ಬೀದಿ ದೀಪದ ಬೆಳಕಲ್ಲಿ ಕಾಲ ಸರಿದದ್ದೇ ಗೊತ್ತಾಗಲಿಲ್ಲ ನೋಡು. ಹೆತ್ತವರ ಕನಸಿನ ಭಾರ ಹೊತ್ತು ನಾನು ಕಾಣದೂರಿಗೆ ಬಂದು ಬಿದ್ದೆ. ಊರು ಬಿಡುವ ದಿನ ಬಾಗಿಲ ಸಂಧಿಯಲಿ ನಿಂತು ನೀನು ಕಣ್ಣೀರಾಗಿದ್ದು ಯಾಕೆ?
ಬದುಕಿಗೆ ಎಷ್ಟೊಂದು ಬಣ್ಣಗಳು ಅಲ್ವಾ? ಕೇವಲ ಎರಡೇ ವರ್ಷಗಳು, ಬದುಕು ಎಷ್ಟೊಂದು ಬಣ್ಣ ಬಳಿದುಕೊಂಡಿದೆ! ಅದೊಂದು ಕಾಲವಿತ್ತು, ಮರಳಿ ಬಾರದಂತಹದ್ದು. ರಾತ್ರಿ ಊಟದ ನಂತರ ಬೀದಿಯಲಿ ಚಾಪೆ ಹಾಸಿಕೊಂಡು ನಮ್ಮಮ್ಮ – ನಿಮ್ಮಮ್ಮ ಹರಟೆ ಹೊಡೆಯುತ್ತಿದ್ದದ್ದು, ನಾವಿಬ್ಬರೂ ಬೀದಿ ದೀಪದ ಬೆಳಕಲ್ಲಿ ಆಟವಾಡುತ್ತಿದ್ದದ್ದು, ನೆನಪಿದೆಯಾ ನಿನಗೆ?
“ಏನೋ, ನನ್ನ ಮಗಳನ್ನ ಕಟ್ಕೊಳ್ತಿಯೇನೋ?’ ಎಂದು ನಿಮ್ಮಮ್ಮ ನನ್ನ ಕೆನ್ನೆ ಚಿವುಟಿದ್ದು, “ಅಯ್ಯೋ, ನಮ್ಮಂತವ್ರಿಗೆಲ್ಲ ಮಗಳ ಕೊಡ್ತೀರಾ ನೀವು?’ ಎಂದು ನಮ್ಮಮ್ಮ ಕೇಳಿದ್ದು… ಬೀದಿ ದೀಪದ ಬೆಳಕಲ್ಲಿ ಕಾಲ ಸರಿದದ್ದೇ ಗೊತ್ತಾಗಲಿಲ್ಲ ನೋಡು. ಹೆತ್ತವರ ಕನಸಿನ ಭಾರ ಹೊತ್ತು ನಾನು ಕಾಣದೂರಿಗೆ ಬಂದು ಬಿದ್ದೆ. ಊರು ಬಿಡುವ ದಿನ ಬಾಗಿಲ ಸಂಧಿಯಲಿ ನಿಂತು ನೀನು ಕಣ್ಣೀರಾಗಿದ್ದು ಯಾಕೆ? ಬಸ್ಸು ಕಣ್ಮರೆಯಾಗಿ, ಮೇಲೆ ಎದ್ದಿದ್ದ ಧೂಳು ಕ್ರಮೇಣ ಕಡಿಮೆಯಾದರೂ ನಿನ್ನ ದುಗುಡ ಕೆಳಗೆ ಇಳಿಯಲೇ ಇಲ್ಲವಲ್ಲಾ ಯಾಕೆ?
ಕಾಣದೂರಿನಿಂದ ಮರಳಿ ಬಂದವನಿಗೆ ನೀನು ಕಾಣಲೇ ಇಲ್ಲ ಕಣೆ. ಮತ್ಯಾರದೋ ಕನಸಿನರಮನೆಯ ಬೆಳಗಲು ಊರು ಬಿಟ್ಟಾಗಿತ್ತು. ನೀನು ಹಸಿರ ಚಪ್ಪರದಡಿ ಸಪ್ತಪದಿ ತುಳಿಯುವಾಗ ನನ್ನೆದೆ ಬಾಗಿಲಿನಿಂದ ಒಂದೊಂದು ಹೆಜ್ಜೆ ದೂರಾಗುತ್ತಿದ್ದೆ. ಅಲ್ಲಿ ಹೊಸ್ತಿಲ ಮೇಲಿನ ಪಡಿ ಹೊದೆಯುತ್ತಿದ್ದರೆ ಇಲ್ಲಿ ನನ್ನೆಲ್ಲಾ ಆಸೆಗಳು ಮಣ್ಣಲ್ಲಿ ಬಿದ್ದು ಹೊರಳಾಡುತ್ತಿದ್ದವು.
ನಿನ್ನನ್ನು ಸಂಪೂರ್ಣ ಮರೆಯುವ ಉದ್ದೇಶದಿಂದಲೇ ಮರಳಿ ಕಾಣದೂರಿಗೆ ಬಂದವನಿಗೆ ನೀನು ಮತ್ತೆ ಕಣ್ಣಿಗೆ ಬೀಳಬಾರದಿತ್ತು. ತಿಳಿನೀರ ಕೆಳಗಿನ ಮರಳ ಕೆಣಕಬಾರದಿತ್ತು. ಮನಸೀಗ ರಾಡಿಯಾಗಿದೆ. ನರಳುವ ಮನಸ ತಣಿಸುವ ಕೆಲಸ ಎಷ್ಟೊಂದು ಕಷ್ಟವೆಂಬ ಅರಿವಿಲ್ಲ ನಿನಗೆ. ಇದು ನಿನ್ನ ಊರು ಎಂದು ಗೊತ್ತಿದ್ದರೆ ನನ್ನ ನಕ್ಷೆಯಲ್ಲಿ ಈ ಊರನ್ನೇ ಅಳಿಸಿಹಾಕುತ್ತಿದ್ದೆ. ನಿನ್ನೆಡೆಗಿನ ದಾರಿಗಳಿಗೆ ಬಲವಂತದ ಬೇಲಿ ಬಿಗಿದು, ಬೆನ್ನು ತೋರಿಸಿ ಹೊರಟುಬಿಡುತ್ತಿದ್ದೆ. ದಯವಿಟ್ಟು ಕಣ್ಮರೆಯಾಗಿಬಿಡು. ಅರೆಸತ್ತ ಬದುಕ ಕಟ್ಟಿಕೊಳ್ಳಲು ಪರದಾಡುತ್ತಿದ್ದೇನೆ. ನೀನಿದ್ದ ಕೆಲವು ವರ್ಷಗಳು ನನ್ನ ಬದುಕನ್ನೇ ಬದಲಾಯಿಸಿಬಿಟ್ಟವು ಎಂಬ ಭ್ರಮೆಯಿಂದ ಹೊರಬರಲು ಹೆಣಗಾಡುತ್ತಿದ್ದೇನೆ. ಮತ್ತೆಂದೂ ಎದುರಾಗಬೇಡ. ನೀನು ಕಂಡಷ್ಟೂ ನೆನಪಿನ ಕುಣಿಕೆ ಬಿಗಿಯಾಗುತ್ತದೆ. ಹೇಗೋ ಉಸಿರಾಡುತ್ತೇನೆ… ಪ್ಲೀಸ್…
-ಲಕ್ಷ್ಮೀಸುತ ಸುರೇಶ್