Advertisement

ಸರಕಾರಿ ಸಮಾರಂಭಗಳಲ್ಲಿ ನೀರಿನ ಪ್ಲಾಸ್ಟಿಕ್‌ ಬಾಟಲಿ ನಿಷೇಧ

02:08 PM Dec 02, 2018 | Harsha Rao |

ಉಡುಪಿ: ಸರಕಾರಿ ಪ್ರಾಯೋಜಿತ ಸಭೆ, ಸಮಾರಂಭ ಮತ್ತು ಸರಕಾರಿ ಕಚೇರಿಗಳಲ್ಲಿ ಏಕಕಾಲಿಕ ಬಳಕೆ (ಸಿಂಗಲ್‌ಯೂಸ್‌) ನೀರಿನ ಪ್ಲಾಸ್ಟಿಕ್‌ ಬಾಟಲಿಗಳ ಬಳಕೆ/ ಸರಬರಾಜು ನಿಷೇಧಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

Advertisement

ಪ್ಲಾಸ್ಟಿಕ್‌ನ ಕ್ಯಾರಿಬ್ಯಾಗ್‌, ತಟ್ಟೆ, ಲೋಟ, ಚಮಚ ಮತ್ತು ಊಟದ ಮೇಜಿನ ಮೇಲೆ ಹರಡುವ ಹಾಳೆಗಳು ಮತ್ತಿತರ ವಸ್ತುಗಳ ತಯಾರಿಕೆ, ಮಾರಾಟ, ದಾಸ್ತಾನು ಮತ್ತು ಉಪಯೋಗವನ್ನು ಈ ಹಿಂದೆಯೇ ನಿಷೇಧಿಸಿದ್ದರೂ ಅದು ಪ್ಲಾಸ್ಟಿಕ್‌ ನೀರಿನ ಬಾಟಲಿಗೆ ಅನ್ವಯಿಸುತ್ತಿರಲಿಲ್ಲ.

ಇದರಿಂದಾಗಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಯಥೇತ್ಛವಾಗಿ ಬಳಸಿ ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ. ಅಲ್ಲದೆ ಬಾಟಲಿ ನೀರು ಅಲ್ಪ ಪ್ರಮಾಣದಲ್ಲಿ ಬಳಕೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುತ್ತಿದೆ. ಇದನ್ನು ಖರೀದಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ದುಬಾರಿ ಖರ್ಚು ಕೂಡ ಆಗುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತತ್‌ಕ್ಷಣದಿಂದ ಜಾರಿ
ರಾಜ್ಯಾದ್ಯಂತ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ
ಸರಕಾರದಿಂದ ಅನುದಾನ ಪಡೆಯುವ ಯಾವುದೇ ಸಂಸ್ಥೆಗಳಲ್ಲಿ ತತ್‌ಕ್ಷಣದಿಂದ ಇಂತಹ ಬಾಟಲಿಗಳ ಬಳಕೆ, ಸರಬರಾಜು ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರನ್ನು ಸಂದರ್ಭಾನುಸಾರ  ಶುಚಿತ್ವ ರೀತಿಯಲ್ಲಿ ಗ್ಲಾಸ್‌, ಸ್ಟೀಲ್‌, ಪೇಪರ್‌ ಮತ್ತಿತರ ಪ್ಲಾಸ್ಟಿಕ್‌ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳ‌ಬೇಕು ಎಂದು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ)ಯ ಸರಕಾರದ ಅಧೀನ ಕಾರ್ಯದರ್ಶಿ ಕೆ.ಎಸ್‌. ರೋಹಿಣಿ ಆದೇಶ ಹೊರಡಿಸಿದ್ದಾರೆ.

ನೀರಿನ ವ್ಯವಸ್ಥೆ ಹೇಗೆ?
ಸರಕಾರಿ ಸಂಸ್ಥೆಗಳಲ್ಲಿ ಎಲ್ಲೆಲ್ಲಿ ಯಾವ ರೀತಿಯಲ್ಲಿ ನೀರು ವಿತರಿಸಬಹುದು ಎಂಬುದನ್ನು ಕೂಡ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 
– ಕಾರ್ಯಕ್ರಮಗಳಲ್ಲಿ 20 ಲೀಟರ್‌ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಕ್ಯಾನ್‌ಗಳಲ್ಲಿ ಶುದ್ಧೀಕರಿಸಿದ  ನೀರನ್ನು ಇಡಬೇಕು. 

Advertisement

– ಕಚೇರಿಗಳಲ್ಲಿ  ಸಭೆ-ಸಮಾರಂಭ ಏರ್ಪಡುವ ಕೊಠಡಿಗಳಲ್ಲಿ ಕೇಂದ್ರ ಸರಕಾರದ ಜಾಲತಾಣ //gem.gov.inನಲ್ಲಿ ಅನುಮೋದಿಸಲ್ಪಟ್ಟಿರುವ ಅಥವಾ ರಾಜ್ಯ ಸರಕಾರದ ಅಂಗೀಕೃತ ಸಂಸ್ಥೆಗಳಿಂದ ಖರೀದಿಸಿ ಆರ್‌ಒ ಮತ್ತು ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ಪ್ಲಾಸ್ಟಿಕ್‌ ಅಲ್ಲದ ಲೋಟಗಳನ್ನಿಡಬೇಕು.

-ಎಲ್ಲ  ಸರಕಾರಿ ಹಾಗೂ ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳ ಕಚೇರಿಗಳಲ್ಲಿ  ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಸರಕಾರದ ಜಾಲತಾಣ //gem.gov.inನಲ್ಲಿ ಅನುಮೋದಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ ಅಥವಾ ಯಾವುದಾದರೂ ಉತ್ತಮ ಆರ್‌ಒ ಶುದ್ಧ ನೀರಿನ ಘಟಕಗಳನ್ನು ವ್ಯವಸ್ಥಾಪನೆಗೊಳಿಸಬೇಕು.

ಪಂಚಾಯತ್‌ಗಳಿಗೆ ನಿರ್ದೇಶನ
ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಿಗೂ ನಿರ್ದೇಶನ ನೀಡಲಾಗಿದೆ. ಇದೀಗ ಪ್ಲಾಸ್ಟಿಕ್‌ ನೀರಿನ ಬಾಟಲಿಗಳ ನಿಷೇಧವೂ ಜಾರಿಗೆ ಬರಲಿದೆ. ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಇಲ್ಲದೆ ನಡೆಯುವ ಮದುವೆಗಳಿಗೆ “ಗ್ರೀನ್‌ ಮ್ಯಾರೇಜ್‌’ ಪ್ರಮಾಣಪತ್ರವನ್ನು ಕೂಡ ನೀಡುತ್ತಿದ್ದೇವೆ.
– ಶ್ರೀನಿವಾಸ ರಾವ್‌, ಮುಖ್ಯ ಯೋಜನಾಧಿಕಾರಿ, ಜಿ.ಪಂ. 

ಸರಕಾರಿ ಕಚೇರಿ, ಸಮಾರಂಭಗಳಿಗೆ ಮಾತ್ರ ಸೀಮಿತವಾಗದೆ ಖಾಸಗಿ ಸಮಾರಂಭಗಳಲ್ಲಿಯೂ ನೀರಿನ ಬಾಟಲಿ ಸಹಿತ ಪ್ಲಾಸ್ಟಿಕ್‌ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಒಮ್ಮೆ ನಿಂತಿದ್ದ ಪ್ಲಾಸ್ಟಿಕ್‌ ಚೀಲಗಳ ಮಾರಾಟ ಮತ್ತೆ ಆರಂಭವಾಗಿದೆ. ಸಣ್ಣ ಅಂಗಡಿಗಳಿಗೆ ದಂಡದ ಭಯವಿದೆ. ಆದರೆ ದೊಡ್ಡ ಅಂಗಡಿಗಳಲ್ಲಿ ಬೇಕಾಬಿಟ್ಟಿಯಾಗಿ ನೀಡಲಾಗುತ್ತಿದೆ.
– ಸುಮಿತ್‌, ರೇಷ್ಮಾ ಶೆಟ್ಟಿ, ಜಿ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next