Advertisement

ಆ. 15ರಿಂದ ಮೂಡಬಿದಿರೆಯಲ್ಲಿ ಪ್ಲಾಸ್ಟಿಕ್ ನಿಷೇಧ

12:53 PM Aug 01, 2018 | |

ಮೂಡಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಆ. 15ರಿಂದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ನಿಷೇಧ ಮಾಡಲು ಪುರಸಭೆ ನಿರ್ಧರಿಸಿದೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯದ ಅಧಿಸೂಚನೆಯಂತೆ ಸಮಾಜ ಮಂದಿರದಲ್ಲಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಒಮ್ಮತ ವ್ಯಕ್ತವಾಯಿತು.

Advertisement

ಪುರಸಭಾ ಮಾರುಕಟ್ಟೆ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಎ.ಎಲ್‌. ಮಾತನಾಡಿ, ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ನಿಷೇಧ ನಿರ್ಧಾರವನ್ನು ಸ್ವಾಗತಿಸಿ, ಎಲ್ಲ ಅಂಗಡಿಗಳಿಗೂ ಅನ್ವಯವಾಗಲಿ, ಪ್ಲಾಸ್ಟಿಕ್‌ ವಸ್ತು ತಯಾರಿಸುವ ಉದ್ಯಮಗಳನ್ನೂ ಬಂದ್‌ ಮಾಡಬೇಕು. ಎಂದರಲ್ಲದೆ ಕನಿಷ್ಠ 1 ತಿಂಗಳು ಸಮಯಾವಕಾಶಕೊಡಬೇಕು. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿ ಎಂದು ಸಲಹೆ ನೀಡಿದರು. 

ಜವುಳಿ ವ್ಯಾಪಾರಿ ರವೀಂದ್ರ ಪೈ ಮಾತನಾಡಿ, ಜನರಿಗೆ ಈಗಾಗಲೇ ಪ್ಲಾಸ್ಟಿಕ್‌ ನ ದುಷ್ಪರಿಣಾಮಗಳ ಅರಿವು ಇರುವ ಕಾರಣ ಒಂದು ತಿಂಗಳ ಅವಧಿ ಬೇಡ ವ್ಯಾಪಾರಿಗಳು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಇಲ್ಲದೆ ವ್ಯಾಪಾರ ಮಾಡಲು ಖಂಡಿತ ಸಾಧ್ಯವಿದೆ. ಗ್ರಾಹಕರೇ ಅಂಗಡಿಗೆ ಬಂದು ಪ್ಲಾಸ್ಟಿಕ್‌ ಚೀಲ ಕೇಳದಂತಾಗುವಂತೆ ಕಠಿನ ಕಾನೂನು ಜಾರಿ ಮಾಡಬೇಕು ಎಂದರು. ಜವುಳಿ ವ್ಯಾಪಾರಿ ಸದಾಶಿವ ರಾವ್‌ ನೆಲ್ಲಿಮಾರು ಮಾತನಾಡಿ, ಜವುಳಿ ವ್ಯಾಪಾರಿಗಳು ಪ್ಲಾಸ್ಟಿಕ್‌ ನಿಷೇಧಕ್ಕೆ ಈ ಹಿಂದೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದೆಯೂ ಪರಿಣಾಮಕಾರಿಯಾಗಿ ನಿಯಮವನ್ನು ಜಾರಿಗೊಳಿಸುವಲ್ಲಿ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹೊರ ರಾಜ್ಯಗಳಿಂದ ಆಮದು?
ವಿಶೇಷ ಮಾಹಿತಿ ನೀಡಿದ ಪುರಸಭಾ ಪರಿಸರ ಅಧಿಕಾರಿ ಶಿಲ್ಪಾ , ಪ್ಲಾಸಿಕ್‌ ನಿಷೇಧ ರಾಜ್ಯಮಟ್ಟದಲ್ಲೇ ಜಾರಿಯಾದ ಕಾನೂನಾಗಿದೆ. ಜಿಲ್ಲೆಯಲ್ಲಿ ಸದ್ಯ ಪ್ಲಾಸ್ಟಿಕ್‌ ಉತ್ಪಾದನಾ ಕಂಪೆನಿಗಳನ್ನು ಮುಚ್ಚಲಾಗಿದೆ. ಹೊರ ರಾಜ್ಯಗಳಿಂದ ಆಮದಾಗುತ್ತಿರುವ ಪ್ಲಾಸ್ಟಿಕ್‌ ಅನ್ನು ಗ್ರಾಹಕರು ಮತ್ತು ವ್ಯಾಪಾರಿಗಳು ಬಳಕೆ ಮಾಡದಂತೆ ಮನವಿ ಮಾಡಿದರು.

ಮಹಾರಾಷ್ಟ್ರದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಪ್ಲಾಸ್ಟಿಕ್‌ ಬಳಕೆಗೂ ಗ್ರಾಹರಿಗೂ ದಂಡ ವಿಧಿಸುವ ನಿಯಮಗಳನ್ನು ರೂಪಿಸಬೇಕು. ಕೇವಲ ಪುರಸಭಾ ವ್ಯಾಪ್ತಿಯಲ್ಲಿ ಮಾತ್ರವಲ್ಲ ಸುತ್ತಮುತ್ತಲಿನ ಊರುಗಳಲ್ಲಿಯೂ ಪ್ಲಾಸ್ಟಿಕ್‌ ನಿಷೇಧವಾದರೆ ಮಾತ್ರ ಪ್ಲಾಸ್ಟಿಕ್‌ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದು ವ್ಯಾಪಾರಿ ಶಿವಾನಂದ ಪ್ರಭು ತಿಳಿಸಿದರು. ಪುರಸಭಾ ಸದಸ್ಯ ಪಿ.ಕೆ. ಥೋಮಸ್‌ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ಸಂದರ್ಭದಲ್ಲಿ ತ್ಯಾಜ್ಯಗಳ ಪೈಕಿ ಪ್ಲಾಸ್ಟಿಕ್‌ ಚೀಲಗಳೇ ಬಹುಪಾಲು ದೊರೆಯುತ್ತಿರುವುದು ತಲೆಶೂಲೆಯಾಗಿದೆ ಎಂದರು. ಪುರಸಭಾ ಸದಸ್ಯ ಹನೀಫ್‌ ಅಲಂಗಾರ್‌ ಮಾತನಾಡಿ, ಪ್ಲಾಸ್ಟಿಕ್‌ ನಿಷೇಧದ ತಪಾಸಣೆ ವೇಳೆ ಸಣ್ಣ ವ್ಯಾಪಾರಿಗಳನ್ನು ಟಾರ್ಗೆಟ್‌ ಮಾಡುವುದಲ್ಲ. ದೊಡ್ಡ ಮಟ್ಟದ ಅಂಗಡಿಗಳ ಮೇಲೂ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

Advertisement

ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ಬಶೀರ್‌, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಪ್ರಸಾದ್‌, ನಾಗರಾಜ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ ಉಪಸ್ಥಿತರಿದ್ದರು. 

ಎಲ್ಲ ಪ್ಲಾಸ್ಟಿಕ್ ನಿಷೇಧಿಸಲಿ
ಪುರಸಭಾ ಮಾಜಿ ನಾಮ ನಿರ್ದೇಶಿತ ಸದಸ್ಯ ಹರೀಶ್‌ ಎಂ.ಕೆ. ಮಾತನಾಡಿ, ಕೇವಲ ಪ್ಲಾಸ್ಟಿಕ್‌ ಕೈ
ಚೀಲಗಳನ್ನು ಮಾತ್ರ ನಿಷೇಧ ಮಾಡುವುದಲ್ಲ. ಇತರ ಪ್ಲಾಸ್ಟಿಕ್‌ ವಸ್ತುಗಳನ್ನೂ ನಿಷೇಧಿಸಬೇಕು ಎಂದು
ಒತ್ತಾಯಿಸಿದರು.

ಫ್ಲೆಕ್ಸ್‌, ಬ್ಯಾನರ್‌ಗಳಿಗೆ ವಿನಾಯಿತಿ ನೀಡಿ
ಪುರಸಭೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಗ್ರಾಹಕರಿಗೆ ಪ್ಲಾಸ್ಟಿಕ್‌ ಚೀಲ ನೀಡುತ್ತಿದ್ದಾರೆ. ಮಂಗಳೂರಿನಿಂದಲೇ ಕೇರಳಕ್ಕೆ ಪ್ಲಾಸ್ಟಿಕ್‌ ಚೀಲ ಗಳು ಸರಬರಾಜು ಆಗುತ್ತಿದೆ. ಫ್ಲೆಕ್ಸ್‌, ಬ್ಯಾನರ್‌ಗಳನ್ನು ತ್ಯಾಜ್ಯ ರೂಪದಲ್ಲಿ ಬಿಸಾಡುವುದು ಎಲ್ಲಿಯೂ ಕಂಡುಬರುವುದಿಲ್ಲ. ಅದಕ್ಕೆ ವಿನಾಯಿತಿ ನೀಡುವುದು ಉತ್ತಮ ಎಂದು ವ್ಯಾಪಾರಿ ಜಾನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next