ಬೆಂಗಳೂರು: ಸಿಲಿಕಾನ್‌ಸಿಟಿಯ ಹೊರವಲಯ ವ್ಯಾಪ್ತಿಯಲ್ಲಿ ಕಸದ ರಾಶಿಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿರುವುದರ ಜತೆಗೆ ಕಸದ ರಾಶಿಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರು ಮೂಲದ ಎನ್‌ಜಿಒ ದತ್ತಾಂಶಗಳ ಪ್ರಕಾರ ಕಳೆದ 8 ತಿಂಗಳಲ್ಲಿ 37 ಕಸದ ರಾಶಿಗಳಿಗೆ ಬೆಂಕಿ ಹಾಕಲಾಗಿದೆ. ಇದಲ್ಲದೆ ಬೆಂಗಳೂರು ದಕ್ಷಿಣ ವ್ಯಾಪ್ತಿ ಕನಕಪುರ ರಸ್ತೆ ಹಲವು ಕಡೆಗಳಲ್ಲಿ ರಾಶಿ- ರಾಶಿ ಕಸ ರಸ್ತೆಗಳ ಇಕ್ಕೆಲಗಳಲ್ಲೇ ಹಾಕುತ್ತಿರುವುದು ಕಂಡು ಬಂದಿದೆ.
ಕೆಲವು ಕಡೆಗಳಲ್ಲಿ ಘನತಾಜ್ಯಕ್ಕೆ ಬೆಂಕಿ ಹಚ್ಚುವುದು ಮುಂದುವರಿದಿದೆ. ಕನಕಪುರ ರಸ್ತೆಯಲ್ಲಿ ಅಷ್ಟೇ ಅಲ್ಲ, ಸರ್ಜಾಪುರ, ವರ್ತೂರು, ಚಿಕ್ಕತಿರುಪತಿ ರಸ್ತೆಗಳು ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಇದೇ ಸ್ಥಿತಿಯಿದೆ. ಪಾಲಿಕೆ ಅಧಿಕಾರಿಗಳು ಮೌನವಹಿಸಿರುವುದೇ ಇದಕ್ಕೆ ಕಾರಣ ಎಂದು ತಲಘಟ್ಟಪುರದ ನಿವಾಸಿ ಜಗದೀಶನ್ ದೂರುತ್ತಾರೆ. ಘನ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚು ಇರುವುದರಿಂದ ಮಾನವನಿಗೆ ಅಪಾಯಕಾರಿ. ಜತೆಗೆ ಹೊಗೆಯ ಮೂಲಕ ವಿಷ ಅನಿಲ ಹೊರ ಹೊಮ್ಮುವುದರಿಂದ ಜನರ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳು ಘನ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಬೇಕು ಎಂದು ಒತ್ತಾಯಿಸುತ್ತಾರೆ. ಸುಧಾರಣೆ ಕಂಡುಬಂದಿಲ್ಲ: ಕಸದ ರಾಶಿ ಮತ್ತು ಸುಡುವಿಕೆಯು ನಗರದ ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕಕ್ಕೆ ಗಮನಾರ್ಹ ಕೊಡುಗೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಕಸ ಸುಡುವ ಮತ್ತು ಸುರಿಯುವುದಕ್ಕೆ ಬಿಬಿಎಂಪಿ ಯಿಂದ ಸಾಕಷ್ಟು ದಂಡ ವಿಧಿಸಲಾಗಿದ್ದರೂ, ಪ್ರತ್ಯೇಕಿಸದ ತ್ಯಾಜ್ಯ ರಾಶಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ ಎಂದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಹೇಳುತ್ತಾರೆ. ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಬೆಂಕಿ ಹೆಚ್ಚುವುದರಿಂದ ಡೈಯಾಕ್ಸಿನ್ ಎಂಬ ರಾಸಾಯನಿಕವನ್ನು ಹೊರಹಾಕ ಲಿದೆ. ಇದು ಕ್ಯಾನ್ಸರ್‌ಗೆ ಮೂಲ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಸರ್ಕಾರವೂ ಎಚ್ಚೆತ್ತುಕೊಳ್ಳಬೇಕಿದೆ. ಈ ಹಿಂದೆ ಕಸದ ವಿಚಾರಕ್ಕೆ ಸಂಬಂಧಿಸಿದಂತೆ ಅದಾಲತ್ ನಡೆಸಲಾಗುತ್ತಿತ್ತು. ಆದರೆ ಈಗ ಅದು ನಿಂತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಂತ್ರಣ : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದು ಮತ್ತು ಎಲ್ಲೆಂದರಲ್ಲಿ ಕಸ ಹಾಕುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆ ಆಗಿದೆ. ಆದರೆ ರಾಜಧಾನಿ ಹಲವು ತಾಲೂಕುಗಳ ಪ್ರದೇಶಗಳು ನಗರ ಜಿಪಂ ಹಾಗೂ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಆದರೆ ಸ್ಥಳ ಪರಿಶೀಲನೆ ಮಾಡಿದಾಗ ಆ ಪ್ರದೇಶ ಗ್ರಾಪಂ ವ್ಯಾಪ್ತಿಗೆ ಸೇರದಿರುವುದು ನಮ್ಮ ಅರಿವಿಗಿದೆ ಎಂದು ಪಾಲಿಕೆ ಘನತಾಜ್ಯ ವಿಶೇಷ ಆಯುಕ್ತ ಡಾ.ಹರೀಶ್‌ಕುಮಾರ್ ಹೇಳುತ್ತಾರೆ. ಆಯಾ ಗ್ರಾಪಂಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆ ಎಲ್ಲೆಂದರಲ್ಲಿ ಘನ ತಾಜ್ಯ ಸುರಿಸುವುದು ಮತ್ತು ಬೆಂಕಿ ಹಚ್ಚುವ ಪ್ರಕರಣಗಳ ಬಗ್ಗೆ ನಗರ ಜಿಲ್ಲಾಡಳಿತದ ಗಮನಕ್ಕೆ ಬಿಬಿಎಂಪಿ ತಂದಿದೆ. ಪಪಂ, ಗ್ರಾಪಂಗಳು ಈ ಸಂಬಂಧ ಕ್ರಮ ಕೈಗೊಳ್ಳ ಬೇಕಾಗಿದೆ. ಆದರೆ ಪಾಲಿಕೆಯಂತೂ ಮಾರ್ಷಲ್‌ಗಳ ಮೂಲಕ ಕಸಕ್ಕೆ ಬೆಂಕಿ ಹಾಕುವವರ, ಕಸ ಸುರಿವವರ ಮೇಲೆ ಕಣ್ಣಿಟ್ಟಿದೆ. ಪ್ರಕರಣ ಕಂಡು ಬಂದರೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬೆಂಕಿ ಹಚ್ಚುವುದರಿಂದ ಅದು ಹಲವು ಹಾನಿಕಾರಕ ವಿಷ ಅಂಶಗಳನ್ನು ಹೊರಹಾಕಲಿದೆ. ಈ ವಿಷಕಾರಿ ಅನಿಲ ಸೇವನೆಯಿಂದ ದೇಹದ ಎಲ್ಲ ಅಂಗಾಂಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಲೀವರ್, ಲಂಗ್, ಬ್ರೈನ್ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಇದೆ.
–ಡಾ.ವಿ.ಲೋಕೇಶ್, ನಿರ್ದೇಶಕರು ಕ್ವಿದಾಯಿ ಆಸ್ಪತ್ರೆ