Advertisement

ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪೋಷಿಸಿ

05:30 AM Jul 13, 2019 | Lakshmi GovindaRaj |

ಹನೂರು: ವಾತಾವರಣದಲ್ಲಿ ಹವಾಮಾನ ವೈಪರೀತ್ಯತೆ ಉಂಟಾಗಲು ಪರಿಸರ ನಾಶ ಪ್ರಮುಖ ಕಾರಣವಾಗಿದೆ. ಯಾವುದೇ ಒಂದು ಪ್ರದೇಶ ಉತ್ತಮ ವಾತಾವರಣ ಹೊಂದಲು ಭೂ ಭಾಗದ ಶೇ.50ರಷ್ಟು ಅರಣ್ಯದಿಂದ ಆವೃತ್ತವಾಗಿರಬೇಕು. ಈ ಹಿನ್ನೆಲೆ ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್‌.ಸ್ವಾಮಿ ಹೇಳಿದರು.

Advertisement

ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆ, ಮಹೀಂದ್ರ ಮತ್ತು ಮಹೀಂದ್ರ ಫೈನಾನ್ಸಿಯಲ್‌ ಸರ್ವಿಸ್‌ ಮತ್ತು ಸಮೃದ್ಧಿ ಫೌಂಡೇಶನ್‌, ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಪರಿಸರ ಅರಿವು ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ಜಾಗೃತಿ ಮೂಡಿಸಿ: ಪ್ರಸ್ತುತ ಭಾರತ ದೇಶದಲ್ಲಿ ಮರುಭೂಮಿ ಹೊಂದಿರುವ ರಾಜ್ಯಗಳಲ್ಲಿ ರಾಜಸ್ಥಾನ ಹೊರತು ಪಡಿಸಿದರೆ ನಂತರದ ಸ್ಥಾನ ಕರ್ನಾಟಕ ರಾಜ್ಯಕ್ಕಿದೆ. ನಮ್ಮ ರಾಜ್ಯದ ಶೇ.34 ಭಾಗ ಮಾತ್ರ ಅರಣ್ಯ ಪ್ರದೇಶದಿಂದ ಕೂಡಿರುವುದು ಹವಾಮಾನ ವೈಪರೀತ್ಯತೆಗೆ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಮತೋಲನ ಕಾಪಾಡಲು ವಿದ್ಯಾರ್ಥಿ ದಿಸೆಯಿಂದಲೇ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮಳೆಯ ಕೊರತೆ: ಹನೂರು ಪೊಲೀಸ್‌ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್‌ ನಾಗೇಶ್‌ ಮಾತನಾಡಿ, ಪ್ರಕೃತಿಗೆ ನಾವು ನೋವನ್ನು ಉಂಟು ಮಾಡಿದರೆ ಪ್ರಕೃತಿ ನಮಗೆ ನೋವನ್ನು ಉಂಟು ಮಾಡುತ್ತದೆ. ಈ ವೇಳೆಗಾಗಲೇ ರಾಜ್ಯದಲ್ಲಿ ಉತ್ತಮ ಮಳೆಯಾಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಮಳೆಯ ಕೊರತೆ ಎದುರಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಸಲಹೆ: ತಾಪಮಾನ ಹೆಚ್ಚಾಗಿದೆ ಎಂದ ಅವರು ಸಸಿ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಿರಬಾರದು. ಈ ಪ್ರಕ್ರಿಯೆ ಪ್ರತಿ ದಿನ ನಡೆಯಬೇಕು. ನಮ್ಮೆಲ್ಲರಿಗೂ ಸಾಲು ಮರದ ತಿಮ್ಮಕ್ಕ ಮಾದರಿ ಹಾಗೂ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳು ನಿಮ್ಮ ಮನೆ ಹಾಗೂ ಶಾಲೆಯಲ್ಲಿ ಒಂದೊಂದು ಸಸಿಗಳನ್ನು ನೆಟ್ಟು ಅದನ್ನು ಪೋಷಿಸಬೇಕು.

Advertisement

ಶಾಲೆಯ 5 ವರ್ಷದ ಅವಧಿಯಲ್ಲಿ ನೀವು ಒಂದು ಸಸಿಯನ್ನು ಬೆಳೆಸಿ ಪೋಷಿಸಿದರೆ ನೀವು ಬೇರೆ ಶಾಲೆಗೆ ಹೋಗುವಾಗ ಅದು ನಿಮ್ಮನ್ನು ಸಂತೋಷದಿಂದ ಬೀಳ್ಕೊಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡಲಾಯಿತು. ಗಣ್ಯರು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆದರು.

ರಾಜ್ಯ ಸರ್ಕಾರಿ ನೌಕರರ ಸಂಗದ ಅಧ್ಯಕ್ಷ ಗುರುಸ್ವಾಮಿ, ಮಹೀಂದ್ರ ಮತ್ತು ಮಹೀಂದ್ರ ಫೈನಾನ್ಸಿಯಲ್‌ ಸರ್ವಿಸ್‌ ವಿಭಾಗಿಯ ವ್ಯವಸ್ಥಾಪಕ ಅಮಿತ್‌, ಲೆಕ್ಕ ವ್ಯವಸ್ಥಾಪಕ ಲಕ್ಷ್ಮೀ ಕಿರಣ್‌, ಸಿಬ್ಬಂದಿ ಯೋಗೇಶ್‌, ಪ್ರಶಾಂತ್‌, ಅಂಜನ್‌, ಭಾಸ್ಕರ್‌, ವೈಶಾಖ್‌, ಅಶ್ವಿ‌ನ್‌, ಶಾಮಣ್ಣ, ಮುಖಂಡರಾದ ಗೋವಿಂದ, ಸುದೇಶ್‌, ಬಿಆರ್‌ಸಿ ಎಚ್‌.ಕ್ಯಾತ, ಸಂಸ್ಕೃತ ಶಿಕ್ಷಕ ಮಲ್ಲಣ್ಣ, ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದ ಅಭಿಷೇಕ್‌, ದಿನೇಶ್‌, ಮುಖ್ಯ ಶಿಕ್ಷಕ ಮಾದೇವಶೆಟ್ಟಿ, ಬಿಆರ್‌ಪಿ ಮತ್ತು ಸಿಆರ್‌ಪಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next