Advertisement

ಪ್ಲಾಸ್ಟಿಕ್‌ ಪ್ಯಾಕೆಟ್‌ ಹಾಲು ನಿಷೇಧ

04:06 PM Oct 04, 2019 | Team Udayavani |

ನೆಲಮಂಗಲ: ರಾಜ್ಯದಲ್ಲಿ ಪ್ಲಾಸ್ಟಿಕ್‌ ಪ್ಯಾಕೆಟ್‌ನಲ್ಲಿ ಹಾಲು ನೀಡುವ ವಿಧಾನ ಬದಲಾವಣೆ ಮಾಡುವ ಮೂಲಕ ದೇಶದಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಪ್ರಧಾನಿ ನೀಡಿರುವ ಕರೆಗೆ ಕೈಜೊಡಿಸುತ್ತೇವೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

Advertisement

ತಾಲೂಕಿನ ವರದನಾಯಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 5 ಸಾವಿರ ಲೀಟರ್‌ ಸಾಮಥ್ಯದ ಹಾಲು ಶೀಥಲಿಕರಣ ಘಟಕ ಬಿ.ಎಂ.ಸಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.  ರೈತರಿಂದ ಸಂಗ್ರಹಿಸಿದ ಹಾಲನ್ನು ಗುಣಮಟ್ಟವಾಗಿ ಕಾಪಾಡಿಕೊಳ್ಳಲು ಹಾಲಿನ ಡೇರಿ ಗಳಲ್ಲಿ ಹಾಲು ಶೀಥಲಿ ಕರಣ ಘಟಕ (ಬಿ.ಎಂ.ಸಿ) ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ವಿಮಾ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿವೇತನ, ಸಹಾಯಧನ, ಕೊಟ್ಟಿಗೆ ನಿರ್ಮಾಣ, ಹಸುಗಳಿಗೆ ಮ್ಯಾಟ್‌, ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ ಸೇರಿದಂತೆ ಹಾಲಿನ ಸಹಾಯ ಧನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದ್ದು, ಹಾಲು ಒಕ್ಕೂಟಗಳು ರೈತರಿಗೆ ಆರ್ಥಿಕ ಶಕ್ತಿ ನೀಡುವ ಕೇಂದ್ರಗಳಾಗಿವೆ ಎಂದರು.

ಸಂಘದ ಅಧ್ಯಕ್ಷ ಕೆ. ನಾಗರಾಜು ಮಾತನಾಡಿ, ಹಾಲು ಒಕ್ಕೂಟ ಗ್ರಾಮದ ರೈತರ ಬದುಕನ್ನು ಬಂಗಾರದಂತೆ ಮಾಡಿದೆ. ಹೈನುಗಾರಿಕೆಯಿಂದ ಕೃಷಿಯಲ್ಲಿನ ನಷ್ಟವನ್ನು ಸರಿದೂಗಿಸಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಗ್ರಾಮದಲ್ಲಿ ಬಿ.ಎಂ.ಸಿ ನಿರ್ಮಾಣದಿಂದ ಗುಣಮಟ್ಟದ ಹಾಲು ನೀಡಲು ಸಹಕಾರಿಯಾಗಿದೆ ಎಂದರು.

5 ಸಾವಿರ ಲೀಟರ್‌ ಹಾಲು ಸಂಗ್ರಹ: ವರದನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 5 ಸಾವಿರ ಲೀಟರ್‌ ಸಾಮರ್ಥ್ಯದ ಹಾಲು ಶೀಥಲಿಕರಣ ಘಟಕ ವನ್ನು ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ರಾಷ್ಟ್ರೀಯ ಹೈನುಗಾರಿಕೆ ಯೋಜನೆಯಡಿ 15ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ 7 ಲಕ್ಷ ನೀಡಲಾಗಿದ್ದು, ವರದನಾಯಕನಹಳ್ಳಿ, ಬೈರನಹಳ್ಳಿ, ತೋಣಚಿನಕುಪ್ಪೆ,ಯರಮಾಚನಹಳ್ಳಿ, ಬರದಿ, ಮಂಡಿಗೆರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈ ವೇಳೆ ಹಸಿರುವಳ್ಳಿ ಗ್ರಾಪಂ ಸದಸ್ಯ ಪುರುಷೋತ್ತಮ್‌, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್‌, ಉಪ ವ್ಯವಸ್ಥಾಪಕ ಗೋಪಾಲ್‌ ಗೌಡ, ದತ್ತರಾಜು, ವಿಸ್ತರಣಾಧಿಕಾರಿ ನಾಗರಾಜು, ಚಂದನ್‌, ಶಿವಕುಮಾರ್‌, ವಿವಿಧ ಹಾಲಿನ ಡೇರಿ ಅಧ್ಯಕ್ಷ ವಿಜಯಕುಮಾರ್‌, ಜಗದೀಶ್‌, ವರದನಾಯಕನಹಳ್ಳಿ ಹಾಲಿನ ಸಂಘದ ಕಾರ್ಯದರ್ಶಿ ಮಂಜುನಾಥ್‌ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next