Advertisement

ತೋಪೆದ್ದು ಹೋದ ನೆಡುತೋಪುಗಳು

07:29 AM Jul 09, 2019 | Suhan S |

ಧಾರವಾಡ: ಭ್ರಷ್ಟಾಚಾರ, ನಿರ್ಲಕ್ಷ್ಯ ಮತ್ತು ಬೇಜಾವಾಬ್ದಾರಿಯಿಂದ ಸಾಮಾಜಿಕ ಅರಣ್ಯ ಬೆಳೆಸುವ ಯೋಜನೆಗಳು ಮೂಲೆಗುಂಪಾಗಿದ್ದು ಒಂದೆಡೆಯಾದರೆ, ಜಿಲ್ಲೆಯಲ್ಲಿ ಆವರಿಸಿದ್ದ ದಟ್ಟ ಕಾಡು ಕಳೆದು ಹೋದದ್ದು ಇನ್ನೊಂದು ದುರಂತ ಕಥೆ.

Advertisement

ಧಾರವಾಡ ನಗರ ಮತ್ತು ತಾಲೂಕಿನ ಪಶ್ಚಿಮದ 50 ಹಳ್ಳಿಗಳು, ಇಡೀ ಕಲಘಟಗಿ ತಾಲೂಕಿನ ತುಂಬಾ ವಿಶ್ವಕ್ಕೆ ಶ್ರೇಷ್ಠ ಎನಿಸಿಕೊಂಡ ತೇಗದ ಮರಗಳ ನಾಟು ತುಂಬಿ ಹೋಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕಾಡಿಗೆ ಅಂಟಿಕೊಂಡಂತೆ ಇರುವ ದಟ್ಟ ಅರಣ್ಯ ಹಾಡಹಗಲೇ ಕದೀಮರ ಪಾಲಾಗಿದ್ದು, ಇಂದಿಗೂ ಅಲ್ಲಿ ಮರಳಿ ಅಂತಹ ಕಾಡು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ.

ಬರೀ 40 ವರ್ಷಗಳ ಹಿಂದೆ ಚಿರತೆ, ಜಿಂಕೆ ಸೇರಿದಂತೆ ವಿವಿಧ ಪ್ರಬೇಧಗಳ ಅಪರೂಪದ ಜೀವ ಸಂಕುಲಕ್ಕೆ ಈ ಪ್ರದೇಶ ಉತ್ತಮ ವಾಸಸ್ಥಾನವಾಗಿತ್ತು.134 ಕ್ಕೂ ಅಧಿಕ ಬಗೆಯ ನೈಸರ್ಗಿಕ ಸಸ್ಯಗಳು ಇಲ್ಲಿದ್ದವು. ಆದರಿಂದು ಇಡೀ ಅರಣ್ಯವನ್ನು ಕಾಂಗ್ರೆಸ್‌ ಕಸ ಮತ್ತು ಯುಪಟೋರಿಯಂ ಆವರಿಸಿದ್ದು, ಇದು ದಟ್ಟಾರಣ್ಯ ಹೋಗಿ ಕುರಚಲು ಕಾಡಾಗಿ ಮಾರ್ಪಟ್ಟಿದೆ.

ಬೆಂಕಿ ಭಯ, ಸಿಬ್ಬಂದಿ ಕೊರತೆ: ಇನ್ನು ಜಿಲ್ಲೆಯಲ್ಲಿ ಅರಣ್ಯ ಮಧ್ಯದಲ್ಲಿ ನೆಟ್ಟ ತೋಪುಗಳ ಸಂರಕ್ಷಣೆಯ ಮಹತ್ವದ ಹೊಣೆಯನ್ನು ಹೊರೆಸಲಾಗಿದೆ. ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ 20 ಸ್ಥಳಗಳಲ್ಲಿ ಬೆಂಕಿ ಬಿದ್ದಿದ್ದು, ಲಕ್ಷಕ್ಕೂ ಅಧಿಕ ಸಸಿಗಳು ಸುಟ್ಟು ಕರಕಲಾಗಿವೆ. ಇನ್ನು ಮೊದಲ ಮಳೆಯ ಕೊರತೆಯಿಂದ ಅರೆ ಜೀವ ಹಿಡಿದಿದ್ದ ಸಸ್ಯಗಳಂತೂ ಬೇಸಿಗೆ ಸಮಯಕ್ಕೆ ಒಣಗಿ ನಿಂತಿರುವಾಗಲೇ ಕಾಡ್ಗಿಚ್ಚು ಹತ್ತಿದರೆ ಕೇಳಬೇಕೇ ? ಎಲ್ಲವೂ ಭಸ್ಮ. ನೆಟ್ಟ ಗಿಡಗಳನ್ನು ಕನಿಷ್ಠ 2 ವರ್ಷ ಪೋಷಣೆ ಮಾಡಬೇಕು. ಅಂದರೆ ಎರಡು ಮಳೆಗಾಲ ಮುಗಿಯುವವರೆಗೂ ಪೋಷಿಸಬೇಕು. ಸರ್ಕಾರದಿಂದ ಇದಕ್ಕಾಗಿ ಸಾಕಷ್ಟು ಅನುದಾನವೂ ಬರುತ್ತದೆ. ಅರಣ್ಯ ಮಧ್ಯದಲ್ಲಿ ನೆಟ್ಟ ಗಿಡಕ್ಕೆ 40 ಲೀಟರ್‌ನಂತೆ ತಿಂಗಳಿಗೆ ಎರಡು ಬಾರಿ ನೀರುಣಿಸಬೇಕು. ಆದರೆ ಸತ್ಯ ನೀರು ಕುಡಿದ ಸಸಿಗಳಿಗೆ ಗೊತ್ತು.

ಇನ್ನು ಅಗ್ನಿದೇವರ ಕಾಟವೂ ಹಸುಗೂಸಿನಂತಹ ಸಸಿಗಳನ್ನೂ ಬಿಟ್ಟಿಲ್ಲ. ಕಲಕೇರಿ, ಬೂದನಗುಡ್ಡ, ಬಣದೂರು, ವೀರಾಪೂರ, ಅರಣ್ಯ ವಲಯದಲ್ಲಿ ಕಳೆದ ಐದು ವರ್ಷಗಳಲ್ಲಿ 55ಕ್ಕೂ ಹೆಚ್ಚು ಬಾರಿ ಕಾಡಿಗೆ ಅಲ್ಲಲ್ಲಿ ಬೆಂಕಿ ಬಿದ್ದ ಪ್ರಕರಣಗಳು ದಾಖಲಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿವರ್ಷದ ಡಿಸೆಂಬರ್‌ನಿಂದ ಮಾರ್ಚ್‌ವರೆಗೂ ಕಾಡಿಗೆ ಬೆಂಕಿ ಹಾಕುವ ಕದೀಮರನ್ನು ಕಾಯುವ ಮತ್ತು ಹೊತ್ತಿದ ಬೆಂಕಿ ನಂದಿಸುವ ಕೆಲಸ ಮಾಡುವುದು ಅನಿವಾರ್ಯವಾಗಿದೆ.

Advertisement

ಬೆಲೆ ಬಾಳುವ ಗಿಡಗಳು ಕಳ್ಳರ ಪಾಲು: ಆದರೆ ಕಾಡಿನ ಸಂರಕ್ಷಣೆ ಮತ್ತು ಸಸಿಗಳನ್ನು ನೆಟ್ಟು ಬೆಳೆಸಲು ಅಗತ್ಯವಾದ ಸಿಬ್ಬಂದಿ ಅರಣ್ಯ ಇಲಾಖೆಯಲ್ಲಿ ಇಲ್ಲದಿರುವುದು ಕೂಡ ಪರೋಕ್ಷವಾಗಿ ಸಸಿಗಳ ಮಾರಣ ಹೋಮಕ್ಕೆ ಕಾರಣವಾಗುತ್ತಿದೆ. ಎಂಟು ಚದುರ ಕಿ.ಮೀ.ವಿಸ್ತೀರ್ಣದ ಒಂದು ವಲಯಕ್ಕೆ ಬರೀ ಆರೇ ಜನ ಅರಣ್ಯ ಸಿಬ್ಬಂದಿ ಕಾವಲು ಕಾಯುವುದು ಕಷ್ಟವಾಗುತ್ತಿದೆ. ಅರಣ್ಯದಲ್ಲಿನ ಬೆಲೆ ಬಾಳುವ ಗಿಡಮರಗಳು ಮಾತ್ರವಲ್ಲ, ಕಾಡು ಕಟ್ಟಿಗೆ ಗಿಡಗಳು ಕೂಡ ಕಳ್ಳರ ಪಾಲಾಗುತ್ತಿವೆ.

ದನಕರುಗಳ ತುಳಿದಾಟ: ಕಾಡಿನಲ್ಲಿ ನೆಟ್ಟ ಸಸಿಗಳು ಬದುಕಿ ಉಳಿಯದಿರಲು ಅರಣ್ಯ ಇಲಾಖೆ ಕೊಡುತ್ತಿರುವ ಇನ್ನೊಂದು ಪ್ರಮುಖ ಕಾರಣ ಕಾಡಿನಲ್ಲಿ ಗೌಳಿಗರು, ರೈತರು ನಡೆಸುತ್ತಿರುವ ಪಶು ಸಂಗೋಪನೆ. ದನಕರುಗಳನ್ನು ಮಳೆಗಾಲಕ್ಕೆ ಮೇಯಲು ಕಾಡಿನಲ್ಲಿ ಹೊಡೆಯುತ್ತಿದ್ದು, ಇವುಗಳ ಕಾಲಡಿ ಸಿಲುಕಿ ನೆಟ್ಟ ಸಸಿಗಳು ಸಾಯುತ್ತಿವೆ. ಅಷ್ಟೇಯಲ್ಲ, ಅತಿಕ್ರಮಣ ತೆರುವುಗೊಳಿಸಿ ಆ ಸ್ಥಳಕ್ಕೆ ನೆಟ್ಟ ಗಿಡಗಳನ್ನು ಎಷ್ಟೋ ಕಡೆಗಳಲ್ಲಿ ರೈತರೇ ಕಿತ್ತು ಹಾಕುತ್ತಾರೆ ಎನ್ನುವ ಗಂಭೀರ ಆರೋಪ ಅರಣ್ಯ ಇಲಾಖೆಯದ್ದು.

ಹುಟ್ಟಿದ ಗಿಡ ಕತ್ತರಿಸುವ ಹೆಸ್ಕಾಂ: ಲೋಕೋಪಯೋಗಿ ಇಲಾಖೆ ಮತ್ತು ನೀರು ಸರಬರಾಜು ಇಲಾಖೆಗಳ ಮಧ್ಯೆ ಯಾವ ರೀತಿ ಹೊಸ ರಸ್ತೆ ಮಾಡಿದ ಮರುದಿನವೇ ಅವುಗಳನ್ನು ಕಿತ್ತು ಹಾಕುವ ಪದ್ಧತಿ ಇದೆಯೋ, ಅಂತಹದೇ ಪದ್ಧತಿ ಅರಣ್ಯ ಇಲಾಖೆ ಮತ್ತು ವಿದ್ಯುತ್‌ ಇಲಾಖೆ ಮಧ್ಯ ಇದೆ. ಜಿಲ್ಲೆಯಲ್ಲಿ ಅದರಲ್ಲೂ ಹುಬ್ಬಳ್ಳಿ-ಧಾರವಾಡ, ಕಲಘಟಗಿ ಮತ್ತು ಧಾರವಾಡ ತಾಲೂಕಿನ ಗ್ರಾಮಗಳು ಹಾಗೂ ಜಿಲ್ಲಾ ರಸ್ತೆಗಳಲ್ಲಿ ಪ್ರತಿವರ್ಷ ಸಾವಿರಾರು ಗಿಡಗಳನ್ನು ಹೆಸ್ಕಾಂನವರು ಕಡೆದು ಹಾಕುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಗಿಡಗಳನ್ನು ಬುಡ ಸಮೇತ ಕಡೆಯದೇ ಹೋದರೂ ವಿದ್ಯುತ್‌ ತಂತಿ ದಾಟಿಸುವುದಕ್ಕೆ ದೈತ್ಯ ಟೊಂಗೆ, ರೆಂಬೆಗಳನ್ನು ಕತ್ತರಿಸಲಾಗುತ್ತಿದೆ.

  • ಕಾಡ್ಗಿಚ್ಚಿಗೆ ಆಹುತಿಯಾದ ಸಸಿ-ಗಿಡ- ಮರಗಳ ಅಂದಾಜು 2 ಲಕ್ಷಕ್ಕೂ ಅಧಿಕ
  • 5 ವರ್ಷಗಳಲ್ಲಿ ಅರಣ್ಯದಂಚಿನ ಹಳ್ಳಿಗರಿಗೆ ವಿತರಿಸಿದ ಎಲ್ಪಿಜಿ ಗ್ಯಾಸ್‌ 5300
  • ಅರಣ್ಯ ಮಧ್ಯ ನೆಟ್ಟ ಪ್ರತಿ ಸಸಿಗೂ ಬೇಕು ತಿಂಗಳಿಗೆ ಕನಿಷ್ಟ 180 ಲೀಟರ್‌ ನೀರು
  • ಸದ್ಯಕ್ಕೆ ಪೂರೈಕೆ ಆಗುತ್ತಿರುವುದು ವರ್ಷಕ್ಕೆ 40 ಲೀಟರ್‌ನಂತೆ ಎರಡು ಸಲ
ಬೊಕ್ಕಸವೂ ತುಂಬಲಿಲ್ಲ.. ಕಾಡಿನ ಆಸ್ತಿಯೂ ಆಗಲಿಲ್ಲ…

ನೆಡು ತೋಪುಗಳು ಇತ್ತ ಸರ್ಕಾರದ ಆಸ್ತಿಯೂ ಆಗಲಿಲ್ಲ, ಅತ್ತ ಕಾಡಿನ ಆಸ್ತಿಯೂ ಆಗಲಿಲ್ಲ. ತೇಗ, ಹೊನ್ನೆ, ಬೀಟೆ, ನಂದಿ ಅಷ್ಟೇಯಲ್ಲ, ಶ್ರೀಗಂಧದ ಗಿಡಗಳು ಕೂಡ ಹೇರಳವಾಗಿದ್ದ ಜಿಲ್ಲೆಯಲ್ಲಿನ ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಬ್ರಿಟೀಷರ ಕಾಲದಿಂದಲೂ ಲಕ್ಷ ಲಕ್ಷ ಸಾಗುವಾನಿ ಗಿಡಗಳನ್ನು ನೆಡುತೋಪುಗಳಲ್ಲಿ ಬೆಳೆಸಲಾಗಿತ್ತು. ಉತ್ತಮ ಮಳೆ ಮತ್ತು ಫಲವತ್ತಾದ ಮಣ್ಣಿನಿಂದ ಗುಣಮಟ್ಟದ ತೇಗ ಇಲ್ಲಿ ಬೆಳೆದಿತ್ತು. ಆದರೆ 80 ದಶಕದ ನಂತರ ನೆಟ್ಟ 10 ಸಾವಿರ ಎಕರೆಗೂ ಅಧಿಕ ಸಾಗವಾನಿ ನೆಡುತೋಪುಗಳು ತೋಪೆದ್ದು ಹೋಗಿವೆ. ಸದ್ಯಕ್ಕೆ ಅವುಗಳನ್ನು ಕಾಯವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾಡಿನಲ್ಲಿದ್ದ ಶ್ರೀಗಂಧ ಮುಗಿಯುತ್ತಿದ್ದಂತೆ ತೇಗದ ನಾಟು ಕರಗಿತು. ಇದೀಗ ನಡುವಯಸ್ಸಿನ ತೇಗದ (20 ವರ್ಷ ಹಳೆಯ)ಗಿಡಗಳು ಇಲ್ಲಿ ಬರೀ ಸಾವಿರ ಸಂಖ್ಯೆಯಲ್ಲಿ ಉಳಿದುಕೊಂಡಿವೆ ಅಷ್ಟೇ.
•ಬಸವರಾಜ ಹೊಂಗಲ್
Advertisement

Udayavani is now on Telegram. Click here to join our channel and stay updated with the latest news.

Next