ಬಾಗಲಕೋಟೆ: ಹಾಲು, ತರಕಾರಿ, ಕಿರಾಣಿ ಅಂಗಡಿಗಳ ಮುಂದೆ 3 ಅಡಿಗಳ ಅಂತರದಲ್ಲಿ ನಿಲ್ಲಲು ಮಾರ್ಕ್ ಹಾಕುವ ಕಾರ್ಯವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳ ಮುಂದೆ 3 ಅಡಿ ಅಂತರದಲ್ಲಿ ಮಾರ್ಕ್ ಹಾಕುವ ಮೂಲಕ ಹೊಸ ಪ್ರಯೋಗವನ್ನು ಕಂಡುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಪ್ರತಿಯೊಂದು ತಾಲೂಕು ಆಡಳಿತ ಹಾಗೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಯೋಗ ಅಳವಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಇದರ ಜತೆಗೆ ಗುಂಪು ಗುಂಪಾಗಿ ಜನರು ಸೇರದಂತೆ ನೋಡಿಕೊಳ್ಳಬೇಕಾಗಿದೆ. ಇದರಿಂದ ಕೋವಿಡ್ 19 ಸೋಂಕು ಹರಡದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜನದಟ್ಟನೆಯಿಂದ ದೂರವಿರುವಂತೆ ಮಾಡುವುದೇ ಕೋವಿಡ್ 19 ಸೋಂಕು ಹರಡುವದನ್ನು ತಡೆಗಟ್ಟಲು ಸಾಧ್ಯವೆಂಬುದನ್ನು ಮನಗಂಡು ಕೇಂದ್ರ ಮತ್ತು ರಾಜ್ಯ ಸರಕಾರ ಲಾಕ್‌ಡೌನ್ ಮಾಡಿದ್ದು, ಇದನ್ನು ಎಲ್ಲರೂ ಪಾಲಿಸಬೇಕು. ಅಂಗಡಿ, ಮಳಿಗೆಗಳು, ಹಾಲು, ತರಕಾರಿ ಮಳಿಗೆ ಹೀಗೆ ಪ್ರತಿ ಮಳಿಗೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವದನ್ನು ತಪ್ಪಿಸಲು ಸಾದ್ಯವಾಗುತ್ತದೆ. ಜನರಲ್ಲಿ ಯಾವುದೇ ರೀತಿಯ ಭಯ ಬೇಡ ಎಲ್ಲರೂ ಒಗ್ಗಟ್ಟಾಗಿ ಕೋವಿಡ್ 19 ವಿರುದ್ಧ ಹೋರಾಡೋಣ ಎಂದು ಎಸ್‌ಪಿ ಕರೆ ನೀಡಿದರು.
ಚೊಳಚಗುಡ್ಡ ಗ್ರಾಪಂ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ಸದರಿಯಲ್ಲಿ ನಿಂತು ನೀರು ತೆಗೆದುಕೊಂಡು ಹೋಗಲು ಜನರಿಗೆ ಒಂದು ಚಿಕ್ಕ ವ್ಯವಸ್ಥೆ ಮಾಡಲಾಯಿತು.