Advertisement

ತೋರಿಕೆಯ ಭಕ್ತಿಗೆ ಅರ್ಥವಿಲ್ಲ

12:40 AM Apr 30, 2019 | Lakshmi GovindaRaju |

ಬೆಂಗಳೂರು: ರಾಷ್ಟ್ರ ಧ್ವಜಕ್ಕೆ ಗೌರವ ಸೂಚಿಸುವ ಮೂಲಕ ದೇಶಭಕ್ತಿ ತೋರಿಸಿದರೆ ಸಾಲದು, ದೇಶದ ಕಾನೂನು, ಸಂವಿಧಾನವನ್ನೂ ಗೌರವಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Advertisement

ಚಾಮರಾಜಪೇಟೆಯಲ್ಲಿನ ಬೆಂಗಳೂರು ಗಾಯನ ಸಮಾಜದಲ್ಲಿ ಹರಿದಾಸ ಸಂಪದ ಟ್ರಸ್ಟ್‌, ಸೋಮವಾರ ಆಯೋಜಿಸಿದ್ದ “ಹರಿದಾಸ ಹಬ್ಬ 18ನೇ ವಾರ್ಷಿಕೋತ್ಸವ’ದಲ್ಲಿ “ದಾಸಸಾಹಿತ್ಯದೀಪಿಕ’ ಜಾಲತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೊರಿಕೆಯ ದೇಶ ಭಕ್ತಿ ಮತ್ತು ಭಗವಂತನ ಭಕ್ತಿ ಎರಡಕ್ಕೂ ಅರ್ಥವಿಲ್ಲ ಎಂದರು.

ಕೇವಲ ಕಾನೂನಿನಿಂದ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಎಷ್ಟೇ ಕಾನೂನುಗಳಿದ್ದರೂ, ಮನುಜ ಅವುಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ಪರಮಾತ್ಮನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ದಾಸಸಾಹಿತ್ಯ ಸಾಮಾಜದಲ್ಲಿ ಭಕ್ತಿಕ್ರಾಂತಿ, ನೈತಿಕ ಕ್ರಾಂತಿ ಉಂಟು ಮಾಡಿದೆ. ನೈತಿಕ ಪ್ರಜ್ಞೆ ಬೆಳಸಿದೆ. ಅದೇ ರೀತಿ ಭಕ್ತಿ ಎಂದರೆ ಕೇವಲ ಪ್ರಾರ್ಥನೆಯಲ್ಲ ಎಂದ ಶ್ರೀಗಳು, ಭಕ್ತಿ, ಭಜನೆಯ ಜತೆ ಉತ್ತಮ ಚಾರಿತ್ರ್ಯ ರೂಢಿಸಿಕೊಳ್ಳಬೇಕು. ಚಾರಿತ್ರ್ಯ ತ್ತಮವಾಗಿ ಇಲ್ಲದಿದ್ದರೆ, ಭಕ್ತಿ ಇದ್ದೂ ಪ್ರಯೋಜನವಿಲ್ಲ ಎಂದು ಹೇಳಿದರು.

ದೇವರ ಶಾಸನಗಳಾದ ಭಗವದ್ಗೀತೆ, ಉಪನಿಷತ್‌ಗಳಲ್ಲಿರುವ ಆದರ್ಶ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವುಗಳಿಗೆ ಗೌರವ ನೀಡಬೇಕು. ಕೆಟ್ಟದ್ದನ್ನು ಮಾತನಾಡಬಾರದು. ಕೆಟ್ಟದ್ದನ್ನು ಯೋಚಿಸಲೈ ಬಾರದು. ಹಾಗೇ, ಮಹಿಳೆಯರನ್ನು ಕೆಟ್ಟ ದೇಷ್ಟಿಯಿಂದ ನೋಡಬಾರದು. ಇದು ದೇವರೇ ಬರೆದಿರುವ ಪತ್ರ ಎಂದು ದಾಸರು ಹೇಳಿದ್ದಾರೆ ಎಂದು ಶ್ರೀಗಳು ದಾಸರ ಕೀರ್ತನೆಯ ಉಲ್ಲೇಖ ನೀಡಿದರು.

Advertisement

ಕೆಲವೊಮ್ಮೆ ಯಾರಾದರು ಸಾವನ್ನಪ್ಪಿದರೆ ಅವರ ಪರವಾಗಿ ದುಃಖೀಸುವುದಕ್ಕೆ ಯಾರೂ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಹಣ ನೀಡಿ, ಅಳುವುದಕ್ಕೆ ಕರೆದುಕೊಂಡು ಬರುತ್ತಾರೆ. ಆದರೆ, ಭಕ್ತಿಗೆ ಇಂತಹ ಸ್ಥಿತಿ ಬರಬಾರದು. ದೇವರ ಬಗ್ಗೆ ನಿಜವಾದ ಭಕ್ತಿ ಬೆಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಬಲ್ಲ ಶಕ್ತಿ ಹರಿದಾಸರ ಸಾಹಿತ್ಯದಲ್ಲಿದೆ ಎಂದರು.

ಗುಟೆಯ (ಒಳಕಲ್ಲು) ಒಳಗಿರುವ ಧಾನ್ಯ ಪುಡಿಪುಡಿಯಾಗುತ್ತದೆ. ಆದರೆ ಗೂಟೆಯಿಂದ ಹೊರಕ್ಕೆ ಚಿಮ್ಮುವ ಧಾನ್ಯ ಅಪೂರ್ಣವಾಗಿ ವ್ಯರ್ಥವಾಗುತ್ತದೆ. ಧಾನ್ಯವು ಗುಟೆ ಒಳಗಿರುವಂತೆ, ನಾವು ದೇವರ ಭಕ್ತಿಯಲ್ಲಿ ಅಂತರ್ಗತವಾಗಬೇಕು. ಇದಕ್ಕೆ ದಾಸ ಸಾಹಿತ್ಯ ಸಹಕಾರಿಯಾಗಿದೆ. ಸಮಾಜ ಸುಧಾರಣೆ ಹಾಗೂ ವ್ಯಕ್ತಿಯ ಬೆಳವಣಿಗೆಗೆ ಭಕ್ತಿಯ ಅಗತ್ಯವಿದೆ ಎಂದು ಹೇಳಿದರು.

“ದಾಸ ಸಾಹಿತ್ಯ ದೀಪಿಕ’ ಜಾಲತಾಣದ ಮುಖ್ಯಸ್ಥ ವೆಂಕಟೇಶ್‌ ಮಾತನಾಡಿ, ಜಾಲತಾಣದಲ್ಲಿ ದಾಸ ಸಾಹಿತ್ಯದ 100ಕ್ಕೂ ಹೆಚ್ಚು ಕೀರ್ತನೆಗಳು, 15 ಸಾವಿರಕ್ಕೂ ಹೆಚ್ಚು ದಾಸರ ಕೀರ್ತನೆಗಳಲ್ಲಿ ಇರುವ ಕಠಿಣ ಪದಗಳ ಅರ್ಥದ ಜತೆಗೆ, ವಿವರಣೆ ಕೂಡ ನೀಡಲಾಗಿದೆ. ಇದರೊಂದಿಗೆ ಶುದ್ಧ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ವ್ಯಾಸರಾಜ ಮಠದಿಂದ ಗಾಯನ ಸಮಾಜದವರೆಗೆ ಮೆರವಣಿಗೆ ನಡೆಯಿತು. ಈ ವೇಳೆ ಹಲವು ಕಲಾವಿದರು ದಾಸರ ಕೀರ್ತನೆಗಳನ್ನು ಹಾಡಿದರು. ಹರಿದಾಸ ಸಂಪದ ಟ್ರಸ್ಟ್‌ನ ಗೌರವಾಧ್ಯಕ್ಷ ಡಾ.ಎಂ.ಆರ್‌.ವಿ.ಪ್ರಸಾದ್‌, ಕಾರ್ಯಾಧ್ಯಕ್ಷ ಅನಂತ ಕುಲಕರ್ಣಿ ಅವರಿಗೆ ವಿಶ್ವೇಶತೀರ್ಥ ಸ್ವಾಮೀಜಿ “ಹರಿದಾಸ ಕೌಸ್ತುಭ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next