Advertisement
ಮೂಲ್ಕಿ : ಬಾಲ್ಯದಲ್ಲಿ ಪ್ರತಿ ಹೆಜ್ಜೆಗೂ ಕಷ್ಟದ ಜೀವನ. ಆದರೂ ದೇಶಸೇವೆ ಮಾಡಬೇಕೆಂಬ ಛಲದಿಂದ ಸೇನೆಗೆ ಸೇರಿ ಬದುಕು ಕಟ್ಟಿದವರು ಸುರತ್ಕಲ್‌ನ ಮನೋಜ್ ಕುಮಾರ್. ಭೂಸೇನೆಯ ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಿಪಾಯಿ ಹುದ್ದೆಯಲ್ಲಿರುವ ಅವರು ಸೇನಾ ಟ್ರಕ್ ಚಾಲಕರು.
ಸುರತ್ಕಲ್‌ನ ಸೂರಿಂಜೆ ಸನಿಹದ ಕಾಂತಪ್ಪ-ಜಯಂತಿ ಸಾಲ್ಯಾನ್ ದಂಪತಿ ಪುತ್ರರಾದ ಮನೋಜ್ ಬಾಲ್ಯದಲ್ಲಿ ಬಡತನ ಅನುಭವಿಸಿ, ಹಂತ ಹಂತವಾಗಿ ಮೇಲೆ ಬಂದವರು. 8ನೇ ವಯಸ್ಸಿನ ಬಾಲಕರಾಗಿದ್ದಾಗ ಅವರ ತಂದೆ ನಿಧನ ಹೊಂದಿದ್ದರು. ಬಳಿಕ ತಾಯಿ ಗದ್ದೆ, ತೋಟಗಳಲ್ಲಿ ಕೂಲಿ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದರು. ಆದರೆ ಮನೋಜ್ ಅವರು ಹೈಸ್ಕೂಲ್ ಶಿಕ್ಷಣ ಪಡೆಯುತ್ತಿರುವಾಗ ತಾಯಿಗೆ ಅನಾರೋಗ್ಯವಾಗಿದ್ದು ಕುಟುಂಬ ತೀವ್ರ ಸಮಸ್ಯೆಗೆ ಸಿಲುಕಿತ್ತು. ಮನೋಜ್ ಮತ್ತು ಅವರ ಅಣ್ಣ ಕಾಂಕ್ರೀಟ್ ಹೊತ್ತು, ಹೊಟೇಲ್‌ಗಳಲ್ಲಿ ಪ್ಲೇಟ್-ಗ್ಲಾಸ್ ತೊಳೆದು ಮನೆ ಜವಾಬ್ದಾರಿ ನಿಭಾಯಿಸಿದರು. ಸೋದರಿಯರಾದ ಪವಿತ್ರಾ, ಲತಾ ಅವರ ವಿವಾಹ ಜವಾಬ್ದಾರಿ ಬಳಿಕವೇ ಮನೋಜ್ ಅವರ ಅಣ್ಣ, ಟೆಂಪೋ ಚಾಲಕರಾಗಿ ದುಡಿಯುತ್ತಿರುವ ಭಾಸ್ಕರ್ ಮತ್ತು ಮನೋಜ್ ಅವರು ವಿವಾಹವಾಗಿದ್ದಾರೆ. ಮನೋಜ್, ಪವಿತ್ರ ಅವರ ಕೈಹಿಡಿದಿದ್ದಾರೆ. ಬಾಲ್ಯದಲ್ಲಿ ಕಷ್ಟದ ಜೀವನ ಕಂಡ ಮನೋಜ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುರತ್ಕಲ್‌ನ ವಿದ್ಯಾದಾಯಿನಿ ಶಾಲೆಯಲ್ಲಿ ಹಾಗೂ ಗೋವಿಂದ ದಾಸ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮಾಡಿದ್ದರು. ಇದೇ ಸಂದರ್ಭ ಅವರನ್ನು ಸೇನೆ ನೇಮಕಾತಿ ಜಾಹೀರಾತು ಆಕರ್ಷಿಸಿತ್ತು.
Related Articles
ಹೈಸ್ಕೂಲ್‌ನಲ್ಲಿದ್ದಾಗಲೇ ಸೇನೆಯ ಬಗ್ಗೆ ಹೇಳಿ ಸೇರುವಂತೆ ಪ್ರೋತ್ಸಾಹಿಸಿದವರು ಬಾಲಚಂದ್ರ ಮೇಷ್ಟ್ರು. ಇದರಿಂದ ದೇಶಸೇವೆಯ ಆಸಕ್ತಿ ಮನೋಜ್ ಅವರಲ್ಲಿ ತೀವ್ರವಾಗಿತ್ತು. ಪಿಯುಸಿಯಲ್ಲಿದ್ದಾಗ ಸೇನೆಗೆ ಸೇರಲು ಮನಸ್ಸು ಮಾಡಿದ್ದರಿಂದ ಪ್ರೇರಣೆ, ಮಾರ್ಗದರ್ಶನ ನೀಡಿದವರು ಲೀಲಾಧರ್ (ಮಾಜಿ ಸೈನಿಕರು). ಇವರು ಮನೋಜ್ ಅವರಿಗೆ ಸೇನೆ ಸೇರಲು ಸಂಪೂರ್ಣ ಬೆಂಬಲ, ಪ್ರೇರಣೆ ನೀಡಿದರು. ತಯಾರಿ ಬಗ್ಗೆ ತಿಳಿಸಿಕೊಟ್ಟರು. ಆದ್ದರಿಂದ ಸೇನೆಗೆ ಸೇರುವುದು ಸುಲಭವಾಯಿತು.
Advertisement
ಸೇನೆಯಲ್ಲಿ ಟ್ರಕ್ ಚಾಲಕ2002 ಫೆ. 13ರಂದು ಸೇನೆಗೆ ಸೇರ್ಪಡೆಯಾದ ಮನೋಜ್ ಅವರು ಭೋಪಾಲ್‌ನಲ್ಲಿ ತರಬೇತಿ ಮುಗಿಸಿ, ಸಿಪಾಯಿ ಹುದ್ದೆಯಲ್ಲಿ ಟ್ರಕ್ ಚಾಲಕರಾಗಿ ನಿಯುಕ್ತಿಗೊಂಡರು. ಚಾಲಕನ ಕರ್ತವ್ಯದೊಂದಿಗೆ ಎಲೆಕ್ಟ್ರಿಕಲ್ ಸಂಗತಿಗಳ ಮಾಹಿತಿ ಅವರಿಗಿದ್ದುದರಿಂದ ಆ ಕೆಲಸಕ್ಕೂ ಅವರನ್ನು ಕೆಲವೆಡೆ ನಿಯೋಜಿಸಲಾಗುತ್ತಿತ್ತು. ಸರ್ವಿಸ್ ಅವಧಿಯಲ್ಲಿ ಶ್ರೀನಗರ, ಪಂಜಾಬ್‌ನ ಭಟಿಂಡಾ, ನಾಗಾಲ್ಯಾಂಡ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಝಾನ್ಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮನೋಜ್‌ಅವರಿಗೀಗ ರಾಜಸ್ಥಾನದ ಅಳ್ವಾರ್‌ಗೆ ವರ್ಗವಾಗಿದೆ. 2019ರಲ್ಲಿ ಅವರು ನಿವೃತ್ತರಾಗಲಿದ್ದಾರೆ. 16 ವರ್ಷ ಸಿಪಾಯಿ ಹುದ್ದೆಯಲ್ಲೇ ಇದ್ದು, ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದರೆ, ಉತ್ತಮ ಹುದ್ದೆಗೆ ಭಡ್ತಿ ಸಿಗುತ್ತಿತ್ತು ಎಂಬ ಕೊರಗು ಅವರಿಗಿದೆ. ಟ್ರಕ್ ಸವಾರಿಯ ರೋಚಕತೆ
ಸೇನೆಯಲ್ಲಿ ಟ್ರಕ್ ಚಾಲಕರಾಗುವುದೆಂದರೆ ಸುಮ್ಮನೇ ಅಲ್ಲ. ಅಪಾರ ಅನುಭವ ಬೇಕು. ಅದಕ್ಕೆಂದೇ ವಿಶೇಷ ತರಬೇತಿ ಇದೆ. ಎಂತಹ ದುರ್ಗಮ ಪ್ರದೇಶದಲ್ಲಾದರೂ ಚಾಲನೆಯ ಛಾತಿ ಬೇಕು. ದುರ್ಗಮ, ಶೀತ ಪ್ರದೇಶಗಳಲ್ಲಿ ಚಾಲನೆ ವೇಳೆ ಟ್ರಕ್ ಟಯರ್‌ಗೆ ಸಂಕೋಲೆಗಳನ್ನು ಹಾಕಿ, ರಸ್ತೆಯಿಂದ ಟ್ರಕ್ ಜಾರದಂತೆ ಚಾಲನೆ ಮಾಡಲಾಗುತ್ತದೆ. ಟ್ರಕ್ ಚಾಲಕರಾಗಿದ್ದವರಿಗೆ ಯಾವುದೇ ಹೊತ್ತಿನಲ್ಲಿ ಕರೆ ಬರುತ್ತದೆ. ಅಗತ್ಯವಿದ್ದರೆ ಬಂದೂಕು ಕೈಗೆತ್ತಿಕೊಳ್ಳಲೂ ನಾವು ತಯಾರು ಎನ್ನುತ್ತಾರೆ ಮನೋಜ್. 9 ಉಗ್ರರು ಹತ
2008ರಲ್ಲಿ ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆಗೆ ನಿಯುಕ್ತಿಗೊಂಡಿದ್ದಾಗ ಮನೋಜ್ ಅವರು ಉಗ್ರ ಸಂಹಾರ
ಕಾರ್ಯಾಚರಣೆಯೊಂದರಲ್ಲಿ ಭಾಗಿಯಾಗಿದ್ದರು. ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ಸೇನೆ ಎನ್‌ಕೌಂಟರ್ ಸಿದ್ಧತೆ ನಡೆಸಿದ್ದರು. ಈ ವೇಳೆ ಮನೆ ಸುತ್ತಲೂ ಬಂದೋಬಸ್ತ್, ಕಾರ್ಯಾಚರಣೆ ನಡೆಸುವ ಜಾಗದಲ್ಲಿ ಲೈಟ್ ವ್ಯವಸ್ಥೆ ಭದ್ರತೆ ಇತ್ಯಾದಿಗಳನ್ನು ಮಾಡಿದ್ದರು. 36 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಮೇಜರ್ ಒಬ್ಬರು ಮೃತಪಟ್ಟು ಸೈನಿಕರಿಗೆ ಗಾಯಗಳಾಗಿದ್ದವು. ಕೊನೆಯಲ್ಲಿ 9 ಉಗ್ರರನ್ನು ಹತ್ಯೆಗೈಯಲಾಗಿತ್ತು. ತಾಯಿಯ ಶ್ರಮ
ನಮ್ಮನ್ನು ಈ ಸ್ಥಿತಿಗೆ ತರಲು ನಮ್ಮ ತಾಯಿ ಪಟ್ಟಿರುವ ಶ್ರಮ ಮರೆಯಲಾಗದ್ದು. ಪಿಯುಸಿ ಕಲಿಯುತ್ತಿರುವಾಗ ಮನೋಜ್ ಸೇನೆಗೆ ಆಯ್ಕೆಯಾಗಿದ್ದ. ಕುಟುಂಬದವರ ನೆರವು, ಆತನ ಆಸೆಯಂತೆ ಸೇನೆಗೆ ಕಳುಹಿಸಿದ್ದೆವು. ಆತ ದೇಶಸೇವೆಗೈಯುತ್ತಿರುವುದು ನಮಗೆ ಸಂತಸ ಮತ್ತು ಹೆಮ್ಮೆ.
ಭಾಸ್ಕರ್ ಸಾಲ್ಯಾನ್, ಮನೋಜ್ ಸೋದರ ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ತುಡಿತ ಯುವಕರಿಗಿರಬೇಕು. ಇಷ್ಟವಿರುವ, ಉತ್ತಮ ಕೆಲಸಗಳನ್ನು ದೇಶಕ್ಕಾಗಿ ಮಾಡಿ. ಸೇನೆಗೆ ಸೇರಬೇಕೆನ್ನುವವರನ್ನು ಮುಕ್ತವಾಗಿ ಬೆಂಬಲಿಸಬೇಕಿದೆ.
– ಮನೋಜ್ ಕುಮಾರ್ ಸರ್ವೋತ್ತಮ ಅಂಚನ್ ಮೂಲ್ಕಿ