Advertisement

ಪ್ಲಾಸ್ಟಿಕ್‌ ಬಳಕೆ: ದಂಡ ಪ್ರಯೋಗ

12:44 AM Jul 17, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್‌ ಬಳಸುವ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಿಸುವ ಅಸ್ತ್ರವನ್ನು ಬಿಬಿಎಂಪಿ ಮುಂದುವರಿಸಿದೆ.

Advertisement

ಪ್ಲಾಸ್ಟಿಕ್‌ ಬಳಕೆಯ ನಿಷೇಧ ಆಂದೋಲನದ ಭಾಗವಾಗಿ ಪಾಲಿಕೆಯ ಎಂಟು ವಲಯಗಳ ಪ್ರಮುಖ ಸ್ಥಳಗಳಲ್ಲಿರುವ ಸಗಟು ವ್ಯಾಪಾರ ಮಳಿಗೆಗಳ ಮತ್ತು ಅಂಗಡಿ ಮಾಲೀಕರ ಮೇಲೆ ಪಾಲಿಕೆಯ ಆರೋಗ್ಯಾಧಿಕಾರಿ ನೇತೃತ್ವದ ತಂಡಗಳು ದಾಳಿ ನಡೆಸಿದ್ದು,

ಪ್ಲಾಸ್ಟಿಕ್‌ ಕೈ ಚೀಲ, ತಟ್ಟೆ, ಪಾಲಿಥಿನ್‌ ಬ್ಯಾಗ್‌ ಸೇರಿದಂತೆ ವಿವಿಧ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನ ಮಾರಾಟ ಮಾಡುತ್ತಿದ್ದ 559 ಮಳಿಗೆಗಳು ಮತ್ತು 439 ಬೀದಿಬದಿ ವ್ಯಾಪಾರಿ ಅಂಗಡಿಗಳಿಂದ ಒಟ್ಟು 1,335 ಕೆ.ಜಿ ಪ್ಲಾಸ್ಟಿಕ್‌ ಜಪ್ತಿ ಮಾಡಿದ್ದು, 4.36 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಆಂದೋಲನಕ್ಕೆ ಸೋಮವಾರ ಮೇಯರ್‌ ಚಾಲನೆ ನೀಡಿದ್ದರು. ಸೋಮವಾರ 2.95 ಲಕ್ಷ ರೂ. ದಂಡ ಸಂಗ್ರಹಿಸಲಾಗಿತ್ತು. ಮಂಗಳವಾರ ಕಾರ್ಯಾಚರಣೆ ಮುಂದುವರಿದಿದ್ದು, 4.36 ಲಕ್ಷ ರೂ. ಮೊತ್ತದ ದಾಖಲೆ ದಂಡ ಸಂಗ್ರಹಿಸಲಾಗಿದೆ.

ದಕ್ಷಿಣ ವಲಯದಲ್ಲಿ ಶ್ರೀನಗರ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌, ಕೋರಮಂಗಲ ಕ್ಲಬ್‌ ರಸ್ತೆ, ಮಡಿವಾಳ ಸಂತೆ, ಜಯನಗರ 2ನೇ ಬ್ಲಾಕ್‌ ಹಾಗೂ 8, 9ನೇ ಮುಖ್ಯ ರಸ್ತೆಗಳ ಸುತ್ತಮುತ್ತಲಿನ ಮಳಿಗೆಗಳ ಮೇಲೆ ದಾಳಿ ನಡೆಸಿ, 84 ಕೆ.ಜಿ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದ್ದು, 51,500 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ.

Advertisement

ಪಶ್ಚಿಮ, ಪೂರ್ವ, ಬೊಮ್ಮನಹಳ್ಳಿ ಹಾಗೂ ಆರ್‌.ಆರ್‌. ನಗರ ವಲಯಗಳ ವಿವಿಧ ವಾರ್ಡ್‌ಗಳಲ್ಲಿರುವ ಅಂಗಡಿಗಳಲ್ಲಿ ತಪಾಸಣೆ ನಡೆಸಿ ಒಟ್ಟು 725 ಕೆ.ಜಿ. ಪ್ಲಾಸ್ಟಿಕ್‌ ಜಪ್ತಿ ಮಾಡಿ 2,69,500 ರೂ. ದಂಡ ಸಂಗ್ರಹಿಸಲಾಗಿದೆ.

ಮಹದೇವಪುರ ವಲಯದ ರಾಮಮೂರ್ತಿನಗರ ಮುಖ್ಯರಸ್ತೆ, ಹೊರಮಾವು, ಕಗ್ಗದಾಸಪುರ ಮುಖ್ಯರಸ್ತೆ, ಬೆಳ್ಳಂದೂರು, ದೇವಸಂದ್ರ, ದೊಡ್ಡನೆಕ್ಕುಂದಿ ಹಾಗೂ ವರ್ತೂರು ಮುಖ್ಯರಸ್ತೆಗಳಲ್ಲಿರುವ 46 ಮಳಿಗೆಗಳಲ್ಲಿ ತಪಾಸಣೆ ನಡೆಸಿ 43 ಸಾವಿರ ರೂ. ದಂಡ ಹಾಗೂ ದಾಸರಹಳ್ಳಿ ವಲಯದ ನೆಲಗದರನಹಳ್ಳಿ,

ಎಚ್‌ಎಂಟಿ ಬಡಾವಣೆ, ಚೊಕ್ಕಸಂದ್ರ, ಯಲಹಂಕ ವಲಯದ ಅಮೃತನಗರ, ಭದ್ರಪ್ಪ ಲೇಔಟ್‌, ಯಲಹಂಕ ಬಿಬಿ ರಸ್ತೆ, ಕಟ್ಟಿಗೇನಹಳ್ಳಿ, ದೊಡ್ಡಬೊಮ್ಮಸಂದ್ರ ಹಾಗೂ ಪುಟ್ಟೇನಹಳ್ಳಿಯಲ್ಲಿರುವ ಮಳಿಗೆಗಳಲ್ಲಿ ತಪಾಸಣೆ ನಡೆಸಿ ಒಟ್ಟು 72 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next