Advertisement

ವಿ.ವಿ. ಗೆ ದಾಖಲಾತಿ ಪಡೆದ ವಿದ್ಯಾರ್ಥಿ ಗಿಡ ನೆಡುವುದು ಕಡ್ಡಾಯ!

08:04 PM Aug 07, 2021 | Team Udayavani |

ಮಹಾನಗರ: ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ದಾಖಲಾತಿ ಪಡೆಯುವ ಪ್ರತೀ ವಿದ್ಯಾರ್ಥಿಯು ಇನ್ನು ಮುಂದೆ ಕ್ಯಾಂಪಸ್‌ನಲ್ಲಿ ಒಂದು ಗಿಡವನ್ನು ಕಡ್ಡಾಯವಾಗಿ ನೆಟ್ಟು ತನ್ನ ಶೈಕ್ಷಣಿಕ ಅವಧಿ ಪೂರ್ಣವಾಗುವವರೆಗೆ ಅದರ ಪೋಷಣೆ ಜವಾಬ್ದಾರಿ ನಿರ್ವಹಿಸಬೇಕು!

Advertisement

ವಿ.ವಿ. ಕ್ಯಾಂಪಸ್‌ ಪರಿಸರ ಸ್ನೇಹಿಯಾಗಲಿ, ವಿದ್ಯಾರ್ಥಿಗಳಿಗೆ ಗಿಡ-ಮರದ ಬಗ್ಗೆ ಪ್ರೀತಿ ಮೂಡಲಿ ಎಂಬ ಉದ್ದೇಶದಿಂದ ಮಂಗಳೂರು ವಿ.ವಿ. ಈ ವರ್ಷದಿಂದ ಈ ನಿಯಮ ಜಾರಿಗೆ ನಿರ್ಧರಿಸಿದೆ. ಕಳೆದ ವರ್ಷ ಇದನ್ನು ಜಾರಿಗೊಳಿಸಿದ್ದರೂ ಪೂರ್ಣಪ್ರಮಾ ಣದಲ್ಲಿ ಅನುಷ್ಠಾನವಾಗಿರಲಿಲ್ಲ. ಈ ವರ್ಷ ಇದಕ್ಕೆ ಪೂರ್ಣ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ.

ಮಂಗಳೂರು ವಿ.ವಿ.ಯಲ್ಲಿ ಪ್ರತೀವರ್ಷ 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಈ ಪೈಕಿ ಪ್ರತೀ ವರ್ಷ 1,000 ವಿದ್ಯಾರ್ಥಿಗಳು ಹೊಸದಾಗಿ ದಾಖಲಾತಿ ಪಡೆಯುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳು ಗಿಡ ನೆಡಬೇಕು ಎಂಬುದು ಈಗಿನ ಉದ್ದೇಶ. ಉದಾಹರಣೆಗೆ, ಎಂ.ಕಾಂ.ಗೆ ಒಬ್ಬ ವಿದ್ಯಾರ್ಥಿ ದಾಖಲಾಗುವುದಾದರೆ ಆ ವಿದ್ಯಾರ್ಥಿಯ ಹೆಸರಿನಲ್ಲಿ ಒಂದು ಗಿಡ ಆತನೇ ನಡೆಬೇಕು. 2 ವರ್ಷಗಳ ವೇಳೆಯಲ್ಲಿ ಗಿಡವನ್ನು ಆ ವಿದ್ಯಾರ್ಥಿಯೇ ಪೋಷಿಸಬೇಕು.

ಗಿಡಗಳಿಗೆ ಡಿಜಿಟಲ್‌ ದಾಖಲಾತಿ!:

ಗಿಡ ನೆಟ್ಟಿರುವ ಬಗ್ಗೆ ವಿದ್ಯಾರ್ಥಿಯ ಹೆಸರನ್ನು ಡಿಜಿಟಲ್‌ ನೋಂದಣಿ ಮಾಡಿಕೊಂಡು ಆ ಗಿಡದ ಮುಂಭಾಗ ಟ್ಯಾಗ್‌ ಮಾಡಿ ಅಂಟಿಸಲಾಗುತ್ತದೆ. ಅದರಲ್ಲಿ ಗಿಡದ ಹೆಸರನ್ನು ನಮೂದಿಸಲಾಗುತ್ತದೆ. ಯಾವ ಬ್ಯಾಚ್‌ನ ವಿದ್ಯಾರ್ಥಿಯು ಯಾವ ದಿನದಂದು ಗಿಡ ನೆಟ್ಟಿದ್ದಾನೆ? ಎಂಬುದನ್ನು ಇದರಲ್ಲಿ ನಮೂದಿಸಲಾಗುತ್ತದೆ. ಅದನ್ನು ವಿ.ವಿ.ಯ ಕಂಪ್ಯೂಟರ್‌ಗೆ ಲಿಂಕ್‌ ಮಾಡಿರಲಾಗುತ್ತದೆ.  10 ವರ್ಷಗಳ ಬಳಿಕ ಆ ವಿದ್ಯಾರ್ಥಿ ವಿ.ವಿ.ಗೆ ಬಂದರೆ ಆ ಮರವನ್ನು ಪತ್ತೆ ಹಚ್ಚಲು ಸಾಧ್ಯ. ಏಕೆಂದರೆ ತಾನು ನೆಟ್ಟ ಗಿಡ ಎಲ್ಲಿತ್ತು? ಯಾವುದು? ಸ್ಥಳ ಇತ್ಯಾದಿ ವಿವರವನ್ನು ಡಿಜಿಟಲ್‌ ಪರಿಕಲ್ಪನೆಯಿಂದ ಪಡೆದುಕೊಳ್ಳಲು ಸಾಧ್ಯ.

Advertisement

ಪ್ರತೀ ವಿಭಾಗಕ್ಕೆ ಪ್ರತ್ಯೇಕ ಜಾಗ:

ಮೈಸೂರು ವಿ.ವಿ.ಯ ಕ್ಯಾಂಪಸ್‌ನಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟ ಪರಿಣಾಮ ಪ್ರತೀ ವರ್ಷ ಹಣ್ಣು ಹರಾಜು ಮೂಲಕ ಲಕ್ಷಾಂತರ ರೂ. ಆದಾಯವೂ ಬರುತ್ತಿದೆ. ಹಲವು ವರ್ಷಗಳ ಶ್ರಮದಿಂದ ಇದು ಸಾಧ್ಯವಾಗಿದೆ. ಇದೀಗ ಮಂಗಳೂರು ವಿ.ವಿ.ಯಲ್ಲಿಯೂ ಇದನ್ನು ಜಾರಿಗೆ ತರಲಾಗುತ್ತಿದೆ. ಪ್ರತೀ ವಿಭಾಗಕ್ಕೆ ಒಂದೊಂದು ಜಾಗವನ್ನು ಮಂಜೂರು ಮಾಡಲಾಗುತ್ತದೆ. ಗಿಡಗಳನ್ನು ಮಂಗಳೂರು ವಿ.ವಿ.ಯೇ ನೀಡಲಿದೆ. ಫಲ ಬರುವ ಗಿಡಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಲಾಗುತ್ತದೆ.

207 ಕಾಲೇಜುಗಳಲ್ಲಿ ಗಿಡ ನೆಡಲು ಮನವರಿಕೆ :

ವಿ.ವಿ. ಕ್ಯಾಂಪಸ್‌ನಲ್ಲಿ ಮಾಡುವಂತೆಯೇ ವಿ.ವಿ. ಸಂಯೋಜನೆ ಒಳಪಟ್ಟ ದ.ಕ., ಉಡುಪಿ, ಕೊಡಗು ಜಿಲ್ಲೆಯ 207 ಇತರ ಕಾಲೇಜುಗಳಲ್ಲಿಯೂ ಈ ನಿಯಮ ಜಾರಿಗೆ ವಿ.ವಿ.ಯಿಂದ ಮನವರಿಕೆ ಮಾಡಲಾಗುತ್ತದೆ. ಸ್ಥಳಾವಕಾಶ ಇರುವ ಕಾಲೇಜುಗಳಿಗೆ ಇದನ್ನು ಅನುಷ್ಠಾನಿಸಲು ಸೂಚಿಸಲಾಗುತ್ತದೆ. ಒಂದು ವೇಳೆ ಸ್ಥಳಾವಕಾಶ ಇಲ್ಲದಿದ್ದರೆ ಆ ಕಾಲೇಜಿನವರು ಖಾಲಿ ಇರುವ ಇತರ ಸ್ಥಳಗಳಲ್ಲಿ ಗಿಡ ನೆಡುವ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡಲು ಅವಕಾಶವೂ ಇದೆ. ಇದರ ಜತೆಗೆ ಗ್ರಾಮದ ಕಡೆಗೆ ವಿದ್ಯಾರ್ಥಿಗಳ ನಡೆ ಅಭಿಯಾನ ಕೂಡ ವಿ.ವಿ.ಯಲ್ಲಿ ನಡೆಯಲಿದೆ. ಸಿಟಿ ಮಕ್ಕಳಿಗೆ ಹಳ್ಳಿ ಪರಿಚಯ ಮಾಡುವುದು ಇದರ ಉದ್ದೇಶ. ಎನ್‌ಎಸ್‌ಎಸ್‌, ಯೂತ್‌ ರೆಡ್‌ಕ್ರಾಸ್‌ ನೇತೃತ್ವದಲ್ಲಿ ಇದು ಜಾರಿಯಾಗಲಿದೆ.

ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಯು ಒಂದೊಂದು ಗಿಡ ನೆಡುವುದನ್ನು ಕಡ್ಡಾಯ ಮಾಡಲಾಗುತ್ತಿದೆ. ಇದಕ್ಕಾಗಿ ವಿ.ವಿ.ಯ ಪ್ರತೀ ವಿಭಾಗಕ್ಕೆ ಒಂದೊಂದು ಜಾಗವನ್ನು ಗೊತ್ತುಪಡಿಸಲಾಗಿದೆ. ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ವಿದ್ಯಾರ್ಥಿಯದ್ದಾಗಿದ್ದು, ಆತ ವಿ.ವಿ. ಬಿಟ್ಟು ತೆರಳುವಾಗ ಅವರಿಗೆ “ಪರಿಸರ ಸ್ನೇಹಿ ಸರ್ಟಿಫಿಕೆಟ್‌ ನೀಡಲಾಗುತ್ತದೆ. ವಿ.ವಿ. ವ್ಯಾಪ್ತಿಯ ಕಾಲೇಜಿನಲ್ಲಿಯೂ ಇಂತಹ ಯೋಜನೆ ಜಾರಿಗೊಳಿಸಲು ತಿಳಿಸಲಾಗುತ್ತದೆ.-ಪ್ರೊ| ಪಿ.ಎಸ್‌. ಯಡಯಪಡಿತ್ತಾಯ,ಕುಲಪತಿ, ಮಂಗಳೂರು ವಿ.ವಿ

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next