Advertisement

ಅಡಿಕೆ ಎಲೆ ಹಳದಿ ರೋಗ ವಿಸ್ತರಣೆ ತಡೆಗೆ ಪ್ಲಾಸ್ಟಿಕ್‌ ಹೊದಿಕೆ

09:56 PM Sep 30, 2021 | Team Udayavani |

ಗುತ್ತಿಗಾರು: ಅಡಿಕೆ ಎಲೆಹಳದಿ ರೋಗ ವೇಗವಾಗಿ ಹಬ್ಬುತ್ತಿದ್ದು, ಇದರ ತಡೆಗೆ ಅಡಿಕೆ ತೋಟಕ್ಕೆ ಪ್ಲಾಸ್ಟಿಕ್‌ ಹೊದಿಕೆ ಹಾಸುವುದು ಪರಿಹಾರವಾಗಬಲ್ಲುದು ಎಂದು ಸಿಪಿಸಿಆರ್‌ಐಯ ಮಾಜಿ ನಿರ್ದೇಶಕ ಡಾ| ಚೌಡಪ್ಪ ಈಚೆಗೆ ಹೇಳಿಕೆ ನೀಡಿದ್ದರು. ಮರ್ಕಂಜ ಗ್ರಾಮದ ತೋಟವೊಂದರಲ್ಲಿ ಇದನ್ನು ಪ್ರಾಯೋಗಿಕವಾಗಿ ನಡೆಸಲಾಗಿದ್ದು, ರೋಗ ವಿಸ್ತರಣೆಗೆ ತಡೆಯಾಗಿದೆ.

Advertisement

ಮರ್ಕಂಜ ಗ್ರಾಮದ ಕೃಷಿಕ ರಾಘವ ಅವರ ತೋಟ ದಲ್ಲಿ ಈ ಪ್ರಯೋಗ ನಡೆದಿದ್ದು, ರೋಗ ಪ್ರಸರಣ ತಡೆಗೆ ಸಹಕಾರಿಯಾಗಿರುವ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಸುಳ್ಯ ತಾಲೂಕಿನ ಹಲವು ಪ್ರದೇಶದಲ್ಲಿ ಕಂಡುಬಂದಿದ್ದ ಅಡಿಕೆ ಹಳದಿ ಎಲೆ ರೋಗ ಈಗ ಹಲವು ಕಡೆಗಳಿಗೆ ವಿಸ್ತರಣೆಯಾಗಿದೆ. ಇದಕ್ಕೆ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ವಿವಿಧ ಅಧ್ಯಯನ, ಸಂಶೋಧನೆಗಳು ನಡೆಯುತ್ತಿದ್ದರೂ ಖಚಿತ ಪರಿಹಾರ ಸಿಕ್ಕಿಲ್ಲ. ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಐದು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಕೆಲವು ಅಧ್ಯಯನಗಳನ್ನು ಆರಂಭಿಸಿತ್ತು. ಅವುಗಳಲ್ಲಿ ಅಡಿಕೆ ಹಳದಿ ಎಲೆ ರೋಗದ ತೋಟದಲ್ಲಿ ಮಣ್ಣಿಗೆ ಪ್ಲಾಸ್ಟಿಕ್‌ ಹೊದಿಕೆ ಹಾಕುವುದೂ ಒಂದು. ಹಳದಿ ಎಲೆ ರೋಗ ಪ್ರಾರಂಭಿಕ ಹಂತದಲ್ಲಿದ್ದರೆ ಪ್ಲಾಸ್ಟಿಕ್‌ ಹೊದಿಕೆಯ ವಿಧಾನ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವನ್ನು ತಂಡ ವ್ಯಕ್ತಪಡಿಸಿತ್ತು.

ರೋಗ ನಿರೋಧಕ ತಳಿ ಅಭಿವೃದ್ಧಿ ಆಶಾವಾದ:

ಈ ನಡುವೆ ಅಡಿಕೆ ಹಳದಿ ರೋಗಕ್ಕೆ ಪರಿಹಾರ ಮತ್ತು ನಿಯಂತ್ರಣದ ಬದಲಾಗಿ ರೋಗ ನಿರೋಧಕ ತಳಿ ಅಭಿವೃದ್ಧಿ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ. ರೋಗ ನಿರೋಧಕ ತಳಿ ಅಭಿವೃದ್ಧಿಯ ಜತೆ ಅದನ್ನು ರೈತರು ಬೆಳೆದಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಅಡಿಕೆ ಸಸಿಗಳನ್ನು ಪಡೆಯುವ ಸಾಧ್ಯತೆ ಹೆಚ್ಚು.

Advertisement

ಸುಮಾರು 25 ವರ್ಷಗಳಿಂತಲೂ ಹಳೆಯ, ಹಳದಿ ಎಲೆ ರೋಗ ಬಾಧಿತ ತೋಟ ದಲ್ಲಿ ಈಗಲೂ ಹಸುರಾಗಿರುವ ಮರ ಗಳನ್ನು ಆಯ್ಕೆ ಮಾಡಿ, ಕೃತಕ ಪರಾಗಸ್ಪರ್ಶ ನಡೆಸಿ ಲಭ್ಯವಾಗುವ ಅಡಿಕೆಗಳಿಂದ ಗಿಡ ಮಾಡಿ ಬೆಳೆದರೆ ರೋಗ ನಿರೋಧಕ ತಳಿ ಸಿಗಬಹುದು ಎಂಬುದು ಅಧ್ಯಯನದ ಸಾರ. ಇಂತಹ ಅಡಿಕೆ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ ಎಂದು ಪ್ರತಿಪಾದಿಸಲಾಗಿದೆ. ಈ ನಿಟ್ಟಿನಲ್ಲಿ ಈಗ ಪ್ರಯೋಗ ನಡೆಯಬೇಕಿದೆ.

ಮಳೆಗಾಲ ಆರಂಭದಲ್ಲಿ ತೋಟದ ಮಣ್ಣಿಗೆ ನೀರು ಹರಿಯದಂತೆ ಇಡೀ ತೋಟಕ್ಕೆ ಪ್ಲಾಸ್ಟಿಕ್‌ ಹಾಕಿ ಮಳೆಗಾಲದ ಅನಂತರ ತೆಗೆಯಲಾಗುತ್ತದೆ. ಪ್ರಾಯೋ ಗಿಕ ವಾಗಿ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ರೋಗ ಇರುವ ಕಡೆಯ ಎರಡು ತೋಟಗಳಲ್ಲಿ ಐದು ವರ್ಷಗಳಿಂದ ಅಧ್ಯಯನ ಮಾಡುತ್ತಿದೆ. ಮರ್ಕಂಜದ ಎರಡು ತೋಟಗಳು, ಕಲ್ಮಕಾರಿನಲ್ಲಿ ಒಂದು ಮತ್ತು ಶೃಂಗೇರಿಯ ಎರಡು – ಒಟ್ಟು ಐದು ತೋಟಗಳಲ್ಲಿ ಈ ಪ್ರಯೋಗ ನಡೆದಿದೆ. ಮರ್ಕಂಜದ ಹರ್ಲಡ್ಕ ರಾಘವ ಅವರ ತೋಟದಲ್ಲಿ 60 ಅಡಿಕೆ ಮರಗಳ ಬುಡದ ಸುತ್ತ ಪ್ಲಾಸ್ಟಿಕ್‌ ಹೊದಿಕೆ ಹಾಕ ಲಾಗಿತ್ತು. ಐದು ವರ್ಷಗಳ ಕಾಲ ನಿರ್ವಹಣೆ ಮಾಡಿದ್ದು, ಈಗ ತೋಟ ದಲ್ಲಿ ರೋಗ ವಿಸ್ತರಣೆಯ ಪ್ರಮಾಣ ಕಡಿಮೆ ಇದೆ ಎಂದು ರಾಘವ ಹೇಳು ತ್ತಾರೆ. ಈ ಬಗ್ಗೆ ವಿಜ್ಞಾನಿಗಳು ದಾಖಲೆಗಳನ್ನು ಇನ್ನಷ್ಟೇ ನೀಡಬೇಕಿದೆ.

ಐದು ತೋಟಗಳಲ್ಲಿ  ಪ್ರಯೋಗ :

ಅಡಿಕೆ ತೋಟಕ್ಕೆ ಪ್ಲಾಸ್ಟಿಕ್‌ ಹೊದಿಕೆ ಪ್ರಯೋಗದ ಬಗ್ಗೆ ಅಧ್ಯಯನ ನಡೆಯುತ್ತಿದೆ. ಕೆಲವೇ ಸಮಯದಲ್ಲಿ ಇದರ ಕುರಿತು ಅಂಕಿಅಂಶ ಸಹಿತ ವರದಿ ನೀಡಲಾಗುವುದು. ಸದ್ಯ ಹೆಚ್ಚು ರೋಗ ಬಾಧಿತ ಅಡಿಕೆ ತೋಟದಲ್ಲಿ ಇನ್ನೂ ಹಸಿರಾಗಿರುವ ಅಡಿಕೆ ಮರದ ಪರಾಗಸ್ಪರ್ಶ ಪ್ರಕ್ರಿಯೆ ನಡೆಸಿ ಹೊಸ ತಳಿ ಅಭಿವೃದ್ಧಿ ಕುರಿತು ಪ್ರಯೋಗ ನಡೆಯುತ್ತಿದೆ. ಇದು ಯಶಸ್ವಿಯಾದಲ್ಲಿ ರೈತರಿಗೆ ಪ್ರಯೋಜನಕಾರಿ.ಡಾ| ಅನಿತಾ ಕರುಣ್‌, ಸಿಪಿಸಿಆರ್‌ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next