ಬನಹಟ್ಟಿ: ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಡುವುದನ್ನು ರಬಕವಿ-ಬನಹಟ್ಟಿ ತಾಲ್ಲೂಕಿನಾದ್ಯಂತ ಕಟ್ಟು ನಿಟಾಗಿ ನಿಷೇಧಿಸಲಾಗಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಧ್ವಜ ಮಾರಾಟಗಾರರಿಗೆ ತಿಳಿವಳಿಕೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮೊದಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದಾಗ್ಯ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಆ ನಿಟ್ಟಿನಲ್ಲಿ ಕಂದಾಯ ಇಲಾಖೆ, ನಾಗರಸಭೆ, ಪುರಸಭೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಚನಗೊಂಡ ಹೇಳಿದರು.
ಧ್ವಜಾರೋಹಣವನ್ನು ವ್ಯವಸ್ಥಿತವಾಗಿ ಮಾಡುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ಜ. 16 ರಂದು ಮುಂಜಾಣೆ 11 ಗಂಟೆಗೆ ಸ್ಥಳಿಯ ತಹಶೀಲ್ದಾರ್ ಕಚೇರಿಯಲ್ಲಿ ಒಂದು ದಿನದ ಧ್ವಜ ಸಂಹಿತೆ ಕುರಿತು ಬಾಗಲಕೋಟೆಯ ಭಾರತ ಸೇವಾದಳದ ಅಧಿಕಾರಿಗಳಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿದ್ದು ಸವದಿ ಮಾತನಾಡಿ, ಹೊಸ ತಾಲೂಕಿನಲ್ಲಿ ನಡೆಯುವ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಗಲು ಎಲ್ಲರೂ ಸಹಕಾರ ನೀಡಬೇಕು. ಎಂದರು.ಬಿಇಒ ಸಿ.ಎಂ. ನೇಮಗೌಡ ಮಾತನಾಡಿದರು. ಗ್ರೇಡ್ 2ತಹಶೀಲ್ದಾರ್ ಎಸ್.ಬಿ. ಕಾಂಬಳೆ,ಪೌರಾಯುಕ್ತ ಶ್ರೀನಿವಾಸ ಜಾದವ, ಉಪ ತಹಶೀಲ್ದಾರ್ ಎಸ್.ಎಲ್. ಕಾಗಿಯವರ,ಶಿರಸ್ತೆದಾರರಾದ ಬಸವರಾಜ ಬಿಜ್ಜರಗಿ, ಬಸವರಾಜ ತೆಗ್ಗಿ ಇದ್ದರು.