ದಾವಣಗೆರೆ: ನಗರದ ಹಳೇ ಕುಂದುವಾಡ ಮುಖ್ಯ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭತ್ತದ ಸಸಿ ನಾಟಿ ಹಾಗೂ ಪಾಲಿಕೆ ಈಜುಕೊಳದ ಫಲಕ ಹಾಕಿ ಪ್ರತಿಭಟಿಸಲಾಗಿದೆ.
ಮನಾ ಬ್ರಿಗೇಡ್ ನೇತೃತ್ವದಲ್ಲಿ ಜನತಾ ರಕ್ಷಣಾ ವೇದಿಕೆ, ವಿಘ್ನೇಶ್ವರ ಯುವಕರ ಸಂಘ, ಭಗತ್ ಸಿಂಗ್ ಬಾಯ್ಸ, ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಕೆಸರು ಗದ್ದೆಯಂತಾಗಿರುವ ಹಳೇ ಕುಂದುವಾಡ ರಸ್ತೆಯಲ್ಲೇ ಭತ್ತದ ಸಸಿ ನಾಟಿ ಮಾಡಿ ಹಾಗೂ ಗುಂಡಿಯಲ್ಲಿ ನಿಂತ ನೀರಿನ ಪಕ್ಕದಲ್ಲಿ ಕಾರ್ಪೋರೇಷನ್ ಈಜುಕೊಳ ಎಂಬ ಫಲಕ ಅಳವಡಿಸಿ ಪ್ರತಿಭಟಿಸಿದರು.
ಈ ಹಿಂದೆ 2004ರಲ್ಲಿ ನೀರಾವರಿ ಪ್ರದೇಶಕ್ಕೆ ಬಳಕೆಯಾಗುತ್ತಿದ್ದ ಕುಂದುವಾಡ ಕೆರೆ ನೀರನ್ನು ಅಂದಿನ ಜನಪ್ರತಿನಿ ಧಿಗಳು, ಅ ಧಿಕಾರಿಗಳು ಕುಂದುವಾಡಕ್ಕೆ ಅಗತ್ಯ ಮೂಲಭೂತ ಸೌಕರ್ಯ ನೀಡುವುದಾಗಿ ಭರವಸೆ ನೀಡಿ ದಾವಣಗೆರೆ ನಗರಕ್ಕೆ ಕುಡಿಯುವ ನೀರಿಗಾಗಿ ಬಳಸಲು ಗ್ರಾಮಸ್ಥರ ಬಳಿ ಒಪ್ಪಿಗೆ ಪಡೆದಿದ್ದರು, ಆದರೆ ಬದಲಾದ ದಿನಮಾನಗಳಲ್ಲಿ ಕುಂದುವಾಡಕ್ಕೆ ಮೂಲಭೂತ ಸೌಲಭ್ಯ ಮರೀಚಿಕೆಯಾಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯ 30ನೇ ವಾರ್ಡ್‌ಗೆ ಸೇರಿದ್ದರೂ ಸಹ ಯಾವುದೇ ಸೌಲಭ್ಯ ಸಿಗದೇ ನರಳುತ್ತಿದೆ ಎಂದು ಪ್ರತಿಭಟನಾಕಾರು ದೂರಿದರು.
10ವರ್ಷಕ್ಕೂ ಹೆಚ್ಚು ಕಾಲ ಕುಂದುವಾಡಕ್ಕೆ ಸಂಚರಿಸುವ ಮುಖ್ಯ ರಸ್ತೆ ಕಾಡಿನ ದಾರಿಗಿಂತ ಕೆಟ್ಟದಾಗಿದೆ. ಹೆಜ್ಜೆಗೊಂದರಂತೆ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಮಳೆ ಬಂದರಂತು ಸಂಚಾರ ಬಂದ್ ಆಗುತ್ತದೆ. ಬೈಕ್ ಸವಾರರು ಹಲವಾರು ಬಾರಿ ಬಿದ್ದು ಗಾಯಗೊಂಡಿದ್ದಾರೆ. ವಿನೋಬನಗರ 4ನೇ ಮುಖ್ಯರಸ್ತೆ ಕುಂದುವಾಡ ಗೇಟ್‌ನಿಂದ ಕುಂದುವಾಡ ಕೆರೆ ರಸ್ತೆ ಮುಕ್ತಾಯದವರೆಗೆ ರಸ್ತೆ ನಿರ್ಮಿಸಿಕೊಡಿ ಎಂಬುದಾಗಿ ಪಾಲಿಕೆ ಸದಸ್ಯರು, ಆಯುಕ್ತರಿಗೆ, ಜಿಲ್ಲಾಧಿಕಾರಿ, ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದರೂ ಸಹ ಇದುವರೆಗೂ ಏನೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತದ ಗಮನ ಸೆಳೆಯಲು ಈ ರೀತಿ ಪ್ರತಿಭಟಿಸಲಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.