Advertisement

ಬಾಕಿ ವಿಚಾರದಲ್ಲಿ ಆಡಿದ್ದೇ ಆಟ; ಅಹುದಹುದೇ ಸೋಮೇಶ್ವರ?

06:15 AM Aug 14, 2017 | |

ವಿದ್ಯುತ್‌ ಪ್ರಸರಣ ಕಂಪನಿಗಳಲ್ಲಿ ಬಿಲ್ಲಿಂಗ್‌ ತಕರಾರು ಅತಿ ದೊಡ್ಡ ರಾಮಾಯಣ. ಈ ಹಿಂದೆ ವಿದ್ಯುತ್‌ ಬಳಕೆ ಯೂನಿಟ್‌ ಲೆಕ್ಕವನ್ನೂ ರೀಡರ್‌ನೆà ಮಾಡಿ, ಲೆಕ್ಕಿಸಿ ಬಿಲ್‌ ಮಾಡುವಾಗಲಂತೂ ಬಿಲ್‌ ಹಿಡಿದು ನೇರವಾಗಿ ಪಾವತಿ ಕೌಂಟರ್‌ಗೆ ಹೋಗುವ ಪ್ರಶ್ನೆಯೇ ಇರಲಿಲ್ಲ. ಮೊದಲು ಗುಮಾಸ್ತರ ಬಳಿ ಬಿಲ್‌ ವ್ಯತ್ಯಯವನ್ನು ಸರಿಪಡಿಸಿಕೊಂಡು ನಂತರ ಬಿಲ್‌ ಕಟ್ಟಬೇಕಿತ್ತು. ಈಗ ಎಲೆಕ್ಟ್ರಾನಿಕ್‌ ಬಿಲ್ಲಿಂಗ್‌ ಯಂತ್ರಗಳು ಬಂದಿರುವುದರಿಂದ ಅಷ್ಟರಮಟ್ಟಿಗೆ ಸಮಸ್ಯೆ ಬಗೆಹರಿದಿದೆ.  ಈವರೆಗೆ ನಾವು ಹಾಗೆಂದುಕೊಂಡಿದ್ದೆವು. ಆದರೆ ಆಗಿರುವ ವಾಸ್ತವವೇ ಬೇರೆ.

Advertisement

ಸಾಗರದಂಥ ತಾಲೂಕಿನ ಎರಡು ಪ್ರಕರಣಗಳನ್ನು ಮಾತ್ರ ಇಲ್ಲಿ ಪ್ರಾಥಮಿಕವಾಗಿ ಉಲ್ಲೇಖೀಸಬಹುದು. ಓರ್ವ ಮಹಿಳೆ ತಾನು ಆರಂಭಿಸಿದ ಅಂಗಡಿಗೆ ವಿದ್ಯುತ್‌ ಪಡೆಯಲು ಅರ್ಜಿ ಸಲ್ಲಿಸುತ್ತಾಳೆ. ಅರ್ಜಿಯಲ್ಲಿ ಸ್ಪಷ್ಟವಾಗಿ ವಾಣಿಜ್ಯ ಉದ್ದೇಶಕ್ಕೆ ಎಂಬುದನ್ನು ನಮೂದಿಸಿರಲಾಗುತ್ತದೆ. ಆದರೆ ಆಕೆಗೆ ಸರಿಸುಮಾರು ಮೂರು ವರ್ಷಗಳ ಕಾಲ ಎಲ್‌ಟಿ3 ಬದಲು ಎಲ್‌ಟಿ2 ಅನ್ವಯ ಬಿಲ್‌ ಮಾಡಲಾಗುತ್ತದೆ. ಮೂರು ವರ್ಷದ ನಂತರ ಒಂದು ದಿನ ಆಕೆಗೆ ದಂಡಸಹಿತವಾಗಿ 60 ಸಾವಿರ ರೂ. ಕಟ್ಟಿ ಎಂಬ ಬಿಲ್‌ ಬರುತ್ತದೆ. ನಿಮ್ಮ ತಪ್ಪಿಗೆ ನನಗೇಕೆ ದಂಡ ಎಂದು ಆಕೆ ಜೋರು ಮಾಡಿದ ಮೇಲೆ ಬಿಲ್‌ ಮೊತ್ತ 20 ಸಾವಿರಕ್ಕೆ ಇಳಿಯುತ್ತದೆ. ಕಟ್ಟದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗುವುದು ಎಂಬ ಬೆದರಿಕೆ ಬೇರೆ. 

ಇಂಥದ್ದೇ ಇನ್ನೊಂದು ಪ್ರಕರಣ. ದೊಡ್ಡ ದೊಡ್ಡ ವಿದ್ಯುತ್‌ ಬಳಕೆದಾರರು ದಿನವೊಂದಕ್ಕೇ ನೂರಾರು ಯೂನಿಟ್‌ ಬಳಸುವಾಗ ಅವರಿಗೆ ಸಾಮಾನ್ಯ ಗ್ರಾಹಕನಿಗಿಂತ ಹೊರತಾದ ವಿಶೇಷ ಮೀಟರ್‌ ಹಾಕಲಾಗಿರುತ್ತದೆ. ಈ ಮೀಟರ್‌ನಲ್ಲಿ ಒಂದು ಯೂನಿಟ್‌ ದಾಖಲಾಯಿತು ಎಂದರೆ ಅದರ ಇಷ್ಟು ಪಟ್ಟು ಯೂನಿಟ್‌ ಬಳಕೆಯಾಗಿದೆ ಎಂದರ್ಥ. ತಾಂತ್ರಿಕ ಭಾಷೆಯಲ್ಲಿ ದಾಖಲಾದ ಯೂನಿಟ್‌ಅನ್ನು ಒಂದು “ಕಾನ್‌ಸ್ಟಂಟ್‌’ನಿಂದ ಗುಣಿಸಿ ಬಿಲ್‌ ಮಾಡಬೇಕು. ಆ ನಿಶ್ಚಿತ ಸಂಖ್ಯೆ ನಾಲ್ಕೂ ಆಗಿರಬಹುದು. ಹತ್ತೂ ಆಗಿರಬಹುದು. ಒಂದು ನಿರ್ದಿಷ್ಟ ಸಂಖ್ಯೆಗೆ ಮೀಟರ್‌ಅನ್ನು ಒಳಪಡಿಸುವ ಕೆಲಸ ಎಸ್ಕಾಂನದ್ದು. ಸಹಕಾರಿ ತತ್ವದಡಿ ಜನರ ಷೇರು ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸೂಪರ್‌ ಮಾರ್ಕೆಟ್‌ ಒಂದು ಸಾಗರದಲ್ಲಿದೆ. ಅದಕ್ಕೆ ಬರೋಬ್ಬರಿ ಮೂರೂವರೆ ವರ್ಷಗಳ ಕಾಲ ಮೀಟರ್‌ನಲ್ಲಿ ಆದ ಯೂನಿಟ್‌ ಲೆಕ್ಕದಲ್ಲಿ ಬಿಲ್‌ ಮಾಡಲಾಗಿದೆ. ಕಾನ್‌ಸ್ಟಂಟ್‌ನಿಂದ ಗುಣಿಸಿ ಬಂದ ಯೂನಿಟ್‌ ಲೆಕ್ಕಕ್ಕೆ ಬಿಲ್‌ ಮಾಡುವಲ್ಲಿ ಇಲ್ಲಿನ ಎಸ್ಕಾಂ ಎಡವಟ್ಟು ಮಾಡಿಕೊಂಡಿದೆ. ಆದರೇನು? ತಪ್ಪಾಗಿ ಬಿಲ್‌ ಮಾಡಲಾಗಿದೆ ಎಂದು ಈಗ ಹಿಂಬಾಕಿಯಾಗಿ 13 ಲಕ್ಷ ರೂ. ಪಾವತಿಗೆ ನೊಟೀಸ್‌ ಜಾರಿಯಾಗಿದೆ.

ಎಷ್ಟೂ ಅಂತ ಬಿಲ್‌, ರಸೀದಿ ಇಡ್ತೀರಿ?
ಈಗಿನ ವಿದ್ಯುತ್‌ ಸರಬರಾಜು ನಿಯಮ ಬರುವುದಕ್ಕಿಂತ ಮುನ್ನವೂ ಬಾಕಿ ವಿಚಾರದಲ್ಲಿ ಗ್ರಾಹಕ ಪರ ವಾತಾವರಣವಿತ್ತು. ತುಂಬಾ ಜನ ತಾವು ವಿದ್ಯುತ್‌ ಸಂಪರ್ಕ ಪಡೆದ ದಿನದಿಂದ ಬಂದ ಅಷ್ಟೂ ವರ್ಷಗಳ ವಿದ್ಯುತ್‌ ಬಿಲ್‌, ರಸೀದಿಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುತ್ತಾರೆ. ದುರಂತವೆಂದರೆ, ನಿಗದಿತ ವೇಳೆಗೆ ಬಿಲ್‌ ಪಾವತಿಸುವ ಪ್ರಾಮಾಣಿಕರಿಗೇ ಈ ಭಯ. ವಿದ್ಯುತ್‌ ಕಂಪನಿ ಹಿಂದಿನ ಯಾವುದೋ ಬಿಲ್‌ ಕಟ್ಟಿಲ್ಲ ಎಂದು ಬಾಕಿ ಹೇರಿಬಿಟ್ಟರೆ ಎಂಬ ಆತಂಕ ಇವರನ್ನು ಕಾಡುತ್ತಲೇ ಇರುತ್ತದೆ. ಆದರೆ ಆವತ್ತಿನ ಬಿಲ್ಲಿಂಗ್‌ ಮಾನದಂಡಗಳ ಪ್ರಕಾರ, ವಿದ್ಯುತ್‌ ಸರಬರಾಜು ಕಂಪನಿ ಎಸ್ಕಾಂ ಮೂರು ಆರ್ಥಿಕ ವರ್ಷಕ್ಕಿಂತ ಹಿಂದಿನ ಬಾಕಿಯನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ. “ಆಡಿಟ್‌ ಶಾರ್ಟ್‌ ಕ್ಲೈಮ್‌’ ಪ್ರಸ್ತಾಪಕ್ಕೆ ಮೂರು ವರ್ಷದ ಮಿತಿ ಎಂದರೆ ಇನ್ನೊಂದು ಅರ್ಥದಲ್ಲಿ ನಾವೂ ನೀವೂ ಮೂರು ವರ್ಷಗಳ ಹಿಂದಿನ ಬಿಲ್‌, ರಸೀದಿ ಇರಿಸಿಕೊಂಡು ವೃಥಾ ರದ್ದಿ ಸಂಗ್ರಹಿಸುವುದು ಕೂಡ ಅನಗತ್ಯ ಎಂಬ ಸ್ಥಿತಿ ಇತ್ತು.  

ಆ ನಂತರ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಹತ್ತಾರು ಗ್ರಾಹಕ ಸ್ನೇಹಿ ನಿಯಮಗಳನ್ನು ಜಾರಿಗೊಳಿಸಿದೆ.  ಅದು ಬಾಕಿ ಬಿಲ್‌ ಕುರಿತಂತೆ ಹೊಸ ಅಂಶವನ್ನು ಹೇಳಿದ್ದರಿಂದ ಆಡಿಟ್‌ ಶಾರ್ಟ್‌ ಕ್ಲೈಮ್‌ ಕುರಿತ ಹಿಂದಿನ  ನಿಯಮ ಅಪ್ರಸ್ತುತವಾಯಿತು. ಈ ನಡುವೆ ಕೆಇಆರ್‌ಸಿ ವಿದ್ಯುತ್‌ ಸರಬರಾಜು ನಿಯಮ 2004ರ ಉಪಕ್ರಮಾಂಕ 4.13ರ ವ್ಯಾಖ್ಯೆ ಪ್ರಕಾರ ಎಸ್ಕಾಂಗಳು ಎರಡು ವರ್ಷಗಳ ಹಿಂದಿನ ಬಾಕಿಯನ್ನು ಗ್ರಾಹಕನಿಂದ ವಸೂಲಿ ಮಾಡುವಂತಿಲ್ಲ. ಇದೇ ನಿಯಮದ ಪ್ರಕಾರ, ಬಾಕಿಯನ್ನು ಈ ಎರಡು ವರ್ಷದುದ್ದಕ್ಕೂ ಬಿಲ್‌ಗ‌ಳಲ್ಲಿ ಸತತವಾಗಿ ನಮೂದಿಸುತ್ತ ಬಂದಿದ್ದರೆ ಆ ಮೊತ್ತ ವಸೂಲಿಗೆ ಅರ್ಹ. 

Advertisement

ಹಾಗಂದುಕೊಂಡಿದ್ದೆವು ನಾವು.  ವಿದ್ಯುತ್‌ ಕಾಯ್ದೆಯ ಕಲಂ 29.08(ಎ) ಪ್ರಕಾರ, ಯಾವುದೇ ಸಂದರ್ಭದಲ್ಲಿ ಗ್ರಾಹಕನ ಖಾತೆಯಲ್ಲಿ ತಪ್ಪು ಬಿಲ್ಲಿಂಗ್‌ನಿಂದಾಗಿ ಶಾರ್ಟ್‌ ಕ್ಲೈಮ್‌ ಕಂಡುಬಂದರೆ ಆ ವ್ಯತ್ಯಾಸವನ್ನು ಪಾವತಿಸಲು ವಿದ್ಯುತ್‌ ಗ್ರಾಹಕ ಜವಾಬ್ದಾರನಾಗಿರುತ್ತಾನೆ. ಇದೇ ಕಲಂನ 29.03 ಇಂತಹ ಸಂದರ್ಭದಲ್ಲಿ ಸೇವಾದಾತ ತೆಗೆದುಕೊಳ್ಳುವ ಕ್ರಮಗಳನ್ನು ತಿಳಿಸುತ್ತದೆ. ಇಲ್ಲೇ ಎರಡು ವರ್ಷದ ನಂತರ ಬಾಕಿಯಾದ ಮೊತ್ತವನ್ನು ಕಂಪನಿ ಕೇಳುವಂತಿಲ್ಲ. ಆದರೆ ಬಿಲ್‌ನಲ್ಲಿ ನಿರಂತರವಾಗಿ ಈ ಬಾಕಿ ಮೊತ್ತವನ್ನು ತೋರಿಸುತ್ತ ಬಂದಿದ್ದರೆ ಈ 2 ವರ್ಷಗಳ ಪರಿಮಿತಿ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.

ಬಾಕಿ ಎಂಬುದರ ವ್ಯಾಖ್ಯೆ ಏನು?
ಇಲ್ಲಿ ಪ್ರಶ್ನೆ ಏಳುವುದು ಬಾಕಿ ಎಂಬುದು ಎಂದು ಸೃಷ್ಟಿಯಾಗುತ್ತದೆ ಎಂಬ ವಿಚಾರದಲ್ಲಿ. ಕಾಯ್ದೆ ಒಬ್ಬ ಗ್ರಾಹಕನ ಖಾತೆಯಲ್ಲಿ ಯಾವತ್ತು ಕಟ್ಟಿದ ಬಿಲ್‌ಗಿಂತ ಹೆಚ್ಚಿನ ವ್ಯತ್ಯಾಸ ಕಟ್ಟುವುದು ಇನ್ನೂ ಇದೆ ಎಂಬುದು ಆಗುತ್ತದೆಯೋ ಅಂದಿನಿಂದ ಬಾಕಿ ಆಗುತ್ತದೆ ಎಂಬ ವಿಶ್ಲೇಷಣೆ ಗ್ರಾಹಕ ತಜ್ಞರದ್ದು. ಉದಾಹರಣೆಗೆ 2010ರ ಜನವರಿಯಿಂದ ಸರಿಯಾಗಿ ಬಿಲ್ಲಿಂಗ್‌ ಮಾಡಿದ್ದರೆ ಗ್ರಾಹಕನೊಬ್ಬ ಪ್ರತಿ ತಿಂಗಳು 100 ರೂ. ಕಟ್ಟಬೇಕಿತ್ತು ಎಂದುಕೊಳ್ಳೋಣ. ಆದರೆ ಎಸ್ಕಾಂ 2017ರವರೆಗೆ ಪ್ರತಿ ತಿಂಗಳು 80 ರೂ.ಗಷ್ಟೇ ಬಿಲ್‌ ಮಾಡಿದೆ. ಇದ್ದಕ್ಕಿದ್ದಂತೆ 2017ರ ಫೆಬ್ರವರಿಯಲ್ಲಿ ಜಾnನೋದಯವಾಗಿ ಹಳೆಯ ಬಾಕಿಗೆ ಪೂರಕ ಬಿಲ್‌ ಹೆಸರಿನಲ್ಲಿ ನೋಟಿಸ್‌ ಕೊಟ್ಟಿದೆ. ಗ್ರಾಹಕ ಪರ ವಾದದಲ್ಲಿ, 2010ರ ಜನವರಿಯಿಂದಲೇ ಪ್ರತಿ ತಿಂಗಳು 20 ರೂ. ಬಾಕಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಬಾಕಿಯನ್ನು ಬಿಲ್‌ನಲ್ಲಿ ತೋರಿಸದಿದ್ದುದರಿಂದ ಕೊನೆಯ ಎರಡು ವರ್ಷಗಳ ವ್ಯತ್ಯಾಸವನ್ನು ಮಾತ್ರ ಬಳಕೆದಾರ ಕಟ್ಟಿದರೆ ಸಾಕು. 

ಎಸ್ಕಾಂಗಳು ಇದನ್ನು ಬೇರೆಯದಾಗಿಯೇ ವ್ಯಾಖ್ಯಾನಿಸುತ್ತವೆ. ಮೊದಲ ಬಾರಿಗೆ ಬಾಕಿ ಇದೆ ಎಂದು ಯಾವತ್ತು ಬೆಳಕಿಗೆ ಬರುತ್ತದೆಯೋ ಅಲ್ಲಿಂದ ಎರಡು ವರ್ಷದೊಳಗೆ ಎಸ್ಕಾಂ ಕ್ಲೈಮ್‌ ಮಾಡದಿದ್ದರೆ ಮಾತ್ರ ಅದು ಈ “ಎರಡು ವರ್ಷಗಳ’ ನಿಯಮದ ಅಡಿಯಲ್ಲಿ ಬರುತ್ತದೆ. ಎಸ್ಕಾಂ ಪ್ರಕಾರ 2017ರ ಫೆಬ್ರವರಿಯಲ್ಲಿ ಅರಿವಿಗೆ ಬಂದ ಬಾಕಿ ಅಂದಿನಿಂದಷ್ಟೇ ಬಾಕಿಯಾಗಿದೆ!

ಈ ಸಂಬಂಧ 2005ರ ಬೆಸ್ಕಾಂ ಹಾಗೂ ಗೌಸಿಯಾ ಎಂಜಿನಿಯರಿಂಗ್‌ ಕಾಲೇಜು ಪ್ರಕರಣದಲ್ಲಿ ರಾಜ್ಯದ ಹೈಕೋರ್ಟ್‌ ಎಸ್ಕಾಂ ವಾದವನ್ನೇ ಎತ್ತಿಹಿಡಿದಿದೆ. ರಾಜ್ಯದ ವಿದ್ಯುತ್‌ ಲೋಕಪಾಲದ ಎದುರು ಹೆಸ್ಕಾಂ ವಿರುದ್ಧ ಹುಬ್ಬಳ್ಳಿಯ ಸಮೀರ್‌ ಎಂ.ಹಾಜಿ ಹಾಗೂ ಎಂ.ಎಂ.ಗೋವನಕೊಪ್ಪ ಸಲ್ಲಿಸಿದ ದೂರು ಕೂಡ ಇತ್ತೀಚೆಗೆ ಕೋರ್ಟ್‌ ವ್ಯಾಖ್ಯಾನವನ್ನೇ ಪುರಸ್ಕರಿಸಿ ವಜಾಗೊಳಿಸಲಾಗಿದೆ.

ಕಾಯ್ದೆ ಹೇಳುತ್ತದೆ, ನಿಯಮ ಮೌನ!
ಪ್ರತಿಯೊಂದು ಕಾಯ್ದೆಯನ್ನು ರೂಪಿಸುವುದು ಕೂಡ ಪ್ರಮುಖವಾಗಿ ಗ್ರಾಹಕನ ಸಂರಕ್ಷಣೆಗಾಗಿ. ಬಾಕಿ ಬಿಲ್‌ ವಿಚಾರದಲ್ಲಿ ಕೂಡ ಇದು ಆಗಲೇಬೇಕಿತ್ತು. ಈ ರೀತಿ ಬಿಲ್‌ನಲ್ಲಿ ಸಮರ್ಪಕವಾಗಿ ರೀಡಿಂಗ್‌ ಅನ್ವಯಿಸದೆ, ಎಲ್‌ಟಿ ವರ್ಗ ಪರಿಗಣಿಸದೆ ತಪ್ಪು ಮಾಡುತ್ತಿರುವವರು ವಿದ್ಯುತ್‌ ಸರಬರಾಜು ಕಂಪನಿಯವರು. ಆದರೆ ಶಿಕ್ಷೆ ಗ್ರಾಹಕನಿಗೆ ಆಗುತ್ತಿದೆ. ವಾಸ್ತವವಾಗಿ ಈಗಿನ ಸ್ಥಿತಿಯಲ್ಲಿ ವಿದ್ಯುತ್‌ ಸರಬರಾಜು ನಿಯಮ 2004ರ ಉಪಕ್ರಮಾಂಕ 4.13 ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ವಿದ್ಯುತ್‌ ಕಾಯ್ದೆಯ ಆಶಯ ಇದಾಗಿರಲು ಸಾಧ್ಯವಿಲ್ಲ. ಇದಕ್ಕಿಂತ ಮುಖ್ಯವಾಗಿ, ಈಗಿನ ಪೂರಕ ಬಿಲ್‌ ವಾದದಿಂದ ಗ್ರಾಹಕನೊಬ್ಬನ 1947ರಿಂದ ಇರುವ ಬಾಕಿಯನ್ನು ಕೂಡ ಎಸ್ಕಾಂ ವಸೂಲಿಸಲು ಸಾಧ್ಯ. 

ವಿದ್ಯುತ್‌ ಕಾಯ್ದೆಯ ಇನ್ನೊಂದು ಅಂಶ ಗಮನಾರ್ಹ. ಬಾಕಿ ಪ್ರಕರಣಗಳಲ್ಲಿ ದೂರು ಇತ್ಯರ್ಥವಾಗುವವರೆಗೆ ಸದರಿ ಗ್ರಾಹಕನ ವಿದ್ಯುತ್‌ ಸಂಪರ್ಕವನ್ನು ಯಾವುದೇ ಕಾರಣಕ್ಕೆ ಕಡಿತಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಅಂಶ ಕಾಯ್ದೆಯನ್ವಯ ರೂಪಿಸಲಾದ ನಿಯಮಗಳಲ್ಲಿ ದಾಖಲಾಗಿಯೇ ಇಲ್ಲ. ಇದನ್ನು ಬಳಸಿ ಬಾಕಿ ಬಿಲ್‌ ವಿಚಾರದಲ್ಲಿ ಎಸ್ಕಾಂಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಕತ್ತಿ ಝಳಪಿಸುತ್ತಾರೆ. ಸಾಮಾನ್ಯವಾಗಿ ವಾಣಿಜ್ಯ ಉದ್ದೇಶದ ಗ್ರಾಹಕರು ವಿದ್ಯುತ್‌ ನಿಲುಗಡೆಯ ಭಯಕ್ಕೆ ಮರುಮಾತಾಡದೆ ಬಾಕಿ ಬಿಲ್‌ ಪಾವತಿಸುತ್ತಾರೆ. ಅಯ್ಯೋ, ನಾವು ಯಾವ ಸರ್ವಾಧಿಕಾರಿಯ ಆಡಳಿತದಲ್ಲಿದ್ದೇವೇ?

ಪೂರಕ ಬಿಲ್‌ ಪಾವತಿಗೆ ಎಷ್ಟು ಅವಕಾಶ?
ಬೆಸ್ಕಾಂ ವ್ಯಾಪ್ತಿಯ ಕುಣಿಗಲ್‌ನ ಜಯ ಸ್ಟೀಲ್ಸ್‌ ಲಿಮಿಟೆಡ್‌ ಹೆಚ್‌ಟಿ ಗ್ರಾಹಕರು. 2012ರ ಒಂದು ದಿನ ಅವರಿಗೆ ಆಡಿಟ್‌ ಶಾರ್ಟ್‌ ಕ್ಲೈಮ್‌ ಎಂದು 95,70,041 ರೂ. ಮೊತ್ತದ ಪೂರಕ ಬಿಲ್‌ಅನ್ನು ಅಲ್ಲಿನ ಬೆಸ್ಕಾಂ ಉಪವಿಭಾಗಾಧಿಕಾರಿ ಕಳುಹಿಸುತ್ತಾರೆ.  ಗ್ರಾಹಕರ ಟಿಓಡಿ ಬಿಲ್‌ಗ‌ಳನ್ನು ಕೆಡಬ್ಲ್ಯುಹೆಚ್‌ ಮೀಟರ್‌ನಲ್ಲಿ ದಾಖಲಾದ ರೀಡಿಂಗ್‌ ಬಳಸಿ ಬಿಲ್‌ ಬಳಸಿ ಬಿಲ್‌ ಮಾಡಲಾಗಿಲ್ಲ ಎಂಬುದು ಆಡಿಟ್‌ ಆಕ್ಷೇಪವಾಗಿತ್ತು.

ಟಿಓಡಿ ಎಂದರೆ ನಿರ್ದಿಷ್ಟ ಅವಧಿಯ ಬಳಕೆಗೆ ಬೇರೆ ಬೇರೆ ದರ ವಿಧಿಸುವ ವ್ಯವಸ್ಥೆ. ಸಾಮಾನ್ಯವಾಗಿ ತಡರಾತ್ರಿ ವೇಳೆಯಲ್ಲಿನ ಬಳಕೆಗೆ ದರ ಕಡಿಮೆ ಹಾಗೂ ಸಂಜೆ ಹಾಗೂ ಬೆಳಗಿನ ವೇಳೆಗೆ ಹೆಚ್ಚಿನ ದರ. ಅದು ಪೀಕ್‌ಅವರ್. ಸಾಧಾರಣವಾಗಿ ದರ ಹೆಚ್ಚಿರುವ ಅವಧಿಯನ್ನು ಹೊರತುಪಡಿಸಿ ದರ ಕಡಿಮೆ ಇರುವ ವೇಳೆ ಹೆಚ್ಚು ವಿದ್ಯುತ್‌ ಪಡೆಯಲು ಉದ್ಯಮದವರು ಇದರಿಂದ ಅವಕಾಶ ಪಡೆದುಕೊಂಡಿರುತ್ತಾರೆ. ಈ ಅವಧಿಯ ಬಳಕೆಯ ಲೆಕ್ಕಾಚಾರದಲ್ಲಿ ಪ್ರಮಾದವೆಸಗಿದ ಮೆಸ್ಕಾಂ ಈ ಮುನ್ನ ಕಡಿಮೆ ಮೊತ್ತಕ್ಕೆ ಬಿಲ್‌ ನೀಡಿತ್ತು. ಇದಕ್ಕೆ ಗ್ರಾಹಕರೇನೂ ತಕರಾರು ಮಾಡುವುದಿಲ್ಲ. ತಮಗೆ ಬಂದ ಪೂರಕ ಬಿಲ್‌ ಪಾವತಿಸಿದರೂ ಅವರಿಗೆ ಇನ್ನೊಂದು ಶಾಕ್‌ ಕಾದಿತ್ತು. ಮತ್ತೆ 1,04,79,225 ರೂ. ಪೂರಕ ಬಿಲ್‌ ಪಾವತಿಸಲು ತಿಳಿಸಲಾಗುತ್ತದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಹಕರು ಸಿಜಿಆರ್‌ಎಫ್ಗೆ ದೂರು ಸಲ್ಲಿಸಿದರು.

ಸಿಜಿಆರ್‌ಎಫ್ನಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯುತ್ಛಕ್ತಿ ಸರಬರಾಜು ನಿಬಂಧನೆಗಳ ನಿಯಮ 29.03ನ್ನು ಬೆಸ್ಕಾಂ ಉಪಭಾಗಾಧಿಕಾರಿಗಳು ಪರಿಪಾಲಿಸಿಲ್ಲ ಎಂಬ ಅಂಶದೊಂದಿಗೆ ದೂರನ್ನು ವಿದ್ಯುತ್ಛಕ್ತಿ ಲೋಕಪಾಲರಿಗೆ ಸಲ್ಲಿಸಲಾಗುತ್ತದೆ. ಪ್ರಕರಣದ ಕೂಲಂಕಷ ವಿಚಾರಣೆ ನಡೆಸಿದ ಒಂಬುಡ್ಸ್‌ಮನ್‌ ತೀರ್ಪು(ಓಎಂಬಿ/ಬಿ/ಜಿ-150/2013/326. ದಿ. 13.02.2014) ಹೊರಡಿಸುತ್ತದೆ. ಬಿಲ್ಲಿಂಗ್‌ ವ್ಯತ್ಯಾಸದ ಸಂದರ್ಭಗಳಲ್ಲಿ ಪೂರಕ ಬಿಲ್‌ ನೀಡಿದಲ್ಲಿ ಗ್ರಾಹಕರ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡುವುದು ಕಡ್ಡಾಯ ಎಂಬುದನ್ನು ಎತ್ತಿಹಿಡಿಯುತ್ತದೆ. ಇದನ್ನು ಕಾಯ್ದೆಯ ನಿಯಮ 29.03ರಲ್ಲಿ ಸ್ಪಷ್ಟಪಡಿಸಲಾಗಿದೆ. ಕಾಯ್ದೆಯ ಪ್ರಕಾರ, ಪೂರಕ ಬಿಲ್‌ ಪ್ರಕರಣಗಳಲ್ಲಿ ಎಸ್ಕಾಂ ಮೊದಲು ಗ್ರಾಹಕರಿಗೆ ನೋಟಿಸ್‌ ನೀಡಿ ಆಕ್ಷೇಪಣೆಯನ್ನು ಆಹ್ವಾನಿಸಬೇಕು. ಆಕ್ಷೇಪಣೆಯನ್ನು ಇತ್ಯರ್ಥಪಡಿಸಿದ ನಂತರ ಮತ್ತೆ ಬಿಲ್‌ ಪಾವತಿಗೆ ಎಂದಿನಂತೆ 15 ದಿನಗಳ ಸಮಯ ಕೊಡಬೇಕು. ಒಂದರ್ಥದಲ್ಲಿ ಪೂರಕ ಬಿಲ್‌ ಪಾವತಿಗೆ ಕನಿಷ್ಠ 30 ದಿನಗಳ ಅವಕಾಶ ಗ್ರಾಹಕನಿಗೆ ಲಭ್ಯವಾಗಲೇಬೇಕು.

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next