ಜೆರುಸಲೇಂ : ಜೆರುಸಲೇಂ ನ ‘ಈನ್ ಕೆರೆಮ್’ ಎಂಬಲ್ಲಿನ ಸುಪ್ರಸಿದ್ಧ ಚರ್ಚ್ ಆಫ್ ವಿಸಿಟೇಶನ್‌ನಲ್ಲಿ ಭಾರತದಿಂದ ಬಂದ ಕೊಂಕಣಿ ಕ್ರೈಸ್ತ ಯಾತ್ರಿಕರು ಕೊಂಕಣಿ ಭಾಷೆಯಲ್ಲಿ ಬರೆಯಲ್ಪಟ್ಟ ಪ್ರಾರ್ಥನಾ ಫಲಕವೊಂದನ್ನು ಅನಾವರಣಗೊಳಿಸಿ ಸಂಭ್ರಮಿಸಿದರು.
ಏಸು ಕ್ರಿಸ್ತರ ತಾಯಿ ವರ್ಜಿನ್ ಮೇರಿ ಅವರು ಜಾನ ದಿ ಬ್ಯಾಪ್ಟಿಸ್ಡ್ ಅವರ ತಾಯಿ ಎಲಿಜಬೆತ್ ಅವರನ್ನು ಸಂದರ್ಶಿಸಿದುದರ ಗೌರವಾರ್ಪಣೆಯ ಭಾಗವಾಗಿ ಕೊಂಕಣಿ ಪ್ರಾರ್ಥನಾ ಫಲಕದ ಅನಾವರಣವು ನಡೆದಿದೆ.
ಮಾತೆ ಮೇರಿಯ ಗುಣಗಾನ ಮಾಡುವ ಮ್ಯಾಗ್ನಿಫಿಕ್ಯಾಟ್ ಪ್ರಾರ್ಥನಾ ಫಲಕದ ಅನಾವರಣ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವೆಯ ಆರ್ಚ್ ಬಿಷಪ್, ದಮನ್ ಮತ್ತು ದೀವ್‌ನ ಫಾದರ್ ಫಿಲಿಪ್ ನೇರಿ ಫೆರಾವೋ ಮತ್ತು ಅನೇಕ ಭಾರತೀಯ ಕೊಂಕಣಿ ಕ್ರೈಸ್ತ ಯಾತ್ರಿಕರ ಕಂಗಳಲ್ಲಿ ಆನಂದ ಬಾಷ್ಪ ಉಕ್ಕಿ ಹರಿಯಿತು.
“ಕೊಂಕಣಿ ಭಾಷಿಕರಿಗೆ ಇದೊಂದು ಅತ್ಯಂತ ಮಹೋನ್ನತ ಗೌರವದ ಮತ್ತು ಸಂತಸದ ಕ್ಷಣವಾಗಿದೆ’ ಎಂದು ಫಾದರ್ ಫೆರಾವೋ ಹೇಳಿದರು.
ಕತಾರ್‌ನಲ್ಲಿ ಪ್ರಕೃತ ವಾಸವಾಗಿರುವ ಕ್ರೈಸ್ತ ಕೊಂಕಣಿ ಭಾಷಿಕರಾದ ನ್ಯಾನ್ಸಿ ಅವರು “ನಾವು ದೋಹಾದಿಂದ ಅಮ್ಮಾನ್‌ಗೆ ಒಟ್ಟು ಆರು ಮಂದಿ ವಿಮಾನದಲ್ಲಿ ಬಂದಿದ್ದೆವೆ ಮತ್ತು ಈ ಸ್ಮರಣೀಯ ಐತಿಹಾಸಿಕ ಸಮಾರಂಭವು ನಮ್ಮ ಈ ಯಾತ್ರೆಯ ಬಹುಮುಖ್ಯ ಭಾಗವಾಗಿದೆ’ ಎಂದು ಆನಂದ ತುಂದಿಲರಾಗಿ ಹೇಳಿದರು.
“ಕೊಂಕಣಿ ಕ್ರೈಸ್ತರಾಗಿರುವ ನಮಗೆ ಮಾತೆ ಮೇರಿಯಲ್ಲಿ ಅತ್ಯಂತ ಆಳವಾದ ನಂಬಿಕೆ, ಭಯ, ಭಕ್ತಿ ಇದೆ. ನಮ್ಮ ಸಮುದಾಯದಲ್ಲಿ ಮದರ್ ಮೇರಿ ಮತ್ತು ಮದರ್ ತೆರೇಸಾ ಮಹೋನ್ನತ ಮತ್ತು ಅತ್ಯಂತ ಗೌರವಾನ್ವಿತ ವ್ಯಕ್ತಿಗಳು . ಈ ಚರ್ಚ್‌ನಲ್ಲಿ ಮೇರಿ ಮಾತೆಯ ಕೊಂಕಣಿ ಪ್ರಾರ್ಥನೆಯ ಫಲಕವನ್ನು ಅನಾವರಣ ಗೊಳಿಸಲು ನಮಗೆ ಸಾಧ್ಯವಾಗಿರುವುದರಿಂದ ಆಗಿರುವ ಸಂತಸ ಮತ್ತು ಹೆಮ್ಮೆಯನ್ನು ನಾವು ಶಬ್ದಗಳಲ್ಲಿ ವರ್ಣಿಸಲಾರೆವು’ ಎಂದು ನ್ಯಾನ್ಸಿ ಹೇಳಿದರು.