Advertisement

ಬಟ್ಟೆ ಬ್ಯಾನರ್‌, ಕಮಾನುಗಳ ಸ್ಥಾಪನೆ

09:58 PM Jan 06, 2020 | Sriram |

ಉಡುಪಿ: ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೋಗಲಾಡಿಸುವುದು ಹೇಗೆಂದು ಅದನ್ನು ಉತ್ಪಾದಿಸಲು ಹಸಿರುನಿಶಾನೆ, ಅನುಮತಿ, ಸಬ್ಸಿಡಿ ಒದಗಿಸಿದ ಸರಕಾರವೇ ತರಬೇತಿ, ಸ್ವಚ್ಛತಾ ಅಭಿಯಾನ, ಮರುಬಳಕೆ ಚಿಂತನೆ ಹೀಗೆ ಬಗೆ ಬಗೆಯ ನಿರ್ಮೂಲನ ಯೋಜನೆಗಳನ್ನು ಆಯೋಜಿಸುತ್ತಿದೆ.

Advertisement

ಒಟ್ಟಾರೆ ಉತ್ಪಾದಿಸುವಾಗಲೂ, ನಿರ್ಮೂಲನಗೊಳಿಸುವಾಗಲೂ ಸಾಕಷ್ಟು ಹಣ ಖರ್ಚು ಜನರ ತಲೆಗೇ ಬೀಳುವುದು ಜನರಿಗೇ ಗೊತ್ತಿಲ್ಲ. ಮುಂಬರುವ ಅದಮಾರು ಮಠದ ಪರ್ಯಾಯದಲ್ಲಿ ಅನಿವಾರ್ಯವೆನಿಸಿದ ಪ್ಲಾಸ್ಟಿಕ್‌ಗಳನ್ನು ಬಳಸುವಾಗಲೇ ಹೊರಗಿಡುವ ಪ್ರಯತ್ನ ಮಾಡಲಾಗಿದೆ.

ಪ್ಲಾಸ್ಟಿಕ್‌ ಅಗ್ರಮಾನ್ಯ ಸ್ಥಾನಗಳಲ್ಲಿ ಅಲಂಕರಿಸುತ್ತಿದ್ದ ಫ್ಲೆಕ್ಸ್‌ ಬ್ಯಾನರ್‌, ಸ್ವಾಗತ ಕಮಾನುಗಳು ಅದಮಾರು ಮಠ ಪರ್ಯಾಯದಲ್ಲಿ ಪ್ಲಾಸ್ಟಿಕ್‌ರಹಿತವಾಗಿ, ದೇಸೀತನದಿಂದ ಎದ್ದು ನಿಂತಿವೆ. 10 ದೊಡ್ಡ ಕಮಾನುಗಳು, 22 ಸಣ್ಣ ಕಮಾನುಗಳು ಸೇರಿದಂತೆ 43 ಕಮಾನುಗಳ ರಚನೆಯಾಗಿವೆ. ಉಡುಪಿ ಜೋಡುಕಟ್ಟೆಯಿಂದ ತೆಂಕುಪೇಟೆ ದಾರಿಯಾಗಿ ರಥಬೀದಿಯನ್ನು ಪ್ರವೇ ಶಿಸುವ ದಾರಿಯಲ್ಲಿ ಹಾಕಿದ ಕಮಾನುಗಳಲ್ಲಿ ಅದಮಾರು ಮಠದ ಹಿಂದಿನ 32 ಗುರುಗಳ ಹೆಸರುಗಳನ್ನು ಬರೆದು ಗುರುಸ್ಮರಣೆ ಬರುವಂತೆ ಮಾಡಲಾಗಿದೆ.

ಜೋಡುಕಟ್ಟೆ, ಕಲ್ಪನಾ, ಕಲ್ಸಂಕ, ಅಂಬಾಗಿಲು, ಸಂಸ್ಕೃತ ಕಾಲೇಜು ಸರ್ಕಲ್‌, ಕಡಿಯಾಳಿ, ಬನ್ನಂಜೆ, ಕಿನ್ನಿಮೂಲ್ಕಿ ಬಳಿ ಪ್ರವೇಶ ತಾಣ, ಅಂಬಲಪಾಡಿ ಜಂಕ್ಷನ್‌ ಮೊದಲಾದೆಡೆ ದೊಡ್ಡ ಕಮಾನುಗಳು ನಿಂತಿವೆ. ನಗರದ ವಿವಿಧ ಪ್ರದೇಶಗಳಲ್ಲಿ ಸಣ್ಣ ಕಮಾನುಗಳನ್ನು ರಚಿಸಲಾಗಿದೆ.

ಉಡುಪಿ ರಥಬೀದಿಯಿಂದ ಜೋಡು ಕಟ್ಟೆವರೆಗೆ 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಅಳವಡಿ ಸಲಾಗುತ್ತದೆ. ಅದರೊಳಗೆ ಬಲುºಗಳು ಇರುತ್ತವೆ. ಇದು ಪ್ರಾಚೀನತೆಯನ್ನು ನೆನಪಿಗೆ ಬರುವಂತೆ ಮಾಡದಿರದು. 100 ದೊಡ್ಡ ಬ್ಯಾನರ್‌ಗಳನ್ನು ಉಡುಪಿ ಸುತ್ತಮುತ್ತ, 70 ದೊಡ್ಡ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರದ ವರೆಗೆ, 200 ಸಣ್ಣ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರ, ಉಡುಪಿಯಿಂದ ಕಾರ್ಕಳದವರೆಗೆ ಕಟ್ಟಲಾಗಿದೆ. ಕಮಾನುಗಳ ಸುತ್ತ ಪ್ಲಾಸ್ಟಿಕ್‌ನಿಂದ ತಯಾರಿಸಿದ ಬಣ್ಣದ ಹೊದಿಕೆಯನ್ನು ಹೊದಿಸಲಾಗುತ್ತಿತ್ತು. ಈ ಸ್ಥಾನದಲ್ಲಿ ಈಗ ಬಟ್ಟೆಗಳನ್ನೇ ಬಳಸಲಾಗಿದೆ. ಜನಪದ, ದೇಸೀ ಶೈಲಿ ಕಮಾನುಗಳಲ್ಲಿ ಎದ್ದು ಕಾಣುತ್ತಿದೆ.

Advertisement

ಶ್ರೀಅದಮಾರು ಮಠದ ಪರಂಪರೆಯಲ್ಲಿ ಪ್ರಸ್ತುತ ಪೀಠಾಧಿಪತಿಗಳು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು. ಇವರು 32ನೆಯವರು. ಕಿರಿಯ ಪೀಠಾಧೀಶರು ಶ್ರೀಈಶಪ್ರಿಯತೀರ್ಥ ಶ್ರೀಪಾದರು. ಇವರು 33ನೆಯವರು. ಜ. 8ರಂದು ಪರ್ಯಾಯ ಸಂಚಾರವನ್ನು ಮುಗಿಸಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಪುರಪ್ರವೇಶ ಮಾಡಲಿದ್ದಾರೆ. ಈ ಸಂದರ್ಭ ಪ್ಲಾಸ್ಟಿಕ್‌ರಹಿತವಾಗಿ ನಗರ ಅಲಂಕರಣಗಳನ್ನು ಮಾಡಲಾಗಿದೆ.

ಅಂತಿಮ ಹಂತದಲ್ಲಿ
ಪ್ಲಾಸ್ಟಿಕ್‌ರಹಿತವಾಗಿ ಕಮಾನುಗಳು, ಬ್ಯಾನರ್‌ಗಳನ್ನು ಅಳವಡಿಸಲು ಪ್ರಯತ್ನಿಸಲಾಗಿದೆ. ಇವುಗಳ ಕೆಲಸ ಅಂತಿಮ ಹಂತದಲ್ಲಿದೆ.
-ಗೋವಿಂದರಾಜ್‌, ಶ್ರೀಕೃಷ್ಣ ಸೇವಾ ಬಳಗದ ಸಕ್ರಿಯ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next