ದಾವಣಗೆರೆ: ಪ್ರಸ್ತುತ ಪ್ಲಾಸ್ಟಿಕ್ ಎಂಬ ಕರಗದ ವಸ್ತು ಯಾವ ಸ್ಥಳವನ್ನೂ ಬಿಟ್ಟಿಲ್ಲ. ಮನೆ, ಶಾಲೆ, ಕಚೇರಿ. ಅಂಗಡಿ-ಮುಂಗಟ್ಟು, ಹೋಟೆಲ್, ಬೀದಿ ಬದಿಯ ವ್ಯಾಪಾರಿಗಳು….ಹೀಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇಲ್ಲದೆ ನಡೆಯೋದೇ ಇಲ್ಲ ಎಂಬಂತಿದೆ. ಜನ-ಜಾನುವಾರುಗಳಿಗೆ ಪ್ಲಾಸ್ಟಿಕ್ ಮಾರಕವಾಗಿದ್ದರೂ ಅದರ ಬಳಕೆ ಮಾತ್ರ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ವಿಷಕಾರಕ ಪ್ಲಾಸ್ಟಿಕ್ ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಹೊರವಲಯದಲ್ಲಿ ಖಾಸಗಿ ಶಾಲೆಯೊಂದು ಕಾರ್ಯೋನ್ಮುಖವಾಗಿದೆ.
ಮರುಬಳಕೆಯಾಗದ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದ ಬನಶಂಕರಿ ಬಡಾವಣೆಯಲ್ಲಿ ಆರಂಭವಾಗಿರುವ ವಿಷ್ಣು ಎಜ್ಯುಕೇಷನಲ್ ಟ್ರಸ್ಟ್‌ನ ಐಸಿಎಸ್‌ಇ ಪಠ್ಯಕ್ರಮದ ಮಯೂರ ಗ್ಲೋಬಲ್ ಸ್ಕೂಲ್ ಈಗ ಪ್ಲಾಸ್ಟಿಕ್‌ರಹಿತ ವಾತಾವರಣ ಸೃಷ್ಟಿಸಲು ಮುಂದಾಗಿದೆ. ನರ್ಸರಿಯಿಂದ 6ನೇ ತರಗತಿವರೆಗಿನ ಆ ಶಾಲೆಯ ಪುಟ್ಟ ಮಕ್ಕಳಲ್ಲಿ ಹಾನಿಕಾರಕ ಪ್ಲಾಸ್ಟಿಕ್ ಬಳಕೆಯಿಂದಾಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸಲು ಮೊದಲ ಹೆಜ್ಜೆಯಾಗಿ ದಾವಣಗೆರೆಯಲ್ಲೇ ಮೊಟ್ಟಮೊದಲ ಪ್ಲಾಸ್ಟಿಕ್ ರಹಿತ ಶಾಲೆ ಅಭಿಯಾನಕ್ಕೆ ಈ ಶಾಲೆ ಮುಂದಾಗಿದೆ.
ಆ ಶಾಲೆಯಲ್ಲಿ ಬಳಸುವ ವಸ್ತುಗಳು ಪ್ಲಾಸ್ಟಿಕ್‌ನಿಂದ ಹೊರತಾಗಿವೆ. ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ವಸ್ತುಗಳನ್ನೂ ತೆಗೆದು ಅವುಗಳ ಜಾಗದಲ್ಲಿ ಪರ್ಯಾಯ ವಸ್ತುಗಳನ್ನ ಬಳಸಲಾಗುತ್ತಿದೆ. ಮಕ್ಕಳು ಉಪಯೋಗಿಸುವ ನೀರಿನ ಬಾಟಲ್, ಊಟದ ಡಬ್ಬಿ, ಪೆನ್ನು, ಸ್ಕೇಲ್, ಜಾಮಿಟ್ರಿಬಾಕ್ಸ್, ಪಠ್ಯ ಪುಸ್ತಕ ಹಾಗೂ ನೋಟ್ ಬುಕ್‌ನ ರ್ಯಾಪರ್ ಹೀಗೆ ಎಲ್ಲದಕ್ಕೂ ಪರ್ಯಾಯ ವಸ್ತು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಇನ್ನು ಶಾಲೆ ಹಾಗೂ ಕಚೇರಿಯಲ್ಲಿ ಕುರ್ಚಿ, ಕಸದ ಡಬ್ಬಿ, ಬಕೆಟ್, ಮಗ್, ಫೈಲ್‌ಗಳು ಸಹ ಪ್ಲಾಸ್ಟಿಕ್‌ನಿಂದ ಮುಕ್ತವಾಗಿವೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಫ್ಲೆಕ್ಸ್‌ಗಳಿಗಂತೂ ಅಲ್ಲಿ ಜಾಗವೇ ಇಲ್ಲ. ಮರುಬಳಕೆ ಮಾಡಬಹುದಾದ ಮತ್ತು ತೀರಾ ಅನಿವಾರ್ಯ ಎನ್ನುವ ಕೆಲವನ್ನು ಬಿಟ್ಟರೆ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಜಾಗದಲ್ಲಿ ಪರ್ಯಾಯ ವಸ್ತುಗಳಿವೆ.
ಮಕ್ಕಳು ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ಪ್ರತಿದಿನ ಶಿಕ್ಷಕರು ಪ್ರಾರ್ಥನಾ ಸಮಯದಲ್ಲಿ ಪ್ರತಿಜ್ಞೆ ಬೋಧಿಸುತ್ತಾರೆ. ಶಾಲೆ ಮಾತ್ರವಲ್ಲದೆ, ತಮ್ಮ ತಮ್ಮ ಮನೆಗಳಲ್ಲೂ ಪೋಷಕರಿಗೆ ಪ್ಲಾಸ್ಟಿಕ್ ನಿಬಂರ್ಧಿಸುವ ಕುರಿತು ಮಕ್ಕಳೇ ಮನವರಿಕೆ ಮಾಡಿಕೊಡಲು ತಿಳಿಸಲಾಗುತ್ತಿದೆ. ಇನ್ನೊಬ್ಬರಿಗೆ ನೀವು ಹೀಗೆ ಮಾಡಿ ಎಂದೇಳುವ ಬದಲು ನಾವೇ ಆ ಕೆಲಸ ಮೊದಲು ಆರಂಭಿಸಿದರೆ ಯಾವುದೇ ಆಂದೋಲನ ಅರ್ಥಪೂರ್ಣವಾಗಿರುತ್ತದೆ ಎಂಬ ಹಿನ್ನೆಲೆಯಲ್ಲಿ ನಾವಿರುವ ಜಾಗ ಪ್ಲಾಸ್ಟಿಕ್ ರಹಿತವಾಗಿರುವುದು ಮುಖ್ಯ ಎಂಬುದು ಶಾಲಾ ಆಡಳಿತ ಮಂಡಳಿ ಧ್ಯೇಯ.
ಮೊದಲು ಶಾಲಾವರಣ ಪ್ಲಾಸ್ಟಿಕ್‌ಮುಕ್ತಗೊಳಿಸಿದ ಮೇಲೆ ತರಗತಿಯಲ್ಲಿ ಆ ಕಾರ್ಯ ನಡೆದಿದೆ. ಕಳೆದ 40 ದಿನಗಳ ಹಿಂದೆ ಆರಂಭಿಸಲಾಗಿರುವ ಅಭಿಯಾನಕ್ಕೆ ಮೊದಮೊದಲು ಅಡ್ಡಿ ಆತಂಕ ಎದುರಾದರೂ ಈಗ ಒಂದು ಹಂತ ತಲುಪಿದೆ. ಸದ್ಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಅಷ್ಟೊಂದು ಕಷ್ಟಆಗಿಲ್ಲ. ಮುಂದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ನಿರ್ವಹಣೆ ಸವಾಲಾಗಬಹುದು. ಆದರೂ ಸದುದ್ದೇಶದಿಂದ ಕಾರ್ಯೋನ್ಮುಖರಾಗಿರುವ ಆಡಳಿತ ಮಂಡಳಿ ಆ ಸವಾಲು ಎದುರಿಸುವ ವಿಶ್ವಾಸ ಹೊಂದಿದೆ.ಈ ಮಹತ್ಕಾರ್ಯದಲ್ಲಿ ಶಾಲಾ ಪ್ರಾಂಶುಪಾಲೆ ದೇವಿಕಾರಾಣಿ ಜತೆಗೆ ಶಿಕ್ಷಕ ವೃಂದವೂ ಕೈಜೋಡಿಸಿದೆ.