ಉತ್ತೇಜಿಸಿದಳು. ಅಂತೂ ಅಡುಗೆ ಮಾಡ್ತಾ ಮಾಡ್ತಾ ಬಗೆ ಬಗೆಯ ಸೊಪ್ಪಿನ ಅಡುಗೆಗಳನ್ನು ಮಾಡುವುದರಲ್ಲಿ ಪರಿಣಿತಳಾದೆ. ನನ್ನ ಪ್ರಕಾರ ಸೊಪ್ಪಿನ ಸಾಮ್ರಾಜ್ಯದಲ್ಲಿ ಏನಾದರೂ ರಾಜರಾಣಿ ಪಟ್ಟವಿದ್ದರೆ ಅದು ಕರಿಬೇವು ಮತ್ತು ಕೊತ್ತಂಬರಿಸೊಪ್ಪಿಗೆ ಆ ಸ್ಥಾನಮಾನ ದೊರಕಬೇಕು. ಏಕೆಂದರೆ ದಿನನಿತ್ಯದ ಅಡುಗೆಯಲ್ಲಿ ಕೊತ್ತಂಬರಿಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಕಡ್ಡಾಯವಾಗಿ ಎಲ್ಲರೂ ಬಳಸುತ್ತಾರೆ. ಏನೇ ಅಡುಗೆ ಮಾಡಿದರೂ ಅದರ ಮೇಲೆ ಒಂದಿಷ್ಟು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ನೋಡಲು ಆಕರ್ಷಕ. ತಿನ್ನಲು ರುಚಿ. ಮತ್ತೆ ಖಾರದ ಅಡುಗೆಯ ಒಗ್ಗರಣೆಯಲ್ಲಿ ಕರಿಬೇವು ಬೀಳದಿದ್ದರೆ ನಮ್ಮ ದಕ್ಷಿಣಭಾರತೀಯರಿಗೆ ಸಮಾಧಾನವೇ ಆಗುವುದಿಲ್ಲ. ಉಂಡ ಊಟ ತೃಪ್ತಿ ಕೊಡುವುದಿಲ್ಲ. ಅದರಲ್ಲೂ ವಿಶೇಷ ದಿನಗಳ ಸಮಾರಂಭದಲ್ಲಿ ಅಡುಗೆ ಭಟ್ಟರಿಗೆ ಇವೆರಡೂ ಸೊಪ್ಪು ಕಣ್ಣೆದುರು ಇಲ್ಲದಿದ್ದರೆ ಅವರ ಕೈ ಕಟ್ಟಿಹಾಕಿದಂತಾಗುತ್ತದೆ. ಅಷ್ಟರಮಟ್ಟಿಗೆ ಕರಿಬೇವು, ಕೊತ್ತಂಬರಿ ಸೊಪ್ಪು ಅಡುಗೆ ಮನೆಯನ್ನು ಆಕ್ರಮಿಸಿಕೊಂಡುಬಿಟ್ಟಿದೆ. ಎಲ್ಲ ಬಗೆಯ ಹಣ್ಣು, ತರಕಾರಿಗಳು ಎಲ್ಲ ಕಡೆ ದೊರೆಯದಿರಬಹುದು; ಆದರೆ, ಜಗತ್ತಿನಾದ್ಯಂತ ಒಂದಲ್ಲ ಮತ್ತೂಂದು ಬಗೆಯ ಸೊಪ್ಪು ಖಂಡಿತ ಸಿಗುತ್ತದೆ. ಹೀಗಾಗಿ, ಜಗತ್ತಿನ ಯಾವ ಪ್ರದೇಶಕ್ಕೆ ಹೋದರೂ ಸೊಪ್ಪಿನ ಖಾದ್ಯಗಳು ಸಿಗುತ್ತವೆ. ರುಚಿ, ವೈವಿಧ್ಯಗಳು ಆ ಪ್ರದೇಶಕ್ಕನುಗುಣವಾಗಿರುತ್ತದೆ ಅಷ್ಟೆ. ಈಗಂತೂ ಬಿಡಿ ನಾನಾ ಬಗೆಯ ಸೊಪ್ಪಿನಿಂದ ನೂರಾರು ತರಹದ ಅಡುಗೆಯನ್ನು ಮಾಡಬಹುದು. ಉದಾಹರಣೆಗೆ- ಸಾರು, ತಂಬುಳಿ, ಗೊಜ್ಜು, ಪಲ್ಯ, ಮಜ್ಜಿಗೆಹುಳಿ, ರೊಟ್ಟಿ, ದೋಸೆ, ಚಟ್ನಿಪುಡಿ, ಪಕೋಡ, ಸೂಪ್, ಸಲಾಡ್… ಹೀಗೆ ಪಟ್ಟಿ ಕೊಡುತ್ತ ಹೋದರೆ ಪುಟಗಟ್ಟಲೆ ಬರೆಯಬೇಕಾಗುತ್ತದೆ. ರಜನಿ ನರಹಳ್ಳಿ