Advertisement

“ಬಿಎಸ್‌ವೈ ನಿರ್ಧಾರಗಳಿಂದ ಕಾರ್ಯಕರ್ತರಿಗೆ ಆಘಾತ’

03:45 AM Jan 14, 2017 | Team Udayavani |

ಬೆಂಗಳೂರು: ಪಕ್ಷದ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿನ ಆಯ್ದ ಪ್ರಮುಖ ಭಾಗ ಹೀಗಿದೆ:

Advertisement

– ಪಕ್ಷ ಸಂಘಟನೆಯಲ್ಲಾಗಿರುವ ಗೊಂದಲಗಳ ಕುರಿತು ಚರ್ಚಿಸಲು ಸಮಯಾವಕಾಶ ಕೇಳಿ ಕಳೆದ ಆಗಸ್ಟ್‌ 1ರಂದು ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೆ, ತಮ್ಮ (ಯಡಿಯೂರಪ್ಪ) ಪ್ರತಿಕ್ರಿಯೆ ಬಾರದ ಕಾರಣ ಈ ಪತ್ರ ಬರೆಯಲಾಗುತ್ತಿದೆ.

– ತಮ್ಮನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದಾಗ ರಾಜ್ಯದ ಎಲ್ಲ ಕಾರ್ಯಕರ್ತರು ಸಂತೋಷಪಟ್ಟಿದ್ದರು. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿಗಳಾಗುತ್ತೀರಿ ಎಂದು ಹರ್ಷಿಸಿದ್ದೆವು. ಆ ರೀತಿ ತಾವು ಪಕ್ಷ ಸಂಘಟನೆಯನ್ನು ಒಮ್ಮತದಿಂದ ಸಂಘಟಿಸುತ್ತೀರಿ ಎಂಬ ಭಾವನೆ ಎಲ್ಲರದಾಗಿತ್ತು.

– ನಂತರದ ದಿನಗಳಲ್ಲಿ ರಾಜ್ಯ ವಕ್ತಾರರ ನೇಮಕ, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷ- ಪ್ರಧಾನ ಕಾರ್ಯದರ್ಶಿಗಳ ಆಯ್ಕೆ, ಜಿಲ್ಲಾ ಅಧ್ಯಕ್ಷ- ಪ್ರಧಾನ ಕಾರ್ಯದರ್ಶಿಗಳನ್ನು ಯಾರೊಂದಿಗೂ ಚರ್ಚಿಸದೆ ಏಕಪಕ್ಷೀಯವಾಗಿ ಘೋಷಿಸಿದಿರಿ. ಪಕ್ಷದ ಕೋರ್‌ ಕಮಿಟಿಯನ್ನು ತಾವು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇವು ಕಾರ್ಯಕರ್ತರನ್ನು ಆಘಾತಕ್ಕೀಡು ಮಾಡಿದವು. ಕಳೆದ 10-20 ವರ್ಷಗಳಿಂದ ಸಕ್ರಿಯವಾಗಿ ಪೂರ್ಣ ಸಮಯ ಸಂಘಟನೆ ಕಾರ್ಯ ಮಾಡುತ್ತಿದ್ದವರನ್ನು ಮೂಲೆಗುಂಪು ಮಾಡಿದಿರಿ. ನೇಮಕ ಮಾಡುವಾಗ ಯಾವುದೇ ಹಂತದಲ್ಲಿ ಚರ್ಚೆಗಳು ನಡೆಯಲಿಲ್ಲ.

– ಇದರಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಪಕ್ಷದಲ್ಲೇ ಎರಡು ಗುಂಪುಗಳಾಗಿವೆ. ಪರಸ್ಪರರು ಮುಖ ನೋಡದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ದುಷ್ಪರಿಣಾಮ ಉಂಟಾಗಲಿದೆ.

Advertisement

– ತಮ್ಮ ಜೊತೆ ಜೊತೆಗೆ ಪಕ್ಷ ಬಲವರ್ಧನೆಗೆ ಕೆಲಸ ಮಾಡಿರುವ ಹಿಂದುಳಿದ ವರ್ಗಗಳ ನಾಯಕರಾದ ಈಶ್ವರಪ್ಪ ಅವರನ್ನು ನಿರ್ಲಕ್ಷಿಸಿ ರಾಜ್ಯದಲ್ಲಿ ಬರಗಾಲ ಸಮೀಕ್ಷೆಗೆ ರಚಿಸಿದ ಪಕ್ಷದ ಮುಖಂಡರನ್ನು ಒಳಗೊಂಡ ತಂಡಗಳಿಂದ ಕೈಬಿಟ್ಟಿರುವುದು ಸರಿಯಲ್ಲ. ಇದು ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಪಕ್ಷದಲ್ಲಿ ಒಮ್ಮತವಿಲ್ಲ ಎಂಬ ಭಾವನೆ ಮೂಡಿಸಿದೆ.

-ಈಗಾಗಲೇ ಆಗಿರುವ ನೇಮಕಗಳನ್ನು ಪರಾಮರ್ಶಿಸಿ, ಸಂಘಟನೆಯಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ರಾಜ್ಯ, ಜಿಲ್ಲಾ ಸಮಿತಿಗಳಿಗೆ ನೇಮಿಸಬೇಕು. ಪಕ್ಷ ಸಂಘಟನೆಗೆ ಪದ್ಧತಿಯ ಪ್ರಕಾರ ಕೆಲಸ ಮಾಡುವಂತೆ ರೂಪ ನೀಡಬೇಕು.

– ಪಕ್ಷಕ್ಕಾಗಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಎಂ.ಬಿ. ನಂದೀಶ್‌ ಅವರಿಗೆ ನೀಡಿರುವ ನೋಟಿಸ್‌ ಹಿಂಪಡೆಯಬೇಕು. ಹೊನ್ನಾಳಿಯ ಮಂಡಲ ಅಧ್ಯಕ್ಷ ಹನುಮಂತಪ್ಪ ಅವರನ್ನು ಅಮಾನತು ಮಾಡಿರುವ ಹಾಗೂ ಇನ್ನಿತರ ಪಕ್ಷ ನಿಷ್ಠ ಕಾರ್ಯಕರ್ತರ ಮೇಲೆ ತೆಗೆದುಕೊಂಡಿರುವ ಕ್ರಮ ಕೈಬಿಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next