Advertisement

ಡಿ.1ರಿಂದ ಮೂಡುಬಿದರೆಯಲ್ಲಿ ಆಳ್ವಾಸ್‌ ನುಡಿಸಿರಿ

12:17 PM Nov 28, 2017 | Team Udayavani |

ಬೆಂಗಳೂರು: ಆಳ್ವಾಸ್‌ ನುಡಿಸಿರಿಯ 14ನೇ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಡಿ.1ರಿಂದ ಮೂರು ದಿನಗಳ ಕಾಲ ಮೂಡುಬಿದರೆಯಲ್ಲಿ ನಡೆಯುವ ನುಡಿಸಿರಿಗೆ ಎಲ್ಲ ರೀತಿಯ ತಯಾರಿ ನಡೆದಿದೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ನಾ. ದಾಮೋದರ ಶೆಟ್ಟಿ, ನುಡಿಸಿರಿಯ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು. ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರು ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗಮನಿಸಿ ಈ ಆಯ್ಕೆ ಮಾಡಲಾಗಿದ್ದು, ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

“ಕರ್ನಾಟಕ: ಬಹುತ್ವದ ನೆಲೆಗಳು’ ಪರಿಕಲ್ಪನೆಯಲ್ಲಿ ನುಡಿಸಿರಿ ನಡೆಯಲಿದ್ದು, ಖ್ಯಾತ ವಿಮರ್ಶಕ ಡಾ.ಸಿ.ಎನ್‌ ರಾಮಚಂದ್ರನ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಕೆ.ಅಭಯ್‌ ಚಂದ್ರ ಜೈನ್‌, ಕೆ.ಅಮರನಾಥ ಶೆಟ್ಟಿ, ಕ್ಯಾಪ್ಟನ್‌ ಗಣೇಶ್‌ ಕಾರ್ಣೀಕ್‌ ಮತ್ತು ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಮೂರು ಗೋಷ್ಠಿಗಳು, ಏಳು ವಿಶೇಷ ಉಪನ್ಯಾಸಗಳು ನಡೆಯಲಿದ್ದು “ಪತ್ರಿಕೆ’ ಕುರಿತು ಡಾ.ನಿರಂಜನ್‌ ವಾನಳ್ಳಿ, “ಅನುಭಾವದ ದೃಷ್ಟಿ ‘ ಕುರಿತು ವೀಣಾ ಬನ್ನಂಜೆ, “ನಂಬಿಕೆ ಮತ್ತು ವೈಚಾರಿಕತೆ’ ಕುರಿತು ಡಾ.ರಂಜಾನ್‌ ದರ್ಗಾ ಮತ್ತು “ಅಭಿವ್ಯಕ್ತಿಯ ಸ್ವಾತಂತ್ರ್ಯದ’ ಕುರಿತು ರವೀಂದ್ರ ರೇಷ್ಮೆ ವಿಚಾರ ಮಂಡಿಸಲಿದ್ದಾರೆ ಎಂದರು.

ಕವಿ ಸಮಯ ಎಂಬ ವಿಶಿಷ್ಟಗೋಷ್ಠಿ ನಡೆಯಲಿದ್ದು, ಕವಿಗಳನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. 15 ಸಾಧಕರಿಗೆ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು. ಒಟ್ಟು 12 ವೇದಿಕೆಗಳಲ್ಲಿ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ಐದು ವೇದಿಕೆಗಳಲ್ಲಿ ಅಹೋರಾತ್ರಿ ಸಂಗೀತ  ಕಾರ್ಯಕ್ರಮಗಳು ನಡೆಯಲಿವೆ. ಆಳ್ವಾಸ್‌ ಕೃಷಿಸಿರಿ ಯನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಉದ್ಘಾಟಿಸಲಿದ್ದು, ಬೆಕ್ಕು, ಜಾನುವಾರು ಮತ್ತು ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.

ಎರಡು ಕಡೆ ಭೋಜನ ತಯಾರಿ: ಈ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು ಜನ ನುಡಿಸಿರಿ ಜಾತ್ರೆಗೆ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಉಟೋಪಚಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎರಡು ಕಡೆ ಭೋಜನದ ತಯಾರಿ ನಡೆದಿದೆ. ಪ್ರತಿ ದಿನ ಒಂದು ಲಕ್ಷ ಮಂದಿಯ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ ಎಂದು ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next