ಚಿಕ್ಕಮಗಳೂರು: ಸ್ವತ್ಛ ಚಿಕ್ಕಮಗಳೂರು ಹಾಗೂ ಪ್ಲಾಸ್ಟಿಕ್ ಮುಕ್ತ ಚಿಕ್ಕಮಗಳೂರು ಮಾಡುವುದು ನನ್ನ ಕನಸಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸುವುದಾಗಿ ನಗರಸಭೆ ನೂತನ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು. ಶುಕ್ರವಾರ ನಗರದ ನಗರಸಭೆ ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಅಭಿನಂದನೆ ಸ್ವೀಕರಿಸಿ, ಅಧ್ಯಕ್ಷ ಸ್ಥಾನ ಅಲಂಕರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿವೆ. ಮುಂದಿನ ದಿನಗಳಲ್ಲಿ ಅ ಧಿಕಾರಿಗಳು ಮತ್ತು ಸಿಬ್ಬಂ ದಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು. ಕಳೆದ 31ವರ್ಷಗಳಿಂದ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಅನೇಕ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿ ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಹನುಮಂತಪ್ಪ ವೃತ್ತ ಯುವಕ ಸಂಘದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ರಾಮ ಜನ್ಮಭೂಮಿ ಹೋರಾಟದ ಮೂಲಕ ಬಿಜೆಪಿಗೆ ಪಾದಾರ್ಪಣೆ ಮಾಡಿದೆ ಎಂದು ಅಂದಿನ ದಿನಗಳನ್ನು ನೆನೆದರು. ನೂತನ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮತ್ತು ಉಪಾಧ್ಯಕ್ಷೆ ಸಿ.ಎಚ್. ಉಮಾದೇವಿ ಅವರನ್ನು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮುರುಡಪ್ಪ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ಸಂಬಂ ಧಿಕರು, ಸ್ನೇಹಿತರು, ವಾರ್ಡಿನ ಪ್ರಮುಖರು ಹೂವಿನ ಹಾರ, ಮೈಸೂರು ಪೇಟ ತೊಡಿಸಿ ಶಾಲು ಹೊದೆಸಿ ಅಭಿನಂದಿಸಿದರು. ಅಭಿನಂದನಾ ಸಮಾರಂಭ ಮುಕ್ತಾಯದ ಬಳಿಕ ನಗರಸಭೆ ಮುಂಭಾಗದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಕಚೇರಿಗೆ ಆಗಮಿಸಿ ಕಚೇರಿ ಬಾಗಿಲಿಗೆ ನಮಸ್ಕರಿಸಿ ಬಲಗಾಲಿಟ್ಟು ಕಚೇರಿ ಪ್ರವೇಶಿಸಿದರು. ಕಚೇರಿಯಲ್ಲಿ ದೇವರ ಫೋಟೋ ಮತ್ತು ಅಧ್ಯಕ್ಷರ ಆಸನಕ್ಕೆ ಪೂಜೆ ಸಲ್ಲಿಸಿದರು