ಆಟೋ ಶಂಕರ ಮಧ್ಯಮ ಕುಟುಂಬದ ವ್ಯಕ್ತಿ. ಹೆಸರೇ ಹೇಳುವಂತೆ ವೃತ್ತಿಯಲ್ಲಿ ಆಟೋ ರಿಕ್ಷಾ ಡ್ರೈವರ್ ಆಗಿರುವ ಶಂಕರ ಸಾಲ ಮಾಡಿ ತೆಗೆದುಕೊಂಡ ಆಟೋ ರಿಕ್ಷಾವನ್ನು ಓಡಿಸುತ್ತ, ಮನೆ-ಸಂಸಾರ ಅಂಥ ಬದುಕು ಕಟ್ಟಿಕೊಂಡಿರುವಾತ. ಮದುವೆಯಾಗಿ ವರ್ಷಗಳಾಗಿದ್ದರೂ, ಇನ್ನು ಮಕ್ಕಳ ಭಾಗ್ಯ ಕಾಣದ ಶಂಕರನ ಮನೆಗೆ ಒಮ್ಮೆ ಎಲ್ಲಿಂದಲೋ, ತಪ್ಪಿಸಿಕೊಂಡು ಬಂದ ನಾಯಿ ಮರಿಯೊಂದು ಸೇರಿಕೊಳ್ಳುತ್ತದೆ.
ಹೇಗಾದರೂ ಮಾಡಿ ಈ ನಾಯಿ ಮರಿಯನ್ನು ಎಲ್ಲಿದರೂ ಸಾಗಿ ಹಾಕಬೇಕೆಂದು ಆಟೋ ಶಂಕರ ಎಷ್ಟೇ ಪ್ರಯತ್ನ ಪಟ್ಟರೂ, ಆ ನಾಯಿ ಮಾತ್ರ ಅವನನ್ನ, ಅವನ ಮನೆಯನ್ನ ಬಿಟ್ಟು ಕದಲುವುದಿಲ್ಲ. ನಾಯಿಮರಿಯನ್ನು ದೂರ ಕಳುಹಿಸಿವ ಪ್ರಯತ್ನದಲ್ಲೆ, ನಾಯಿಮರಿ ಶಂಕರ ಹತ್ತಿರವಾಗುತ್ತಾ ಹೋಗುತ್ತಾರೆ. ಕೊನೆಗೆ ಬೇಡವೆಂದರೂ, ಬೆಳೆದು ದೊಡ್ಡದಾದ ನಾಯಿ ಮತ್ತು ಶಂಕರನ್ನು ದೂರ ಮಾಡುವಂಥ ಒಂದಷ್ಟು ಸನ್ನಿವೇಶಗಳು ಬರುತ್ತ ಹೋಗುತ್ತದೆ.
ಕೊನೆಗೆ ಅಂತಿಮವಾಗಿ ನಾಯಿ (ಗುಂಡ) ಮತ್ತು ಶಂಕರ ಏನಾಗುತ್ತಾರೆ ಅನ್ನೋದು “ನಾನು ಮತ್ತು ಗುಂಡ’ ಚಿತ್ರದ ಕಥಾಹಂದರ. ಚಿತ್ರದ ಹೆಸರೇ ಹೇಳುವಂತೆ ನಾನು (ಶಂಕರ) ಮತ್ತು ಗುಂಡ (ನಾಯಿ) ನಡುವೆ ನಡೆಯುವ ಭಾವನಾತ್ಮಕ ಕಥೆ. ಆ ಕಥೆ ಏನೇನು ತಿರುವುಗಳನ್ನು ಪಡೆದುಕೊಂಡು, ಹೇಗೆ ಸಾಗುತ್ತದೆ ಅನ್ನೋದನ್ನ ಥಿಯೇಟರ್‌ನಲ್ಲೇ ನೋಡಬೇಕು. ಕನ್ನಡ ಪ್ರೇಕ್ಷಕರಿಗಾಗಲಿ, ಕನ್ನಡ ಚಿತ್ರರಂಗಕ್ಕಾಗಲಿ ಇಂಥ ಚಿತ್ರಗಳು ಹೊಸದೇನಲ್ಲ.
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ತೋರಿಸುವ, ಈಗಾಗಲೇ ಬಂದು ಹೋಗಿರುವ ಹತ್ತಾರು ಚಿತ್ರಗಳ ಸಾಲಿಗೆ “ನಾನು ಮತ್ತು ಗುಂಡ’ ಹೊಸ ಸೇರ್ಪಡೆ ಎನ್ನಲು ಅಡ್ಡಿಯಿಲ್ಲ. ಇಡೀ ಚಿತ್ರದ ಕಥೆ ಗುಂಡನ (ನಾಯಿಯ) ಸುತ್ತ ಸುತ್ತುವುದರಿಂದ, ಇಲ್ಲಿ ಬೇರೆ ಕಲಾವಿದರಿಗಿಂತ ಗುಂಡನ ಅಭಿನಯವೇ ಹೈಲೈಟ್. ಚಿತ್ರದ ನಿರ್ದೇಶಕರು ಏನು ನಿರೀಕ್ಷಿಸಿದ್ದರೋ, ಅದರಂತೆ ಗುಂಡ ತೆರೆಮೇಲೆ ಕಾಣಿಸಿಕೊಂಡಿದೆ.
ನಿರ್ದೇಶಕರು ಗುಂಡನಿಗೆ ಹೆಚ್ಚಿಗೆ ಮಹತ್ವ ಕೊಟ್ಟಿದ್ದರಿಂದಲೋ, ಏನೋ.., ಗುಂಡನನ್ನು ಹೊರತುಪಡಿಸಿ ಇತರ ಕಲಾವಿದರ ಅಭಿನಯ ಅಷ್ಟಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಗುಂಡ ಚುರುಕುತನದಿಂದ ತೆರೆಮೇಲೆ ಓಡಾಡಿ ಕೊಂಡಿದ್ದರೂ, ಚಿತ್ರದ ಮೊದಲರ್ಧ ಪ್ರಯಾಸ ಎನಿಸುತ್ತದೆ. ದ್ವಿತೀಯರ್ಧ ಏನಾದರೂ ಅನಿರೀಕ್ಷಿತ ಸಂಗತಿಗಳು ಎದುರಾಗ ಬಹುದೆಂದುಕೊಂಡರೂ, ಅಂಥದ್ದೇನೂ ಚಿತ್ರದಲ್ಲಿ ಘಟಿಸುವುದಿಲ್ಲ.
ಚಿತ್ರದ ಛಾಯಾಗ್ರಹಣ ಗುಂಡ ಮತ್ತು ಶಂಕರನ ಸನ್ನಿವೇಶವನ್ನು ಚೆನ್ನಾಗಿ ಕಟ್ಟಿಕೊಟ್ಟರು, ಅದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮನಮುಟ್ಟುವಂಥ ಸಂಭಾಷಣೆ ಚಿತ್ರದಲ್ಲಿಲ್ಲ. ಚಿತ್ರದ ನಿರೂಪಣೆ ಅಲ್ಲಲ್ಲಿ ಹಿಡಿತಕಳೆದುಕೊಂಡಂತಿದೆ. ಸಂಕಲನ ಮತ್ತು ಹಿನ್ನೆಲೆ ಸಂಗೀತದ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಕೊಟ್ಟಿದ್ದರೆ, “ನಾನು ಮತ್ತು ಗುಂಡ’ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು. ಒಟ್ಟಾರೆ ಅತಿಯಾದ ನಿರೀಕ್ಷೆಗಳಿಲ್ಲದೆ, ಯಾವುದೇ ತರ್ಕವನ್ನು ಹುಡುಕದೆ, ವಾರಾಂತ್ಯದಲ್ಲಿ ತೆರೆಮೇಲೆ “ಗುಂಡ’ ಆಟವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
ಚಿತ್ರ: ನಾನು ಮತ್ತು ಗುಂಡ
ನಿರ್ಮಾಣ: ರಘು ಹಾಸನ್
ನಿರ್ದೇಶನ: ಶ್ರೀನಿವಾಸ ತಿಮ್ಮಯ್ಯ
ತಾರಾಗಣ: ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತಾ ಹೊರನಾಡ್, ಗೋವಿಂದೇ ಗೌಡ, ಜಿಮ್ ರವಿ, ಮತ್ತಿತರರು
* ಜಿ.ಎಸ್ ಕಾರ್ತಿಕ ಸುಧನ್