ನವದೆಹಲಿ: ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಲಸಿಕೆ ಕಂಡುಹಿಡಿಯಲಾಗುತ್ತಿದೆ. ಏತನ್ಮಧ್ಯೆ ಕೋವಿಡ್ 19 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಅನುಮತಿಗೊಳಪಟ್ಟ ಚಿಕಿತ್ಸೆಯಲ್ಲ. ಇದು ಅಪಾಯಕ್ಕೆ ಎಡೆಮಾಡಿಕೊಡಬಲ್ಲದು ಎಂದು ಕೇಂದ್ರ ಸರ್ಕಾರ ಮಂಗಳವಾರ ಎಚ್ಚರಿಸಿದೆ.
ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ಕೋವಿಡ್ 19 ವಿರುದ್ಧ ಪ್ಲಾಸ್ಮಾ ಥರಪಿ ಪರಿಣಾಮಕಾರಿಯಾಗಬಲ್ಲದು ಎಂದು ಹೇಳಲಾಗುತ್ತಿದ್ದು, ಕೆಲವು ಕಡೆ ಪ್ಲಾಸ್ಮಾ ಥೆರಪಿ ನೀಡಲಾಗಿದೆ. ಇದೀಗ ಕೇಂದ್ರ ಸರ್ಕಾರ ಪ್ಲಾಸ್ಮಾ ಥರಪಿ ಅಂಗೀಕೃತ ಚಿಕಿತ್ಸೆಯಲ್ಲ ಎಂದು ಹೇಳಿದೆ.
ಕೋವಿಡ್ 19 ವೈರಸ್ ಗೆ ಪ್ಲಾಸ್ಮಾ ಥೆರಪಿಯನ್ನು ನಿರಂತರ ಚಿಕಿತ್ಸೆಗೆ ಪರಿಗಣಿಸುವುದು ಅಪಾಯಕಾರಿ. ಇದನ್ನು ಸಂಶೋಧನೆಗೆ ಮಾತ್ರ ಉಪಯೋಗಿಸಬಹುದಾಗಿದೆ. ಕೋವಿಡ್ 19 ವೈರಸ್ ಗೆ ಪ್ಲಾಸ್ಮಾ ಥೆರಪಿ ಫಲಕಾರಿ ಎಂಬುದು ವೈಜ್ಞಾನಿಕ ಸಾಕ್ಷ್ಯ ಲಭ್ಯವಾಗುವವರೆಗೆ ಇದು ಪ್ರಾಯೋಗಿಕ ಹಂತದಲ್ಲಿಯೇ ಇರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ ಎಂದು ವರದಿ ವಿವರಿಸಿದೆ.ಸಮರ್ಪಕವಾಗಿ ಪ್ಲಾಸ್ಮಾ ಥೆರಪಿ ಫಲಕಾರಿಯಾಗದೇ ಹೋದರೆ ಅದು ಜೀವಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಕೋವಿಡ್ 19ಗೆ ಯಾವುದೇ ಅಂಗೀಕೃತ ಚಿಕಿತ್ಸೆ ಇಲ್ಲ, ಇದರಲ್ಲಿ ಪ್ಲಾಸ್ಮಾ ಥೆರಪಿ ಕೂಡಾ ಸೇರಿದೆ. ಪ್ಲಾಸ್ಮಾ ಥೆರಪಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಇದು ಕೋವಿಡ್ 19 ಚಿಕಿತ್ಸೆಗೆ ಪೂರಕ ಎಂಬ ಬಗ್ಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ. ಇದು ಕೇವಲ ಪ್ರಾಯೋಗಿಕ ಹಂತದಲ್ಲಿದೆ ಅಷ್ಟೇ. ಒಂದು ವೇಳೆ ಇದನ್ನು ಸಮರ್ಪಕವಾಗಿ ಬಳಕೆ ಮಾಡದಿದ್ದರೆ, ಇದು ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.
ಪ್ಲಾಸ್ಮಾ ಥೆರಪಿ ಎಷ್ಟರ ಮಟ್ಟಿಗೆ ಫಲಕಾರಿ ಎಂಬುದರ ಬಗ್ಗೆ ದೇಶದ ಉನ್ನತ ಮೆಡಿಕಲ್ ಸಂಶೋಧನಾ ತಂಡ ಅಧ್ಯಯನ ನಡೆಸುತ್ತಿದೆ.ಹೀಗಾಗಿ ಇದನ್ನು ವೈದ್ಯರು ಪ್ರಾಯೋಗಿಕ ಉದ್ದೇಶಕ್ಕಾಗಿ ಮಾತ್ರವೇ ಬಳಸಬೇಕು ಎಂದು ಸಲಹೆ ನೀಡಿರುವುದಾಗಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಸ್ಮಾ ಥರಪಿಯನ್ನು ಕೇವಲ ಸಂಶೋಧನೆಗಾಗಿ ಮಾತ್ರ ಬಳಸಬೇಕಾಗಿದೆ. ಇದು ಎಷ್ಟರ ಮಟ್ಟಿಗೆ ಫಲಪ್ರದ ಎಂಬುದು ಐಸಿಎಂಆರ್ ನಿಂದ ಪೂರ್ಣಗೊಳ್ಳುವವರೆಗೆ ಇದು ಪ್ರಾಯೋಗಿಕ ಹಂತದಲ್ಲಿ ಇರಲಿದೆ. ಪ್ಲಾಸ್ಮಾ ಥೆರಪಿ ಬಗ್ಗೆ ದೇಶಾದ್ಯಂತ ಅಧ್ಯಯನ ನಡೆಯುತ್ತಿದೆ ಎಂದು ಅಗರ್ವಾಲ್ ಹೇಳಿದರು.
ಏನಿದು ಪ್ಲಾಸ್ಮಾ ಥೆರಪಿ:
ಕೋವಿಡ್ 19 ವೈರಸ್ ನಿಂದ ಪೂರ್ಣವಾಗಿ ಗುಣಮುಖಮುಖರಾದವರ ರಕ್ತದಲ್ಲಿ ಇರುವ ಪ್ಲಾಸ್ಮಾ ( ರೋಗ ನಿರೋಧಕ ರಕ್ತದ ಕಣ) ತೆಗೆದು, ಅದನ್ನು ಕೋವಿಡ್ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ದೇಹಕ್ಕೆ ಸೇರಿಸಲಾಗುತ್ತದೆ. ಇದರಿಂದ ಆತನಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಶೇ.3ರಷ್ಟು ರೋಗಿಗಳಿಗೆ ಮಾತ್ರ ಥೆರಪಿ ಮಾಡಲಾಗುತ್ತದೆ. ಒಬ್ಬ ದಾನಿಯಿಂದ 470 ಮಿ.ಲೀ.ನಷ್ಟು ರಕ್ತ ಪಡೆಯಲಾಗುತ್ತದೆ.