Advertisement

ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ನನ್ನ ಹೇಳಿಕೆ ತಿರುಚಬೇಡಿ

11:19 AM Oct 29, 2018 | |

ಕನ್ನಡ ಚಿತ್ರರಂಗದಲ್ಲಿ “ಮಿ ಟೂ’ ವೇದಿಕೆಯಡಿ ಮೊದಲು ಧ್ವನಿ ಎತ್ತಿದ್ದು ನಟಿ ಸಂಗೀತಾ ಭಟ್‌. ಸುಮಾರು 15 ದಿನಗಳ ಹಿಂದೆ ಸಂಗೀತಾ ಬಟ್‌, ಚಿತ್ರರಂಗದ ತನ್ನ ಹತ್ತು ವರ್ಷದ ಕೆರಿಯರ್‌ನಲ್ಲಿ ಅನುಭವಿಸಿದ ಕೆಲವು ನೋವುಗಳನ್ನು  ಫೇಸ್‌ಬುಕ್‌ನಲ್ಲಿ ಹೇಳಿಕೊಳ್ಳುವ ಮೂಲಕ ದೊಡ್ಡ ಸಂಚಲಕ್ಕೆ ನಾಂದಿಯಾಡಿದ್ದರು. ಹಾಗಂತ ಸಂಗೀತಾ ಯಾವುದೇ ನಟ, ನಿರ್ದೇಶಕ, ನಿರ್ಮಾಪಕನ ಹೆಸರು ಹೇಳದೇ ಕೇವಲ ಕೆಟ್ಟ ಅನುಭವವನ್ನಷ್ಟೇ ಹಂಚಿಕೊಂಡಿದ್ದರು. ಆದರೆ ಬೇರೆ ರೂಪ ಪಡೆದುಕೊಂಡಿದ್ದು, ಸ್ವತಃ ಸಂಗೀತಾ ಭಟ್‌ ಅದರಿಂದ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.

Advertisement

ಸೋಶಿಯಲ್‌ ಮೀಡಿಯಾಗಳಲ್ಲಿ ಅನೇಕರು, ಸಂಗೀತಾ ಭಟ್‌ ಫೇಸ್‌ಬುಕ್‌ ಸ್ಟೇಟಸ್‌ ಇಟ್ಟುಕೊಂಡು ಯಾರ್ಯಾರೋ ನಟ, ನಿರ್ದೇಶಕರ ಹೆಸರುಗಳನ್ನು ಊಹಿಸಿಕೊಂಡು ಸುದ್ದಿ ಮಾಡುತ್ತಿದ್ದಾರೆ. ಇದು ಸಂಗೀತಾ ಭಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೇ, “ಮಿ ಟೂ’ ವೇದಿಕೆಯಡಿ ಸಂಗೀತಾ ತಮಗಾದ ಕೆಟ್ಟ ಅನುಭವ ಹಂಚಿಕೊಂಡ ದಿನದಿಂದ, ಆಕೆ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಫೋಟೋ ಹಾಕಿದರೂ, ಅದಕ್ಕೆ ತೀರಾ ಕೆಟ್ಟ ಕಾಮೆಂಟ್‌ ಹಾಕಲಾಗುತ್ತಿದೆಯಂತೆ.

ಇದರಿಂದ ನೊಂದಿರುವ ಸಂಗೀತಾ ಭಟ್‌, ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ, “ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ನಾನು ಯಾವುದೇ ನಟ, ನಿರ್ದೇಶಕ, ನಿರ್ಮಾಪಕನ ಹೆಸರನ್ನು ಹೇಳಿಲ್ಲ. ನನಗೆ ತೊಂದರೆ ಕೊಡಬೇಡಿ’ ಎಂದು ಕಣ್ಣೀರಿಟ್ಟಿದ್ದಾರೆ. ಜೊತೆಗೆ, “ನನಗೆ ಯಾರ ಸಹಾಯವೂ ಬೇಡ, ನಾನು ಕೂಡಾ ಯಾರನ್ನೂ ಬೆಂಬಲಿಸುತ್ತಿಲ್ಲ, ಯಾವುದೇ ಕ್ಯಾಂಪೇನ್‌ನಲ್ಲೂ ಇಲ್ಲ’ ಎಂದು ನೇರವಾಗಿ ಹೇಳಿಕೊಂಡಿದ್ದಾರೆ.

ಸಂಗೀತಾ ಭಟ್‌ ವಿಡಿಯೋದಲ್ಲಿ ಏನು ಹೇಳಿದ್ದಾರೆಂಬುದರ ಪೂರ್ಣಪಾಠ ಇಲ್ಲಿದೆ: “ಕೆಲವು ವಾಹಿನಿಗಳಲ್ಲಿ, ಸೋಶಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ನಾನು ನಟ, ನಿರ್ದೇಶಕರ ಹೆಸರನ್ನು ಹೇಳಿದ್ದೇನೆಂಬಂತೆ ಸ್ಟೋರಿ ಮಾಡಲಾಗುತ್ತಿದೆ. ನಾನು ಯಾವ ನಟನ ವಿರುದ್ಧವೂ ಆರೋಪ ಮಾಡಿಲ್ಲ. ಚಿತ್ರರಂಗದಲ್ಲಿ ನಾನು ಪಟ್ಟಂತಹ ಕಷ್ಟಗಳನ್ನು ನನ್ನ ಸ್ನೇಹಿತರಲ್ಲಿ ಹೇಳಿಕೊಂಡಿದ್ದೆ ಅಷ್ಟೇ. ನಾನು ನನ್ನ ಪೋಸ್ಟ್‌ಗಳಲ್ಲಿ ಯಾವ ನಟನ, ನಿರ್ದೇಶಕನ, ನಿರ್ಮಾಪಕನ ಬಗ್ಗೆ ಯಾವುದೇ ಆರೋಪ ಮಾಡಿಲ್ಲ.

ಅವರಿಗೆ ತೊಂದರೆಯಾಗುವ ರೀತಿಯಾಗಲೀ ಅಥವಾ ಅವರ ಫೇಮ್‌ನ ಡಿಫೇಮ್‌ ಮಾಡಲು ನಾನು ಆ ಪೋಸ್ಟ್‌ ಹಾಕಿಲ್ಲ ಎಂದು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. ಆದರೆ, ಆ ಪೋಸ್ಟ್‌ ಇಟ್ಟುಕೊಂಡು ಏನೇನೋ ಬೆಳವಣಿಗೆಗಳು ನಡೆಯುತ್ತಿವೆ. ಚಿತ್ರರಂಗದಲ್ಲಿ ನಾನು 10 ವರ್ಷ ತುಂಬಾ ಕಷ್ಟಪಟ್ಟೆ. ಈಗ ಒಂದು ವರ್ಷದಿಂದ ಚಿತ್ರರಂಗದಿಂದ ದೂರವಿದ್ದೇನೆ. ಇನ್ನಾದ್ರೂ ರಿಯಲ್‌ ಜೀವನ ನೋಡಬೇಕೆಂದು ಚಿತ್ರರಂಗ ತೊರೆದಿದ್ದೇನೆ. ಹೀಗಿರುವಾಗ ನನಗೆ ಪ್ರಚಾರದ ಅಗತ್ಯವಿಲ್ಲ. ನಾನು ಪ್ರಚಾರಕ್ಕಾಗಿ ಆ ಪೋಸ್ಟ್‌ ಹಾಕಿಲ್ಲ.

Advertisement

ಆ ಪೋಸ್ಟ್‌ ಹಾಕಿದ ಮೇಲೆ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದೇನೆ. ನನ್ನ ಜೀವನವನ್ನು ನಾನು ಬದುಕಬೇಕೆಂದು ಆಸೆ ಪಡ್ತಾ ಇದ್ದೀನಿ. ಯಾಕೆ ನೀವೆಲ್ಲಾ ಅದಕ್ಕೆ ಬಿಡ್ತಾ ಇಲ್ಲ. ನಾನು ಒಂದು ಫೊಟೋ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ರೆ, ತುಂಬಾ ಅಶ್ಲೀಲವಾಗಿ, ಒಂದು ಹೆಣ್ಣಿಗೆ ಕೇಳಬಾರದಂತಹ ಮೆಸೇಜ್‌ಗಳನ್ನು ಕಳಿಸ್ತೀರಾ. ಯಾಕೆ, ನಾನು ಯಾರ ಫ್ಯಾಮಿಲಿ ನೋವು ಮಾಡೋ ತರಹ ಪೋಸ್ಟ್‌ ಮಾಡಿದೆಂತ. ನಾನು ಮನುಷ್ಯಳು. ಕಾಮನ್‌ ಮ್ಯಾನ್‌ ಆಗಿ ಬದುಕಬೇಕೆಂದು 10 ವರ್ಷ ಆದ ಮೇಲೆ ಡಿಸೈಡ್‌ ಮಾಡಿದ್ದೀನಿ.

ನಾನು ನನ್ನ ಪೋಸ್ಟ್‌ನಲ್ಲಿ ಯಾರ ಮೇಲೂ ಆಪಾದನೆ ಮಾಡಿಲ್ಲ. ಎಷ್ಟೋ ಜನ ಇಂಡಸ್ಟ್ರಿಯವರು ನನ್ನ ಸ್ಟೋರಿನ ಇಟ್ಕೊಂಡು ಅವರ ವೆಪನ್‌ ಆಗಿ ಬಳಸುತ್ತಿದ್ದಾರೆ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನನಗೆ ಪ್ರಚಾರ ಬೇಕಿಲ್ಲ. ಖುಷಿಯಾಗಿರಲು ನಿರ್ಧರಿಸಿದ್ದೇನೆ. ಥೆರಪಿ ಶುರು ಮಾಡಿದ್ದೇನೆ. ಅನೇಕರು ಫೇಸ್‌ಬುಕ್‌ಗಳಲ್ಲಿ ನನ್ನ ಸ್ಟೇಟ್‌ಮೆಂಟ್‌ ಬಳಸಿ ನಿಮ್ಮ ಮೆಂಡ್‌ಗೆ ಬಂದ ಹೆಸರನ್ನು ಬಳಸಿ, ಅದನ್ನು ಕನೆಕ್ಟ್ ಮಾಡುತ್ತಿದ್ದಾರೆ. ಅದನ್ನು ಮಾಡಬೇಡಿ. ಇದರಿಂದ ನನಗೆ ತೊಂದರೆಯಾಗುತ್ತಿದೆ. ಜೊತೆಗೆ ಇದರಿಂದ ಎಷ್ಟೋ ಜನರ ಹೆಸರು ಕೂಡಾ ಹಾಳಾಗುತ್ತದೆ. 

ನನಗೆ ಆದ ನೋವನ್ನು ಮತ್ತೆ ಹೋಗಿ ಸರಿ ಮಾಡೋಕ್ಕಾಗಲ್ಲ. ಇಲ್ಲಿಗೆ ಬಿಟ್ಟು ಬಿಡಿ. ನನ್ನ ಹೆಸರನ್ನು ಎಳೆದು ತರಬೇಡಿ. ಜೊತೆಗೆ ಯಾರ ಹೆಸರನ್ನು ಕೇಳಬೇಡಿ. ನೀವು ಹೆಸರು ಕೇಳ್ಳೋದು ನಿಮ್ಮ ಎಂಟರ್‌ಟೈನ್‌ಮೆಂಟ್‌ಗೊಸ್ಕರ, ನನಗೆ ಸಹಾಯ ಮಾಡಲು ಅಲ್ಲ.  ನಾನು ಯಾರಲ್ಲೂ ಸಹಾಯ ಕೇಳಲಿ. ನಾನು, ನನ್ನ ಗಂಡ, ನನ್ನ ಫ್ಯಾಮಿಲಿ ಇಷ್ಟು ಜನ ಅಷ್ಟೇ ನಿಂತಿದ್ದೀವಿ. ನಮಗೆ ಫೈಟ್‌ ಮಾಡುವ, ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ. ನಾವು ಯಾವ ಪ್ರತಿಭಟನೆಯಲ್ಲಾಗಲೀ, ಕ್ಯಾಂಪೇನ್‌ನಲ್ಲಾಗಲೀ ಇಲ್ಲ. ನನಗೆ ಯಾರ ಸಪೋರ್ಟ್‌ ಬೇಡ, ಅದರ ಅಗತ್ಯವೂ ಇಲ್ಲ. ಇದನ್ನು ಇಲ್ಲಿಗೆ ಬಿಟ್ಟುಬಿಡಿ …

* ನಾನು ಯಾವುದೇ ನಟ, ನಿರ್ದೇಶಕ, ನಿರ್ಮಾಪಕನ ಹೆಸರನ್ನು ಹೇಳಿಲ್ಲ. ನನಗೆ ತೊಂದರೆ ಕೊಡಬೇಡಿ.
* ನಮಗೆ ಫೈಟ್‌ ಮಾಡುವ, ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ.
* ಇಂಡಸ್ಟ್ರಿಯವರು ನನ್ನ ಸ್ಟೋರಿನ ಇಟ್ಕೊಂಡು ಅವರ ವೆಪನ್‌ ಆಗಿ ಬಳಸುತ್ತಿದ್ದಾರೆ.
* ನಾವು ಯಾವ ಪ್ರತಿಭಟನೆಯಲ್ಲಾಗಲೀ, ಕ್ಯಾಂಪೇನ್‌ನಲ್ಲಾಗಲೀ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next