ಬೇಲೂರು: ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಪುರಸಭೆಯಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಸಿ.ಎನ್. ದಾನಿ ಹೇಳಿದರು. ಜಿಲ್ಲಾ ಸ್ಕೌಟ್ಸ್‌ಗೈಡ್ಸ್ ಏಕಲವ್ಯ ರೋವರ್ ಮುಕ್ತದಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ ಪರಿಸರ ಹಾಗೂ ಇತರ ಮೂಲ ಸೌಕರ್ಯಗಳ ರಕ್ಷಣೆಯ ಬಗ್ಗೆ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಪುರಸಭೆ ಮುಂಭಾಗ ಚಾಲನೆ ನೀಡಿ ಮಾತನಾಡಿದರು.
ಆಧುನಿಕತೆ ಬೆಳೆದಂತೆ ಪ್ಲಾಸ್ಟಿಕ್ ಉಪಯೋಗವು ಹೆಚ್ಚಾಗುತ್ತಿದೆ. ಇದರಿಂದ ಪರಿಸರದಲ್ಲಿ ಕಲುಷಿತ ವಾತಾವರಣ ಉಂಟಾಗಿ ಆರೋಗ್ಯ ಹದಗೆಡುತ್ತಿದೆ. ಪರಿಸರ ಸಂರಕ್ಷಣೆ ಆಹಾರ ಪದಾರ್ಥಗಳನ್ನು ವ್ಯರ್ಥಮಾಡಬಾರದು. ದೇಶದಲ್ಲಿ ಹಸಿವು ಹಾಗೂ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದರು.
ಇದನ್ನೂ ಓದಿ;- ಚಾರ್ಕೋಪ್ ಕನ್ನಡಿಗರ ಬಳಗ: 22ನೇ ವಾರ್ಷಿಕ ಶಾರದಾ ಮಹಾಪೂಜೆ ಸಂಪನ್ನ
ರಾಸಾಯನಿಕ ವಸ್ತುಗಳನ್ನು ಬಳಸದೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಕರು ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈಗಲಾದರೂ ಎಚ್ಚೆತ್ತು ಸಾವಯವ ಗೊಬ್ಬರ ಬಳಸಬೇಕು.
ಹಾಸನ ಜಿಲ್ಲಾ ಸ್ಕೌಟ್ಸ್‌ಗೈಡ್ಸ್ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ 350 ಕಿ.ಮೀ ಸಂಚರಿಸಿ ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಮುಖ್ಯಾಧಿಕಾರಿ ಸುಜಯ್ ಕುಮಾರ್ ಪರಿಸರ ಅಭಿಯಂತ ಮಧುಸೂದನ್ ಆರೋಗ್ಯಾಧಿಕಾರಿ ಲೋಹಿತ್ ಪುರಸಭೆ ಸದಸ್ಯ ಪ್ರಭಾಕರ್, ಭರತ್ ಹಾಗೂ ಜಿಲ್ಲಾ ಸ್ಕೌಟ್ಸ್‌ಗೈಡ್ಸ್ ವಿದ್ಯಾರ್ಥಿಗಳಿದ್ದರು.