ಬಂಗಾರಪೇಟೆ: ಪಟ್ಟಣದಲ್ಲಿ ಕೋಲಾರ ರೈಲ್ವೆ ಪ್ಲಾಟ್ಫಾರಂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ, ಕಾಮಗಾರಿ ಇನ್ನೂ ಮುಗಿದೇ ಇಲ್ಲ,. ಅಷ್ಟರಲ್ಲಾಗಲೇ ಅಲ್ಲಲ್ಲಿ ಸಿಮೆಂಟ್ ಬಿರುಕು ಬಿಟ್ಟು ಕಳಪೆ ಪ್ರದರ್ಶನ ವಾಗಿದೆ. ಆದರೂ ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿ ಕಾರಿಗಳು ಕ್ರಮ ಜರುಗಿಸದೇ ಕಣ್ಣು ಮುಚ್ಚಿ ಕುಳಿತಿದ್ದಾರೆ.
ವರ್ಷದಿಂದ ನಡೆಯುತ್ತಿರುವ ಈ ಕಾಮಗಾರಿ ಇನ್ನು ಪೂರ್ಣಗೊಳಿಸಿಲ್ಲ, ಕಾಮಗಾರಿ ಸ್ಥಗಿತವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಒಂದು ಭಾಗದಲ್ಲಿ ಪ್ಲಾಟ್ಫಾರಂ ಕಾಮಗಾರಿ ನಡೆದಿದ್ದು, ಅದೂ ಕಳಪೆಯಾಗಿದೆ, ಕೆಲವು ಕಡೆ ಪ್ಲಾಟ್ಫಾರಂ ಬಿರುಕು ಬಿಟ್ಟಿದ್ದು, ಉದ್ಘಾಟ ನೆಗೆ ಮುಂಚೆಯೇ ಈ ರೀತಿಯಾಗಿರುವುದು ಖಂಡ ನೀಯ. ಈ ಬಗ್ಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರು ವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅದೇ ರೀತಿ ಕೋಲಾರ ಪ್ಲಾಟ್ಫಾರಂ ಕಾಮಗಾರಿ ಮಾಡುವಾಗ ಅವೈಜ್ಞಾನಿಕವಾಗಿ ಇದ್ದ ರೈಲ್ವೆಗೇಟ್ ಅನ್ನು ಬಂದ್ ಮಾಡಿದ್ದು, ಅರ್ಧ ಕಿ.ಮೀ. ಸುತ್ತಿಕೊಂಡು ಹೋಗಬೇಕಾಗಿದೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಾಗಿದೆ. ಕೋಲಾರ ಮತ್ತು ಬೂದಿಕೋಟೆ ಎರಡು ರೈಲ್ವೆ ಗೇಟ್ ಸುತ್ತಿಕೊಂಡು ಬರುವ ವೇಳೆಗೆ ಪ್ರಯಾಣಿಕರು ಸುಸ್ತಾಗುತ್ತಾರೆ. ಪ್ರತಿ ದಿನ ಕೆಲಸಕ್ಕೆ ಹೋಗುವವರಿಗೆ, ಕೂಲಿ ಕಾರ್ಮಿಕರಿಗೆ ಅಸ್ಪತ್ರೆಗೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದೆ. ಬೂದಿಕೋಟೆ ಮಾಲೂರು ಕಡೆಗೆ ಹೋಗುವ ಪ್ರಯಾಣಿ ಕರಿಗೂ ತೊಂದರೆ ಉಂಟಾಗಿದೆ.
ಈ ರೈಲ್ವೆ ಗೇಟ್ ನಿರ್ಮಾಣ ಮಾಡುವಾಗ ಅವೈಜ್ಞಾನಿಕವಾಗಿ ರಸ್ತೆ ಮಾಡಿದ್ದು, ಇದರಿಂದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಸಾರ್ವಜನಿಕರು ಪರದಾಡು ವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ರೈಲ್ವೆ ಅಧಿಕಾರಿ ಗಳ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು. ಆದರೆ, ಇದಕ್ಕೆಲ್ಲ ರೈಲ್ವೆ ಇಲಾಖೆ ಕಿವಿಗೊಡುತ್ತಿಲ್ಲ.
ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶಗೊಂಡು, ಕಾರ್ಯಕ್ರಮವೊಂದರಲ್ಲಿ ಸಂಸದ ಎಸ್.ಮುನಿಸ್ವಾಮಿಗೆ ಸೂಚಿಸಿ ರೈಲ್ವೆ ಗೇಟ್ ಅನ್ನು ಈ ಹಿಂದೆ ಇದ್ದ ಕಡೆ ತೆರೆಯಬೇಕು, ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆಯನ್ನು ಸಹ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಬದಲಾವಣೆಗಳಾಗದೇ ಪ್ರಯಾಣಿಕರು, ಸಾರ್ವಜನಿಕರು ಪರದಾಡುವಂತಾಗಿದೆ.
ಇನ್ನು ರೈಲ್ವೆ ಇಲಾಖೆ ನಿರ್ಮಾಣ ಮಾಡಿರುವ ಅಂಡರ್‌ಪಾಸ್‌ಗಳು ಮಳೆ ಬಂದಲ್ಲಿ ನದಿಗಳಂತೆ ನೀರು ತುಂಬಿ ವಾಹನ ಸವಾರರು, ಹಳ್ಳಿಗಳಿಗೆ ಹೋಗುವ ಗ್ರಾಮಸ್ಥರು ಪರದಾಡುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ರೈಲ್ವೆ ಅಧಿಕಾರಿಗಳು ಗಮನ ಹರಿಸದೇ ಇರುವುದು ವಿಪರ್ಯಾಸವೇ ಸರಿ. ಕಾಮಗಾರಿ ಪೂರ್ಣಗೊಳಿಸುವ ನೆಪದಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಮಾಡುವುದು ಸರಿಯೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
● ಎಂ.ಸಿ.ಮಂಜುನಾಥ್