ಪ್ರೀತಿ ಎಂದರೆ ಮುಜುಗರ, ಪ್ರೀತಿ ಎಂದರೆ ಭಯ, ಪ್ರೀತಿ ಎಂದರೆ ಹೇಳಿಕೊಳ್ಳಲಾಗದ ಮನಸ್ಸಿನ ಮುದ್ದು ಭಾವನೆ. ನಿನ್ನ ನೋಡುವುದಕ್ಕಿಂತ ಮುನ್ನ ನಾನು ಹೀಗೆ ಇರಲಿಲ್ಲ. ಹಾಗಂತ ಸೈಲೆಂಟ್ ಅಲ್ಲ, ವೈಲೆಂಟೂ ಅಲ್ಲ. ಮಲೆನಾಡಿನ ಮುದ್ದು ಹುಡುಗ ಅಲ್ವಾ, ಸ್ವಲ್ಪ ನಾಚಿಕೆ ಸ್ವಭಾವ ಅಷ್ಟೆ. ಅದು ನಿನ್ನ ಬಳಿ ಮಾತ್ರ.ಯಾರನ್ನೂ ಪ್ರೀತಿ ಮಾಡಲೇ ಬಾರದು ಎಂದು ನಿರ್ಧರಿಸಿ, ನಾನಾಯಿತು ನನ್ನ ಪಾಡಾಯಿತು ಅಂತ ಇದ್ದರೂ, ಅದ್ಯಾವುದೋ ಸಮಯಕ್ಕೆ ನನ್ನೊಳಗೂ ಪ್ರೀತಿಯ ಹೂ ಅರಳಿಯೇ ಬಿಟ್ಟಿತು !
ಮೊದಲ ಬಾರಿಗೆ ನಿನ್ನ ನೋಡಿದಾಗ ಯಾರಪ್ಪ ಇದು, ಇವಳು ಹುಡುಗಿ ನಾ? ಅಂತ ಅನ್ನಿಸಿದ್ದು ಮಾತ್ರ ನಿಜ. ಹುಡುಗರೂ ಎನ್ನುವ ಮುಜುಗರ ಇಲ್ಲಾ, ಟಾಂಮ್ ಬಾಯ್ ಅಂತ ನಿನ್ನ ನೋಡಿದ ಮೇಲೆ ಗೊತ್ತಾಯ್ತು. ತರಗತಿಗೆ ಮೊದಲ ದಿನ ಗುಂಗರು ಕೂದಲು ಬಿಟ್ಟುಕೊಂಡು ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಶರ್ಟ್ ಹಾಕಿಕೊಂಡು ಬಂದು, ಮೊದಲ ಸಾಲಿನ ಮೂರನೇ ಸೀಟಿನಲ್ಲಿದ್ದವನನ್ನು ಎಬ್ಬಿಸಿದ ಶೈಲಿಯಲ್ಲೇ ನೀನು ಕೂತಾಗಲೆ ಆದ್ಯಾಕೋ ಸ್ವಲ್ಪ ಇಷ್ಟವಾದೆ. ನೇರ, ದಿಟ್ಟ, ನಿರಂತರ ಎನ್ನುವ ಹಾಗೆ ಸ್ವಲ್ಪನೂ ಕಲ್ಮಶ ವಿಲ್ಲದ ನೇರ ಮಾತು. ಹುಡುಗರು ಎನ್ನುವ ಮುಲಾಜಿಲ್ಲದೆ, ಎಲ್ಲರೂ ನನ್ನವರೇ ಎಂದು ನಡೆದುಕೊಳ್ಳುವ ನಿನ್ನ ರೀತಿ, ನಿನ್ನ ನಾಯಕತ್ವದ ಗುಣ. ನನಗೂ ನಿನ್ನಂಥ ಹುಡುಗಿಯ ಮೇಲೆ ಪ್ರೀತಿ ಹುಟ್ಟಬಹುದು ಎಂದು ಕನಸು ಅಲ್ಲ, ಊಹೆಯನ್ನೂ ಮಾಡಿರಲಿಲ್ಲ.
ತರಗತಿಯಲ್ಲಿ ಎಲ್ಲರನ್ನೂ ಸೇರಿಸಿ ಕೊಂಡು ತರ್ಲೆ ಮಾಡೋದು, ಗೆಳೆಯರ ರಾಯಲ್ ಎನ್ಫಿಲ್ಡ್ ಬೈಕ್‌ನಲ್ಲಿ ಸವಾರಿ ಮಾಡುವ ರೀತಿ, ಕ್ಲಾಸ್ ಬಂಕ್ ಮಾಡಿ ಒಬ್ಬಳೇ ಟ್ರೆಕ್ಕಿಂಗ್ ಹೋಗೋದು, ಹುಣ್ಣಿಮೆಗೊ, ಅಮಾವಾಸ್ಯೆಗೋ ಒಮ್ಮೆ ಇದ್ದಕ್ಕಿದ್ದಂತೆ ಚೂಡಿದಾರ ಧರಿಸಿಕೊಂಡು ತರಗತಿಗೆ ಎಂಟ್ರಿ ಕೊಡೋದು, ಇದ್ದಕ್ಕಿದ್ದಂತೆ ಲೈಬ್ರರಿಗೆ ಬಂದು ಯಾವುದೋ ಪುಸ್ತಕ ಓದುತ್ತಾ ಕೂರುವುದು, ಒಬ್ಬಳೇ ಗೊಲ್ಗಪ್ಪ ತಿನ್ನುತ್ತಾ ನಿಂತಿರುವುದು, ಜೊತೆಗಿರುವ ಸ್ನೇಹಿತರನ್ನು ಮತನಾಡಿಸಿ ನನ್ನನ್ನು ನೋಡದಂತೆ ಹೋಗುವುದು. ಅಬ್ಟಾ, ನಿನ್ನ ಬಗ್ಗೆ ಹೇಳುತ್ತಾ ಕುಳಿತರೆ ಪದಗಳೇ ಸಾಕಾಗುವುದಿಲ್ಲ. ಆದರೂ ಹುಡುಗಿಯಾಗಿ, ಹುಡುಗರ ಥರ ವರ್ತೀಸಿದರೂ ನಿನ್ನ ಗುಣ ನಡವಳಿಕೆ ಇಷ್ಟ,
ಅದ್ಯಾಕೋ ಗೊತ್ತಿಲ್ಲ, ನಿನ್ನ ಮೇಲೆ ಪ್ರೀತಿ ಆಗಿದೆ. ನಾನು ಮಲೆನಾಡಿನ ಹುಡುಗ ಸಹ್ಯಾದ್ರಿಯ ತಪ್ಪಲಲ್ಲಿ ಹುಟ್ಟಿ ಬೆಳೆದ ನನಗೆ ನಿನ್ನ ಮೊದಲ ದಿನ ನೋಡಿದಾಗ ಹುಡುಗಿಯರು ಈ ರೀತಿಯು ಇರುತ್ತಾರಾ ಎಂದು ದಂಗಾಗಿ ಎದೆ ಹೊಡೆದು ಕೊಂಡಿದ್ದು ಮಾತ್ರ ನಿಜ. ತರಗತಿಯಲ್ಲಿ ಹಿಂದೆ ತಿರುಗಿ ಯಾರನ್ನೋ ನೋಡಿ ನಗುತ್ತಿದ್ದರೆ, ನೀನು ನನ್ನನ್ನೇ ನೋಡಿ ನಕ್ಕಂತಾಗುತ್ತಿತ್ತು. ಯಾರೋ ಒಬ್ಬ ಹುಚ್ಚು ಹುಡುಗ ನಿನ್ನನ್ನು ಇಷ್ಟು ಪ್ರೀತಿಸುತ್ತಾನೆ ಎಂದು ತಿಳಿದರೆ, ನೀನು ನಿಜವಾಗಲೂ ನಂಬುವುದಿಲ್ಲ.
ಕ್ಯಾಂಪಸ್‌ನಲ್ಲಿ ನೀನು ಒಬ್ಬಳೇ ಕಿವಿಗೆ ಇಯರ್ ಫೋನ್ ಹಾಕಿಕೊಂಡು, ನೆಡೆದುಕೊಂಡು ಬರ್ತೀಯಲ್ಲಾ, ಅದನ್ನ ನೋಡೋದೇ ಚೆಂದ. ಗಟ್ಟಿ ಧೈರ್ಯ ಮಾಡಿ ಪ್ರೀತಿಯನ್ನು ವ್ಯಕ್ತಪಡಿಸುವ ದಿನ ಹತ್ತಿರ ಬರುತ್ತಿದೆ. ಎದೆಬಡಿತ ಜೋರಾಗುತ್ತಿದೆ. ತಯಾರಿ ಭರದಿಂದ ಸಾಗುತ್ತಿದೆ. ಬಡಪಾಯಿ ಹುಡುಗನ ನಿದ್ದೆ ಕೆಡಿಸಿದ್ದೀಯಾ. ಈ ತಪ್ಪಿಗೆ ನನ್ನ ಪ್ರೀತಿಯನ್ನು ಒಪ್ಪಿಕೋ ಪ್ಲೀಸ್…
ಭಾಗ್ಯಶ್ರೀ ಎಸ್, ಶಿವಮೊಗ್ಗ