ಪರಿಸರಕ್ಕೆ ಹಾನಿ ಆಗುವ ಪ್ಲಾಸ್ಟಿಕ್‌ನ ಬಳಕೆ ನಿಲ್ಲಿಸಬೇಕೆಂಬ ಭಾಷಣ ಕೇಳೀ ಕೇಳಿ ಸಾಕಾಗಿದೆ. ಅದೇ ಪ್ಲಾಸ್ಟಿಕ್ಕಿಗೆ ಪರ್ಯಾಯ ಹುಡುಕಲು ಬಹುತೇಕರು ಮನಸ್ಸು ಮಾಡುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಲ್ಲೊಬ್ಬರು ಮಹಿಳೆ, ಕಾಟನ್ ಚೀಲಗಳನ್ನು ಪರಿಚಯಿಸಿ, ಪ್ಲಾಸ್ಟಿಕ್ ಅನ್ನು ದೂರ ಇಟ್ಟಿದ್ದಾರೆ. ಇವರ ಹೆಸರು ಎಂ.ಎಸ್. ಅರುಣಾ. ಪ್ಲಾಸ್ಟಿಕ್‌ಗೆ ಪರ್ಯಾಯವನ್ನು ಕಂಡುಕೊಳ್ಳಬೇಕು ಎನ್ನುವ ಸದಾಶಯದಿಂದ ಅವರು ಆರಂಭಿಸಿರುವ ಕಂಪನಿಯ ಹೆಸರು “ಬೆಳ್ಳಿಕಿರಣ ಕ್ರಿಯೇಷನ್ಸ್.
ಮೈಸೂರು ಮೂಲದ ಅರುಣಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರೆ. ಕಾರ್ಪೊರೇಟ್ ಕಂಪನಿಯೊಂದರಲ್ಲಿ ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದವರು. ಬೇರೆಯವರ ಕೈ ಕೆಳಗೆ ದುಡಿಯುವ ಬದಲು ನನ್ನದೇ ಸ್ವಂತ ಕಂಪನಿ ಆರಂಭಿಸಬೇಕು. ಆ ಮೂಲಕ ನಾಲ್ಕು ಜನಕ್ಕೆ ನೆರವಾಗಬೇಕು ಎನ್ನುವ ಆಸೆ ಅವರಿಗೆ ಮೊದಲಿಂದಲೂ ಇತ್ತು. ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ಕೊಟ್ಟು, “ಬೆಳ್ಳಿಕಿರಣ’ ಹೆಸರಿನ ಸ್ವಂತ ಕಂಪನಿ ಆರಂಭಿಸಿದರು. ಮುಂದೇನಾಯ್ತು? ಅರುಣಾ ಅವರೇ ಹೇಳುತ್ತಾರೆ ಕೇಳಿ…
ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಯೋಚನೆ ಬಂತು. ಅದೇ ವೇಳೆಗೆ ನಮಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿನ ಸ್ಲಂ ನಿವಾಸಿಗಳು, ಅದರಲ್ಲೂ ಮಹಿಳೆಯರು ಸಿಕ್ಕರು. ಇವರಿಗೆಲ್ಲ ಎನ್‌ಜಿಒದವರು ಕಾಟನ್ ಚೀಲ ಹೊಲಿಯಲು ತರಬೇತಿ ನೀಡಿದ್ದರು. ಇವರ ಸಹಾಯದಿಂದ, ಸಂಕ್ರಾಂತಿ ಹಬ್ಬಕ್ಕೆ ಎರಡು ಬಗೆಯ ಚೀಲಗಳನ್ನು ಹೊಲಿಸಿದೆವು. ಒಂದು ದೊಡ್ಡ ಚೀಲ; ಕಬ್ಬು, ಬಾಳೆ, ತೆಂಗು ಹಿಡಿಯಲು… ಇನ್ನೊಂದು ಪುಟಾಣಿ ಚೀಲ; ಎಳ್ಳು- ಬೆಲ್ಲ ಅಚ್ಚು ಹಾಕಲು. ಹಬ್ಬಕ್ಕೂ ಮೊದಲು ಮನೆಯವರಿಂದಲೇ ಬೋಣಿ ಮಾಡಿಸಿದೆವು. ಅಮ್ಮ, ಚಿಕ್ಕಮ್ಮ ಎಲ್ಲರೂ ಹಬ್ಬಕ್ಕೂ ಒಂದು ತಿಂಗಳು ಮೊದಲೇ ಖರೀದಿಸಿದರು. ಈ ವಿಷಯ, ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ, ಫೇಸ್‌ಬುಕ್ ಸಹಾಯದಿಂದ, ನೂರಾರು ಜನರನ್ನು ತಲುಪಿತು. ಹಬ್ಬ ಮುಗಿಯುವ ಹೊತ್ತಿಗೆ 8000 ಬ್ಯಾಗ್ ಮಾರಿ¨ªೆವು!
ಅಲ್ಲಿಂದಲೇ ಹೊಸ ಅಧ್ಯಾಯ ಶುರುವಾಯಿತು. ತಾಂಬೂಲ ಚೀಲ, ಸೀರೆ ಚೀಲ, ಸಿರಿಧಾನ್ಯ ಅಂಗಡಿಗಳಲ್ಲಿ ಬಟ್ಟೆ ಚೀಲ, ಬ್ಲೌಸ್ ಪೀಸ್ ಇಡುವ ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಚೀಲ, ಬೇಸಿಗೆ ಶಿಬಿರದಲ್ಲಿ ಕೊಡುವ ಚೀಲ, ಒಂದೇ, ಎರಡೇ… ಹೀಗೆ ಎಲ್ಲದಕ್ಕೂ ಬಟ್ಟೆ ಚೀಲ ಮಾಡಿ ಹೊಸ ಮಾರುಕಟ್ಟೆ ಸೃಷ್ಟಿಸಿಕೊಂಡೆವು. ನಾವು ಕೊಟ್ಟ ಚೀಲದಲ್ಲಿನ ಬಹುತೇಕ ಚೀಲದಲ್ಲಿ ಕನ್ನಡ ಪದಗಳು ಇವೆ; ಮದುವೆ, ಮುಂಜಿ, ಗೃಹಪ್ರವೇಶ, ಗುರುವಂದನೆ ಕಾರ್ಯಕ್ರಮ, ಸೀಮಂತಧಿ- ಎಲ್ಲದಕ್ಕೂ ಕನ್ನಡ ಪದಗಲ್ಲಿ ಬರೆದು, ಚೀಲಗಳ ಮೇಲೆ ಪ್ರಿಂಟ್ ಮಾಡಿಸಿದ್ದೆವು. ಇದರ ಹಿಂದೆಯೇ ಮಗ್ ಮತ್ತು ಟಿ ಶರ್ಟ್‌ಗಳ ಮೇಲೆ ಸ್ಲೋಗನ್‌ಗಳನ್ನು ಪ್ರಿಂಟ… ಮಾಡಿಸಿ ಮಾರಿದರೆ ಹೇಗೆ ಎಂಬ ಯೋಚನೆ ಬಂತು. ಬ್ಯಾಗ್‌ಗಳನ್ನೂ ಸ್ಲಂನ ಮಹಿಳೆಯರು ಹೊಲಿದು ಕೊಟ್ಟರೆ, ಅಲ್ಲಿಯೇ ಇದ್ದ ಅಂಗವಿಕಲ ಯುವಕರು ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದರು.
ಮೊದಲು ಸಂಕ್ರಾಂತಿಗೆಂದು ಶುರುವಾಗಿದ್ದು ಬಟ್ಟೆ ಚೀಲ, ಬರ್ತಾ ಬರ್ತಾ ವರ್ಷಪೂರ್ತಿ ಬಳಕೆ ಆಗುವ ವಸ್ತುವೇ ಆಯಿತು. ಸ್ಲಂ ಮಹಿಳೆಯರಿಗೆ ಟ್ರೈನಿಂಗ್ ನೀಡಲಾಗಿದೆ. ಅಂಥ ಮಹಿಳೆಯರಿಗೆ ಇಷ್ಟೇ ಅಗಲ ಚೀಲ , ಇಷ್ಟೇ ಉದ್ದ, ಇದೇ ಬಣ್ಣದ ದಾರ… ಅಂತೆಲ್ಲ ಹೇಳಿ ಮಾಡಿಸುತ್ತೇವೆ. ಕೆಲವೊಮ್ಮೆ ಗ್ರಾಹಕರ ಅಭಿರುಚಿಯ ಆದ್ಯತೆ ಮೇರೆಗೆ ಸಲಹೆ ನೀಡುತ್ತೇವೆ. ಇಂಥ ಚೀಲಗಳ ಬೆಲೆ 8. ರೂ.ನಿಂದ ಆರಂಭಗೊಳ್ಳುತ್ತವೆ. ನಾವು ಕನ್ನಡದಲ್ಲಿ ಮಾಡಿಸಿದ ತರಕಾರಿ ಚೀಲಗಳು ಮುಂಬೈ, ಪುಣೆ ಹಾಗೂ ಚೆನ್ನೈನಲ್ಲೂ ಮಾರಾಟ ಆಗಿದ್ದಿದೆ. ಹೊರರಾಜ್ಯಗಳ ಮನೆಯ ಫ್ರಿಡ್ಜ್ನಲ್ಲಿ ನಮ್ಮ ಕನ್ನಡ ಇದೆಯೆಂಬ ಖುಷಿ ನನಗೆ. 5 ಕೆಜಿ ತರಕಾರಿ ಹಿಡಿಸುವ ಬಟ್ಟೆಯ ಬ್ಯಾಗನ್ನು ಪ್ರತಿದಿನ ಬಳಸಿದರೂ ಅದು ಆರೆಂಟು ತಿಂಗಳು ಬಾಳಿಕೆ ಬರುತ್ತದೆ.
ನಾವು 10 ಬ್ಯಾಗ್‌ಗಳನ್ನು ಬೇಕಾದರೂ ಹೊಲಿಸಿ ಕೊಡುತ್ತೇವೆ. ಆದರೆ, ಹೆಚ್ಚು ಬ್ಯಾಗ್, ಮಗ್‌ಗಳಿಗೆ ಆರ್ಡರ್ ಕೊಟ್ಟರೆ ಬ್ಯಾಗ್/ ಮಗ್‌ಗೆ ತಗಲುವ ಬೆಲೆ ಕಡಿಮೆ ಆಗುತ್ತದೆ. ಪ್ಲಾಸ್ಟಿಕ್ ವಿರೋಧಿ ಆಂದೋಲನಕ್ಕೆ ಸಣ್ಣದೊಂದು ಕೊಡುಗೆ ನೀಡಬೇಕು ಅನ್ನುವ ಹಂಬಲ ನಮ್ಮದು ಎನ್ನುತ್ತಾರೆ ಅರುಣಾ.
– ಚೀಲದ ಬೆಲೆ: 8 ರೂ. ನಿಂದ ಆರಂಭ
– ಮಗ್‌ನ ಬೆಲೆ: 110 ರೂ.ನಿಂದ ಆರಂಭ
– ಟಿಶರ್ಟು ಬೆಲೆ: 400 ರೂ.ನಿಂದ ಆರಂಭ
ಸಂಪರ್ಕ: bellikiranacreations@gmail.com
ಸಂಪರ್ಕ: ಮೊ. 7259925112