Advertisement

ಅದಮ್ಯ ಚೇತನದಿಂದ 1 ಕೋಟಿ ಗಿಡ ನೆಡುವ ಸಂಕಲ್ಪ

11:19 AM Jan 02, 2017 | Team Udayavani |

ಬೆಂಗಳೂರು: ನಗರದಲ್ಲಿ ಒಂದು ಕೋಟಿ ಗಿಡ ನೆಡುವುದು ಹಾಗೂ ಕನಿಷ್ಠ ಒಂದು ನದಿಯನ್ನು ಪುನಶ್ಚೇತನಗೊಳಿಸುವ ಸಂಕಲ್ಪವನ್ನು ಅದಮ್ಯ ಚೇತನ ಹೊಂದಿದೆ ಎಂದು ಆ ಸಂಸ್ಥೆಯ ಗೌರವಾಧ್ಯಕ್ಷರೂ ಆಗಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ತಿಳಿಸಿದ್ದಾರೆ. 

Advertisement

ನಗರದ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ “ಅದಮ್ಯ ಚೇತನ ಸೇವಾ ಉತ್ಸವ-2017’ರಲ್ಲಿ ವಂದೇಮಾತರಂ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಉದ್ಯಾನ ನಗರಿಯಲ್ಲಿ ಹಸಿರು ಕಣ್ಮರೆಯಾಗುತ್ತಿದೆ. ನಗರದಲ್ಲೇ ಏಳು ನದಿಗಳು ಇದ್ದವು. ಈಗ ಒಂದೂ ಕಾಣುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಅದಮ್ಯ ಚೇತನದಡಿ ಒಂದು ಕೋಟಿ ಗಿಡ ನೆಟ್ಟು, ಬೆಳೆಸುವ ಗುರಿ ಹೊಂದಲಾಗಿದೆ. ಅಲ್ಲದೆ, ಕನಿಷ್ಠ ಒಂದು ನದಿಯನ್ನಾದರೂ ಪುನಃಶ್ಚೇತನಗೊಳಿಸುವ ಸಂಕಲ್ಪ ಇದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. 

ಈಗಾಗಲೇ ಪ್ರತಿ ಭಾನುವಾರ ಸಸಿ ನೆಡುವ ಕಾರ್ಯಕ್ರಮ ಜಾರಿಯಲ್ಲಿದ್ದು, ಕಳೆದ 53 ವಾರಗಳಲ್ಲಿ 50 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದ ಅವರು, ನಿತ್ಯ ಎರಡು ಲಕ್ಷ ಮಕ್ಕಳಿಗೆ ಅದಮ್ಯ ಚೇತನ ಬಿಸಿಯೂಟದ ರೂಪದಲ್ಲಿ ಅನ್ನ ನೀಡುತ್ತಿದೆ. ಕಳೆದ ಒಂದೂವರೆ ದಶಕದಲ್ಲಿ 43 ಕೋಟಿ ಮಕ್ಕಳು ಇದರ ಉಪಯೋಗ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. 

ಅದಮ್ಯ ಚೇತನ ಆದರ್ಶ: ಲೋಕಸಭೆ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಮಾತನಾಡಿ, ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ನೀಡುವ ಬಿಸಿಯೂಟದಿಂದ ಉದ್ದೇಶ ಈಡೇರದು. ಅದರಲ್ಲಿ ಸೇವಾ ಮನೋಭಾವವೂ ಇರಬೇಕು. ಆಗ ಯೋಜನೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಬಿಸಿಯೂಟ ನೀಡುತ್ತಿರುವ ಸಂಸ್ಥೆಗಳಿಗೆ ಅದಮ್ಯ ಚೇತನ ಮಾದರಿ ಎಂದು ಬಣ್ಣಿಸಿದರು.

Advertisement

ಬಿಸಿಯೂಟ ಬರೀ ಮಕ್ಕಳ ದೈಹಿಕ ಸಾಮರ್ಥ್ಯ ಹೆಚ್ಚಿಸಲಿಕ್ಕಲ್ಲ; ಮಾನಸಿಕವಾಗಿಯೂ ಸದೃಢಗೊಳಿಸಲು ನೀಡಲಾಗುತ್ತದೆ. ಈ ದಿಸೆಯಲ್ಲಿ ಬಿಸಿಯೂಟ ತಯಾರಿಸುವುದು ಹೇಗೆ? ಅದರ ನಿರ್ವಹಣೆ ಯಾವ ರೀತಿ ಮಾಡಬೇಕು ಎನ್ನುವುದನ್ನು ತಿಳಿಯಲು ಬಿಸಿಯೂಟ ನೀಡುತ್ತಿರುವ ರಾಜ್ಯಗಳು ಬೆಂಗಳೂರಿನ ಅದಮ್ಯ ಚೇತನ ಪಾಕಶಾಲೆಗೆ ಒಮ್ಮೆ ಭೇಟಿ ನೀಡುವುದು ಸೂಕ್ತ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್‌, ಶಾಸಕ ರವಿ ಸುಬ್ರಹ್ಮಣ್ಯ, ವಿಜ್ಞಾನಿ ಅಣ್ಣಾದೊರೈ, ಬಿಇಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಗೌತಮ್‌, ಡಿಆರ್‌ಡಿಓ ನಿರ್ದೇಶಕ ಉಪೇಂದ್ರಕುಮಾರ್‌ ಸಿಂಗ್‌, ಎಚ್‌ಎಎಲ್‌ನ ವೆಂಕಟೇಶ್‌, ಎನ್‌ಎಎಲ್‌ನ ಡಾ.ಸತೀಶ್ಚಂದ್ರ, ಸಿಐಐನ ರವಿ ರಾಘವನ್‌, ಅದಮ್ಯ ಚೇತನದ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಹಸ್ರಾರು ಮಕ್ಕಳು, ಗಾಯಕರೊಂದಿಗೆ ಏಕಕಾಲದಲ್ಲಿ ಮೊಳಗಿದ “ವಂದೇ ಮಾತರಂ’ ಆಕರ್ಷಕವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next