ಚಿಕ್ಕಬಳ್ಳಾಪುರ: ಉಸಿರಿಗಾಗಿ ಹಸಿರು ಟ್ರಸ್ಟ್‌ನ ಸದಸ್ಯರು ಯುವ ಮತದಾರರನ್ನು ಮತ ಕೇಂದ್ರಗಳತ್ತ ಸೆಳೆಯುವ ನಿಟ್ಟಿನಲ್ಲಿ, ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಭಾರಿಗೆ ಮತ ಚಲಾಯಿಸಿದ ಯುವಜನರಿಗೆ ಗುರುವಾರ ಹೊಂಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಬೆಳೆಸಲು ವಿನೂತನ ಅಭಿಯಾನ ಕೈಗೊಂಡಿತ್ತು.
ಅರಿವು ಮೂಡಿಸಲು ಉಡುಗೊರೆ: ಬರದ ಜಿಲ್ಲೆಯಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಏಕೈಕ ಉದ್ದೇಶದೊಂದಿಗೆ ಜಿಲ್ಲೆಯ ಆರು ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ ಯುವಜನರು ತಮ್ಮ ಮೊದಲ ಮತದ ಸವಿನೆನಪಿನಲ್ಲಿ ಸಸಿಯೊಂದನ್ನು ನೆಟ್ಟು ಸಂಭ್ರಮಿಸುವುದರ ಮೂಲಕ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಮುಂದಾಗುವಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೊಂಗೆ ಸಸಿಯನ್ನು ಉಡುಗೊರೆಯಾಗಿ ನೀಡಿದರು.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮತ್ತು ಪುರಸಭೆ ಮತಗಟ್ಟೆಗಳ ಮುಂಭಾಗ ಹಾಗೂ ತಾಲೂಕಿನ ದಿಬ್ಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದೊಡ್ಡತಮ್ಮನಹಳ್ಳಿ ಮತಗಟ್ಟೆಗಳ ಮುಂಭಾಗ ಯುವ ಮತದಾರರಿಗೆ ಸಸಿಗಳನ್ನು ವಿತರಿಸಿದರೆ, ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಕೋಟೆ ಗ್ರಾಮ ಹಾಗೂ ನಲ್ಲಪ್ಪರೆಡ್ಡಿ ಗ್ರಾಮ ಮತಗಟ್ಟೆಗಳ ಮುಂಭಾಗಗಳಲ್ಲಿ ಒಟ್ಟು 464 ಹೊಂಗೆ ಸಸಿಗಳನ್ನು ಉಡುಗೊರೆಯಾಗಿ ನೀಡಿದರು.
ಸಸಿಗಳನ್ನು ಸ್ವೀಕರಿಸಿದ ಸುಮಾರು 180-200 ಯುವ ಮತದಾರರು ತಮ್ಮ ಮನೆಗಳ ಸಮೀಪ ಸಸಿಗಳನ್ನು ನೆಟ್ಟು, ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಟ್ರಸ್ಟಿನ ಮೊಬೈಲ್ ಸಂಖ್ಯೆಗೆ ರವಾನಿಸಿದ್ದಾರೆಂದು ಟ್ರಸ್ಟ್‌ನ ಕಾರ್ಯದರ್ಶಿ ಗಂಗಧಾರರೆಡ್ಡಿ ತಿಳಿಸಿದರು.
ಸಸಿಗಳನ್ನು ಹೊತ್ತ ವಾಹನ ಸಾಗಿದ ಕಡೆಯೆಲ್ಲೆಲ್ಲಾ ಮೊದಲ ಬಾರಿ ಮತ ಚಲಾಯಿಸಿದ ಯುವಕರ ಹಿಂಡು ಸಸಿಗಳಿಗಾಗಿ ಮುಗಿಬೀಳುತ್ತಿದ್ದರು ಹಾಗೂ ದೊಡ್ಡತಮ್ಮನಹಳ್ಳಿ ಗ್ರಾಮದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ತಮ್ಮ ಸೊಸೆಗಾಗಿ ಸಸಿ ನೀಡುವಂತೆ ಅಜ್ಜಿಯೊಬ್ಬರು ಬೇಡಿಕೆಯಿಟ್ಟಿದ್ದು, ತನ್ನ ಮಗನ ಮೊದಲ ಮತ ಚಲಾವಣೆಯಲ್ಲಿ ಸಸಿನೆಡಲು ಮುಂದಾದ ಪೋಷಕರು ಹೀಗೆ ಹತ್ತು ಹಲವು ಕೌತುಕಗಳಿಗೆ ಉಸಿರಿಗಾಗಿ ಹಸಿರು ಟ್ರಸ್ಟ್ ಹಮ್ಮಿಕೊಂಡಿದ್ದ ಪರಿಸರ ಉಳಿವು ಅಭಿಯಾನಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸದಸ್ಯರಾದ ರಾಮಾಂಜಿನಪ್ಪ, ದಿವ್ಯಾ ಎಂ, ಶಿವರಾಜ್ ಕುಮಾರ್, ವೇಣು ಗೋಪಾಲ್, ಅನಿಲ್, ಮುನೀಂದ್ರ, ಶಿವಶಂಕರ್, ರಾಜಶೇಖರ್, ಸುಹೇಲ್ ಇನ್ನಿತರರು ಭಾಗವಹಿಸಿದ್ದರು. ಉಡುಗೊರೆ ನೀಡಿದ ಎಲ್ಲಾ ಸಸಿಗಳನ್ನು ಶ್ರೀ ಕೃಷ್ಣ ಫಾರ್ಮ ಮತ್ತು ನರ್ಸರಿ, ದೊಡ್ಡಆಲದ ಮರ, ಚುಂಚನಕುಪ್ಪೆ, ಮೈಸೂರು ರಸ್ತೆ, ಬೆಂಗಳೂರು ಇವರು ದೇಣಿಗೆಯಾಗಿ ನೀಡಿದ್ದರು.