Advertisement

ಕಸ ಹೆಕ್ಕುವ ಸ್ಪರ್ಧೆಯ ಮೂಲಕ ಪ್ಲಾಸ್ಟಿಕ್‌ ನಿಷೇಧದ ಜಾಗೃತಿ​​​​​​​

12:30 AM Mar 16, 2019 | Team Udayavani |

ಶಿರ್ವ:  ಪ್ಲಾಸ್ಟಿಕ್‌ ಲಕೋಟೆಯಲ್ಲಿ ಕಸವನ್ನು ಕಟ್ಟಿ ರಸ್ತೆ ಬದಿಗೆಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಎಲ್ಲ ಪ್ರಮುಖ ರಸ್ತೆಗಳ ಇಕ್ಕೆಲಗಳು ಕಸದಿಂದ ತುಂಬಿರುವ ದೃಶ್ಯ ಸಾಮಾನ್ಯವಾಗಿದ್ದು ಸಾರ್ವತ್ರಿಕ ಸಮಸ್ಯೆಯಾಗಿದೆ. ಈ ಸಂಬಂಧ ಜಾಗೃತಿ ಮೂಡಿಸಲು ಕಸಹೆಕ್ಕುವ ಸ್ಪರ್ಧೆ ಎಂಬ ವಿನೂತನ ಕಾರ್ಯಕ್ರಮ ನಡೆಸುವ ಮೂಲಕ ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್‌.ಪಾಟ್ಕರ್‌ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

Advertisement

ಕಸ ಹೆಕ್ಕುವ ವಿನೂತನ ಸ್ಪರ್ಧೆ
ಸ್ವತ್ಛತೆಯ ಪರಿಕಲ್ಪನೆಯೊಂದಿಗೆ ಪಂಚಾಯತ್‌ನ ಬಂಟಕಲ್ಲು ವಾರ್ಡ್‌ ಸದಸ್ಯ ಕೆ.ಆರ್‌. ಪಾಟ್ಕರ್‌ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಸ ಹೆಕ್ಕುವ ಸ್ಪರ್ಧೆಯನ್ನು ಆಯೋಜಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಹರಡಿರುವ ಕಸ, ಪ್ಲಾಸ್ಟಿಕ್‌ಮತ್ತು ತ್ಯಾಜ್ಯ ಸಂಗ್ರಹಿಸುವ ಸ್ಪರ್ಧೆನಡೆಸಿ ಜನರಲ್ಲಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಪಣ ತೊಟ್ಟಿದ್ದಾರೆ.

ಶ್ರೀ ದುರ್ಗಾ ಮಹಿಳಾ ವೃಂದ ಮತ್ತು ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಸಾರ್ವ ಜನಿಕರ ಸಹಭಾಗಿತ್ವದಲ್ಲಿ ಬಂಟಕಲ್ಲು ದುರ್ಗಾನಗರ (ಎಂಜಿನಿಯರಿಂಗ್‌ ಕಾಲೇಜು ಹತ್ತಿರ)ದಿಂದ ಬಿ.ಸಿ.ರೋಡ್‌ವರೆಗಿನ ರಸ್ತೆ ಇಕ್ಕೆಲದ ಕಸಹೆಕ್ಕುವ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ನಡೆಸಿದ್ದರು.

ಬಳಿಕ ಶಿರ್ವ ಗ್ರಾಮ ಪಂಚಾಯತ್‌ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ರಸ್ತೆ ಬದಿಯ ಕಸವನ್ನು ಹೆಕ್ಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಆದರೆ ಇದಾದ ಒಂದು ವಾರದಲ್ಲಿಯೇ ಹಳೆಚಾಳಿ ಮುಂದುವರಿದಿತ್ತು. 
 
ಖಾಸಗಿ ಅಥವಾ ಇತರ ಕಾರ್ಯಕ್ರಮಗಳು ಪ್ಲಾಸ್ಟಿಕ್‌ ಮುಕ್ತವಾಗಿನಡೆಯಬೇಕು. ಧಾರ್ಮಿಕ ಸಂಸ್ಥೆಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ಮೂಲಕ ತ್ಯಾಜ್ಯ ಮುಕ್ತ ಮಾಡಿ ಸಮಾಜಕ್ಕೆ ನಮ್ಮ ಕೊಡುಗೆ ನೀಡಬೇಕಾಗಿದೆ ಎಂಬುದು ಪಾಟ್ಕರ್‌ ಅವರ ಸಾಮಾಜಿಕ ಕಳಕಳಿಯಾಗಿದೆ.

ಜಿಲ್ಲಾಡಳಿತದ ಸ್ಪಷ್ಟ ನಿರ್ದೇಶನ ಅಗತ್ಯ
ಸುವರ್ಣ ಗ್ರಾಮ ಯೋಜನೆಯಲ್ಲಿ ಸ್ಥಳಿಯಾ ಡಳಿತಗಳು ಕಡ್ಡಾಯವಾಗಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಹೊಂದಲೇಬೇಕೆಂಬ ನಿಯಮವಿದ್ದರೂ ಕೆಲವೆಡೆ ಈ ವ್ಯವಸ್ಥೆ ಇಲ್ಲದಿರುವುದು,ಇದ್ದರೂ ಅದರ ಸದ್ಬಳಕೆ ಆಗದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಜಿಲ್ಲಾಡಳಿತ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮ ಪಂಚಾಯತ್‌ ಆಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕಿದೆ.  

Advertisement

ಎಲ್ಲರ ಹೊಣೆಗಾರಿಕೆ
ಸ್ವತ್ಛ ಮನಸ್ಸಿನ ಮತ್ತು ನಿರ್ಮಲ ಹೃದಯದ ಪ್ರತೀಕವಾದ ಸ್ವತ್ಛ ಪರಿಸರ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದ್ದು ಬೇಕಾಬಿಟ್ಟಿಯಾಗಿ ರಸ್ತೆ ಬದಿ ಕಸ ಎಸೆಯುವ ಪ್ರವೃತ್ತಿ ನಿಲ್ಲಬೇಕು. ಹೆತ್ತವರು ಈ ಸಂಸ್ಕೃತಿ ಪಾಲಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಿದೆ. 
– ರೆ|ಫಾ|ಡೆನ್ನಿಸ್‌ ಡೇಸಾ, ಧರ್ಮಗುರುಗಳು,  
ಶಿರ್ವ ಆರೋಗ್ಯ ಮಾತಾ ಚರ್ಚ್‌

ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರುವಂತಾಗಿ ರಸ್ತೆ ಬದಿ ಕಸ ಹಾಕುವವರ ಮೇಲೆ ಗರಿಷ್ಠ ದಂಡ ವಿಧಿಸುವ ಅಧಿಕಾರ ಸ್ಥಳಿಯಾಡಳಿತಕ್ಕೆ ನೀಡಬೇಕು. ನಾನು ನನ್ನ ಮನೆಯಲ್ಲಿ ಪ್ಲಾಸ್ಟಿಕ್‌ ಬಳಸುವುದಿಲ್ಲ ಎಂಬ ಸಂಕಲ್ಪ ಮಾಡಿದಾಗ ಪ್ಲಾಸ್ಟಿಕ್‌ ಮುಕ್ತ ಸಮಾಜದ ನಿರ್ಮಾಣ ಸಾಧ್ಯ
 -ಕೆ.ಆರ್‌. ಪಾಟ್ಕರ್‌,ಶಿರ್ವ ಗ್ರಾ.ಪಂ.ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next