Advertisement

ನುಡಿಸಿದ್ದನ್ನೇ ಮತ್ತೆ ಮತ್ತೆ ನುಡಿಸುವುದು!

05:01 PM Jan 14, 2018 | |

ರಾಕ್‌ಸ್ಟಾರ್‌ ಎಂಬ ಹಿಂದೀ ಚಲನಚಿತ್ರವೊಂದಿದೆ. ರಣಬೀರ್‌ ಕಪೂರ್‌ ಅಭಿನಯದ ಈ ಚಲನಚಿತ್ರಕ್ಕೆ ಎ. ಆರ್‌. ರೆಹಮಾನ್‌ ಸಂಗೀತ. ರೆಹಮಾನ್‌ ಸಂಗೀತವನ್ನು ಪ್ರೀತಿಸುವ ಎಲ್ಲರೂ ಈ ಚಲನಚಿತ್ರವನ್ನು ಹಲವಾರು ಕಾರಣಕ್ಕಾಗಿ ಪ್ರೀತಿಸುತ್ತಾರೆ. ಸಂಗೀತದ ವೈವಿಧ್ಯ ಮತ್ತು ರಣಬೀರ್‌ ಕಪೂರನ ಮನೋಜ್ಞ ಅಭಿನಯಕ್ಕಾಗಿ ನನ್ನಂಥ ಮನಃಸ್ಥಿತಿಯ ನನ್ನ ಬಹಳ ಗೆಳೆಯರಿಗೆ ಈ ಚಲನಚಿತ್ರವು ಅಭ್ಯಾಸಯೋಗ್ಯವಾದಂಥಾದ್ದು.

Advertisement

ಈ ಚಲನಚಿತ್ರದ ಒಂದು ದೃಶ್ಯವು ಹೀಗಿದೆ: ಜೋರ್ಡಾನ್‌ ಎಂಬ ರಾಕ್‌ಸ್ಟಾರ್‌ ತಾನು ರಾಕ್‌ಸ್ಟಾರ್‌ ಆಗುವ ಹಂತದಲ್ಲಿ ರೆಕಾರ್ಡಿಂಗ್‌ ಸ್ಟುಡಿಯೋ ಒಂದರಲ್ಲಿ ವಯಸ್ಸಾದ ಶಹನಾಯಿ ವಾದಕರೊಬ್ಬರನ್ನು ಭೇಟಿಯಾಗುತ್ತಾನೆ. ಪರಸ್ಪರರ ಮೊದಲ ಪರಿಚಯದ ಆ ಭೇಟಿಯಲ್ಲಿ ಜೋರ್ಡಾನ್‌ ಆ ಶಹನಾಯಿ ವಾದಕರನ್ನು ಹೀಗೆ ಕೇಳುತ್ತಾನೆ. “”ನೀವು ನುಡಿಸಿದ್ದನ್ನೇ ಮತ್ತೆ ಮತ್ತೆ ಹೇಗೆ ನುಡಿಸ್ತೀರಿ ಮತ್ತು ಯಾಕೆ ನುಡಿಸ್ತೀರಿ?” ಆ ಪ್ರಶ್ನೆಗೆ ಆ ಶಹನಾಯಿ ವಾದಕರು ಯಾವ ಉತ್ತರವನ್ನೂ ಕೊಡುವುದಿಲ್ಲ. ಬದಲಾಗಿ ಹಸನಾದ ಒಂದು ನಗುವನ್ನು ಚೆಲ್ಲಿ ಹೊರಡುತ್ತಾರೆ. ಜನಾರ್ದನ ಎಂಬ ಹಾಡುವುದನ್ನು ಬಲ್ಲ ಆ ಅದೇ ಅತೀ ಸಾಧಾರಣ ಹುಡುಗನೊಬ್ಬ ಜಗದ್ವಿಖ್ಯಾತ ಸಂಗೀತಗಾರನಾಗುವ ಹೊತ್ತಿಗೆ ಬರುವ ಯಾವುದೋ ದೃಶ್ಯದಲ್ಲಿ ಅದೇ ಶಹನಾಯಿ ವಾದಕರೊಂದಿಗೆ ಗಿಟಾರ್‌ ಹಿಡಿದ ಜೋರ್ಡಾನ್‌ ಜುಗಲ್ಬಂದಿ ನುಡಿಸುವ ದೃಶ್ಯವು ಮುಂದೆ ಬರುತ್ತದೆ. ದ ಡಿಕೊಟಮಿ ಆಫ್ ಫೇಮ… ಎಂಬ ಹೆಸರಿನ ಆ ವಾದ್ಯ ಸಂಗೀತವು ಅದೆಷ್ಟು ಆಕರ್ಷಕವಾಗಿದೆಯೆಂದರೆ ಚಲನಚಿತ್ರದ ಧ್ವನಿಮುದ್ರಿಕೆಯು ಮೊದಲ ಬಾರಿ ಮಾರುಕಟ್ಟೆಗೆ ಬಂದಾಗ ಆ ಟ್ರ್ಯಾಕನ್ನು ಬಹಳ ಬಾರಿ ನನ್ನ ಸಮಾನ ಮನಸ್ಕರ ನಡುವೆ ಸ್ಪೀಕರಿನಲ್ಲಿ ಕೇಳುತ್ತ ನಾನು ಆನಂದಿಸಿದ್ದೇನೆ. ಬಿಲಾಸ್‌ ಖಾನೀ ತೋಡಿ ಎಂಬ ಅಷ್ಟು ಪ್ರಚಲಿತವಲ್ಲದ ರಾಗದಲ್ಲಿ ರೆಹಮಾನ್‌ ಸಂಯೋಜಿಸಿದ ಆ ಸಂಗೀತವು ಆತನ ಸೃಜನಶೀಲತೆಯ ವೈಶಿಷ್ಟ್ಯಕ್ಕೆ ಒಂದು ಸಣ್ಣ ಉದಾಹರಣೆಯಷ್ಟೆ.  

ಈ ದೃಶ್ಯವು ಮುಖ್ಯವಾಗಿ ಎರಡು ಕಾರಣಗಳಿಂದ ಸದಾ ಪ್ರಸ್ತುತವೆನ್ನಿಸುತ್ತದೆ. ಒಂದು, ಆಗಿನ್ನೂ ಬೆಳೆಯುತ್ತಿರುವ ಒಂದು ಸಂಗೀತ ಪ್ರಕಾರದ ಕಲಾವಿದನೊಬ್ಬ ಮತ್ತೂಂದು ಪ್ರಕಾರದ ಸಂಗೀತವನ್ನು ಕುರಿತು ಮಾತನಾಡುವ ಬಗೆ ಮತ್ತು ಕೆಲವೇ ಸಮಯದ ಅಂತರದಲ್ಲಿ ಆತ ತನ್ನ ಪ್ರಕಾರದಲ್ಲಿ ಒಬ್ಬ ಪರಿಪೂರ್ಣ ಕಲಾವಿದನಾದ ನಂತರ ಮತ್ತೂಂದು ಪ್ರಕಾರದ ಸಂಗೀತದ ಜೊತೆಗೆ ತನ್ನ ಸಂಗೀತವನ್ನು ಒಂದಾಗಿ ನುಡಿಸುವುದು. ಎರಡನೆಯದ್ದು ಸ್ವಲ್ಪ ಗಂಭೀರವಾದ ಸಂಗತಿ. ಶಹನಾಯಿ ಮತ್ತು ಗಿಟಾರ್‌ ಈ ಎರಡೂ ವಾದ್ಯಗಳನ್ನು ಮುಖ್ಯವಾಗಿಟ್ಟುಕೊಂಡು ಸಂಯೋಜಿಸಿದ ದ ಡಿಕೊಟಮಿ ಆಫ್ ಫೇಮ್‌ ಎಂಬ ಆ ಟ್ರ್ಯಾಕ್‌ನಲ್ಲಿ ರೆಹಮಾನ್‌ ಬಳಸಿದ ರಾಗ. ಬಿಲಾಸ್‌ ಖಾನೀ ತೋಡಿ ಎಂಬ ರಾಗವು ಸಾಮಾನ್ಯವಾಗಿ ಹಿಂದುಸ್ತಾನಿ ವಾದ್ಯ ಸಂಗೀತದಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ.

ಸಿತಾರ್‌, ಸರೋದ್‌ಗಳಲ್ಲಿ ಈ ರಾಗವನ್ನು ಕೇಳುವ ಆನಂದವು ಅಷ್ಟೇ ತೀವ್ರವಾಗಿ ಗಾಯನದಲ್ಲಿ ಅಸಾಧಾರಣವಾದ ಉದಾಹರಣೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಅನುಭಾವವಾಗುವುದಿಲ್ಲ. ಕೆಲವು ರಾಗಗಳು ಹಾಗೆಯೇ. ಗಾಯನದಲ್ಲಿ ಹಾಡಿಸಿಕೊಳ್ಳುವ ಆನಂದವನ್ನು ವಾದನದಲ್ಲಿ ಸು#ರಿಸುವುದಕ್ಕೆ ಕೆಲವು ರಾಗಗಳು ಒಪ್ಪುವುದಿಲ್ಲ ಮತ್ತು ವಾದನದಲ್ಲಿ ಹೊಮ್ಮುವಷ್ಟು ತೀವ್ರವಾಗಿ ಕೆಲವು ರಾಗಗಳು ಗಾಯನದಲ್ಲಿ ಬಯಲಾಗುವುದಿಲ್ಲ. ಒಟ್ಟಿನಲ್ಲಿ ಬಿಲಾಸ್‌ ಖಾನೀ ತೋಡಿ ಎಂಬ ಅಷ್ಟೇನೂ ಪ್ರಚಲಿತವಲ್ಲದ ಅಥವಾ ಅಷ್ಟೇನೂ ಸುಲಭ ಸಾಧ್ಯವಲ್ಲದ ರಾಗವನ್ನು ಇಂಥ¨ªೊಂದು ಸಂದರ್ಭದಲ್ಲಿ ಮುಖ್ಯವಾಗಿ ಇಟ್ಟುಕೊಂಡು ಸಂಗೀತವನ್ನು ಸಂಯೋಜಿಸಿರುವುದು ರಾಗದ ಒಳಗಿನ ರಾಗ ಎಂಬ ಹೊಸ ಬಗೆಯ ಆಲೋಚನೆಯನ್ನು ತೋರಿಸುತ್ತದೆ. ಸಾಮಾನ್ಯವಾಗಿ ಪಾಶ್ಚಾತ್ಯ ವಾದ್ಯವೊಂದು ಭಾರತೀಯ ವಾದ್ಯದ ಜೊತೆಗೆ ನಿಂತಾಗ, ಮುಖ್ಯವಾಗಿ ಚಲನಚಿತ್ರ ಸಂಗೀತದ ರಂಗದಲ್ಲಿ  ಸುಲಭಸಾಧ್ಯವಾದ ರಾಗವನ್ನು ಅಳವಡಿಸಿಕೊಳ್ಳುವುದನ್ನು ನಾವು ಗಮನಿಸುತ್ತೇವೆ. ಎರಡೂ ಪ್ರಕಾರದ ಸಂಗೀತದಲ್ಲಿ ಸಾಮಾನ್ಯವಾಗಿರುವ ಸ್ಕೇಲ್‌ ಅಥವಾ ರಾಗವನ್ನು ಬಳಸಿದ ಉದಾಹರಣೆಯನ್ನು ನಾವು ಗಮನಿಸಬಹುದಾದರೂ ರೆಹಮಾನ್‌ರ ಇಂಥ ಪ್ರಯೋಗಗಳು ವಿಶ್ವಸಂಗೀತದತ್ತ ಗಮನವಿಟ್ಟು ನಿಲ್ಲುವ ಇಂದಿನ ನಮ್ಮ ಸಂಗೀತದ ಪೀಳಿಗೆಗೊಂದು ಬಹಳ ದೊಡª ಪಾಠವಾಗಬಲ್ಲುದು. 

ಭಾರತೀಯ ಶಾಸ್ತ್ರೀಯ ಸಂಗೀತದ ಆರಾಧಕ ಶ್ರೋತೃವೊಬ್ಬರು ಒಂದು ಗೋಷ್ಠಿಯಲ್ಲಿ ಹೀಗೆ ಹೇಳಿದ್ದರು. ರಾಗದ ರಂಗು ಮತ್ತು ಗುಂಗು ಈ ಎರಡೂ ಏರುತ್ತಿದ್ದಂತೆ ಗೋಷ್ಠಿಯಲ್ಲಿದ್ದ ಪ್ರಸಿದ್ಧ ಸಂಗೀತಗಾರರ ಕುರಿತಾಗಿ ಅವರು ಹೇಳಿದ್ದು ಹೀಗೆ : 

Advertisement

“ನಿಮ್ಮ ರಾಗದ ಒಳಗೊಂದು ರಾಗ ಇರ್ತದೆ. ಧ್ಯಾನದೊಳಗಿನ ಧ್ಯಾನದ ಹಾಗೆ! ನಿಮಗೆ ಅದು ಕಂಡಿರಬಹುದು ಅಥವಾ ಕಾಣದೆ ಇದ್ದಿರಬಹುದು. ಆದರೆ, ಕಳೆದ ಐವತ್ತು ವರ್ಷಗಳಿಂದ ಯಮನ್‌ ಕೇಳಿದ್ದೇನೆ. ಬೆರಳೆಣಿಕೆಯಷ್ಟು ಸಲ ಮಾತ್ರ ನನಗೆ ಯಮನ್‌ ರಾಗದ ಒಳಗೊಬ್ಬ ನಿಜವಾದ ಯಮನ್‌ ಕುಳಿತಿ¨ªಾನೆ ಎನ್ನಿಸಿದೆ. ಅದನ್ನು ಹೇಗೆ ಶಾಸ್ತ್ರೀಯವಾಗಿ ಹೇಳಬೇಕು ಎನ್ನುವುದು ಕೇವಲ ಶ್ರೋತೃವಾಗಿ ನನಗೆ ಕಷ್ಟವಾದ ಮಾತು’   

ಸಾಮಾನ್ಯ ಇದೇ ಅರ್ಥ ಬರುವಂಥ ಸಂಕೀರ್ಣವಾದ ವಸ್ತುವೊಂದನ್ನು ಆ ಹಿರಿಯರು ಅಂದು ಪ್ರಸ್ತಾಪಿಸಿದ್ದರು. ಅವರ ಆ ಮಾತುಗಳು ಆ ಪ್ರಸಿದ್ಧ ಸಂಗೀತಗಾರರ ಮನಸ್ಸನ್ನು ಪ್ರಸನ್ನಗೊಳಿಸಿತೋ ಜಾಗೃತಗೊಳಿಸಿತೋ ನನಗೆ ಅಂದು ತಿಳಿಯಲಿಲ್ಲ. ಆದರೆ, ಸುಮಾರು ತಿಂಗಳುಗಳ ಕಾಲ ಮನಸ್ಸು ಖಾಲಿಯಾಗುವ ಮುನ್ನ ಈ ವಿಚಾರವು ಬಂದು ಖಾಲಿಯಾಗಲು ಬಯಸುವ ಮನಸ್ಸನ್ನು ತುಂಬುತ್ತಿತ್ತು. 

ರಾಗದ ಹಿಂದೊಂದು ರಾಗವು ನಿಜಕ್ಕು ಇರುತ್ತದೆಯಾ? ಈ ವಸ್ತುವನ್ನು ತೀರಾ ಸರಳವಾಗಿ ಬಿಡಿಸುವುದಾದರೆ ಹಾಡಿಗೊಂದು ಭಾವವಿದ್ದ ಹಾಗೆ, ಭಾವವಿಲ್ಲದ ಹಾಡು ಹಾಡಾಗಲು ಎಂದಿಗೂ ಸಾಧ್ಯವಿಲ್ಲವಲ್ಲ. ಇಲ್ಲಿ ಹಾಡುಗಾರ ಸಾಹಿತ್ಯವನ್ನು ಹಾಡುತ್ತಾನೋ ಅಥವಾ ಹಾಡನ್ನು ಹಾಡುತ್ತಾನೋ ಎಂಬುದನ್ನು ಹಾಡಿನ ಮೊದಲನೆಯ ಸಾಲಿನಲ್ಲಿಯೇ ಕಂಡುಹಿಡಿಯುವ ನಮ್ಮ ಶ್ರೋತೃಗಳಿಗೆ ರಾಗದ ಹಿಂದೊಂದು ರಾಗವಿರುತ್ತದೆ ಎಂಬಂಥ ಅಸಾಧಾರಣ ಪ್ರಜ್ಞೆಯ ಮಾತನಾಡುವುದು ನಿಜಕ್ಕೂ ಕಷ್ಟವಲ್ಲ.

ಬಿಲಾಸ್‌ ಖಾನಿ ತೋಡಿಯ ಗಿಟಾರಿನ ತುಣುಕು, ಡಿಕಾಟಮಿಯ ನಿಜವಾದ ಅನಾಟಮಿ, ಬಯಕೆಯ ಬಣ್ಣಗಳ ತೊಡಲು ಸಿದ್ಧವಾಗುತ್ತಿರುವ ಬಿಳೀ ಕ್ಯಾನ್‌ವಾಸು, ಕಲಾವಿದನೊಬ್ಬ ಸಾಯುವ ಮುಂಚೆ ಹಾಡುವ ಕೊನೆಯ ಯಮನ್‌, ಸೊಪ್ಪಿನ ಅಜ್ಜಿಯ ಕೂಗಿನ ಶ್ರುತಿ ಮತ್ತು ರೆಗಿಸ್ತಾನದ ಅಜ್ಜನ ಬಿಸಿಲುಬೆವರಿನ ಹಾಡು, ಇÇÉೆಲ್ಲ ಕಂಡೂ ಕಾಣದ ಮತ್ತೂಂದು ನಾದವಿರುತ್ತದೆ. ಅಂಥ ನಾದವನ್ನು ಕಂಡುಕೊಳ್ಳುವ ಪ್ರಕ್ರಿಯೆಗೆ ಕಲಾವಿದ ತಾನದೆಷ್ಟು ಪ್ರಯತ್ನಿಸುತ್ತಾನೋ, ನಿಜವಾದ ಶ್ರೋತೃವೂ ಅಷ್ಟೇ ಪ್ರಯತ್ನಿಸುತ್ತಿರುತ್ತಾನೆ. ಆ ಅರ್ಥದಲ್ಲಿ ಇಬ್ಬರೂ ಸಾಧಕರಾಗುತ್ತಾರೆ ಮತ್ತು ರಾಗದ ಹಿಂದಿನ ರಾಗವಾಗುತ್ತಾರೆ. 

ಕಣಾದ ರಾಘವ

Advertisement

Udayavani is now on Telegram. Click here to join our channel and stay updated with the latest news.

Next