ತುಮಕೂರು: ಕೋವಿಡ್ 19 ವೈರಸ್‌ನಿಂದ ಬಳಲುತ್ತಿರುವ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡುವ ಪ್ರಯೋಗಕ್ಕೆ ಮುಂದಾಗಿದ್ದು, ಸೋಂಕಿನಿಂದ ಗುಣಮುಖರಾಗಿರುವವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡ ಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ -19 ನಿಯಂತ್ರಣದ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಯೊಂದನ್ನು ಇಡುತ್ತಿದೆ. ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಡಾ.ಯುಎಸ್ ವಿಶಾಲ್‌ರಾವ್ ನೇತೃತ್ವದ ತಂಡ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಸಿದ್ಧರಾಗಿದ್ದಾರೆ ಎಂದರಲ್ಲದೇ ಆದ್ದರಿಂದ ರಾಜ್ಯದಲ್ಲಿ 489 ಪಾಸಿಟಿವ್ ಪ್ರಕರಣಗಳಲ್ಲಿ 153 ಜನರು ಗುಣಮುಖರಾಗಿದ್ದಾರೆ. ಇವರನ್ನು ಸಂಪರ್ಕ ಮಾಡುತ್ತಿದ್ದೇವೆ ಎಂದು ಹೇಳಿದರು.
ಇವರು 15 ದಿನಕ್ಕೊಮ್ಮೆ ರಕ್ತ ನೀಡಬಹುದು. ಗುಣಮುಖರಾದವರು ಸ್ವಯಂ ಪ್ರೇರಣೆಯಿಂದ ಬಂದು ನಮಗೆ ಸಹಕಾರ ನೀಡಬೇಕು ಎಂದ ಅವರು ಜಿಲ್ಲೆಯಲ್ಲಿ ಖಾಸಗಿ ಕ್ಲಿನಿಕ್ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಐಎಲ್‌ಎ ಪ್ರಕರಣಗಳಲ್ಲಿ ಲಕ್ಷಣಗಳಿರುವವರಿಗೆ ಕ್ವಾರೆಂಟೈನ್ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೂ 140 ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಡಿಹಚ್‌ಓ ಕಚೇರಿಯಲ್ಲಿ 2 ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದ್ದು, ಲಕ್ಷಣಗಳಿರುವವರು ಕರೆ ಮಾಡುವವರ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿ ಗಳಿಗೆ ತಿಳಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ. ಬಿ.ಆರ್. ಚಂದ್ರಿಕಾ ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಮಾತನಾಡಿ, ವಿದೇಶದಿಂದ ಬಂದವರ ಕ್ವಾಂರೆ ಟೈನ್ ಅವಧಿ ಮುಗಿದಿದ್ದರೂ ಸಹ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಹೆಚ್ಚಿನ ಸೋಂಕು ಹರಡಿರುವ ದೇಶದಿಂದ ಬಂದವರ ಮಾದರಿಗಳು 2ನೇ ಬಾರಿಯೂ ನೆಗೆಟಿವ್ ಬಂದಿದೆ. ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿರ್ವತಿಸಲಾಗಿದ್ದು, ಹೆಚ್ಚಿನ ವೆಂಟಿ ಲೇಟರ್ ಅವಶ್ಯಕತೆಯಿದೆ ಎಂದರು. ಅಲ್ಲದೇ ಖಾಸಗಿ ಆಸ್ಪತ್ರೆಗಳಿಂದ ಬಂದಿರುವ ಉಸಿರಾಟದ ಸಮಸ್ಯೆ, ಜ್ವರ ಲಕ್ಷಣಗಳಿರುವವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಇದ್ದರು.
ನಂತರ ಜಿಲ್ಲಾಸ್ಪತ್ರೆಗೆ ತೆರಳಿ ಕೋವಿಡ್ -19ರ ನಿಯಂತ್ರಣ ಸಂಬಂಧ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.