ಹುಬ್ಬಳ್ಳಿ: ಮಳೆಗಾಲ ಮುಗಿದ ನಂತರ ಮಳೆಹಾನಿ ತಡೆ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಹಳೇ ಹುಬ್ಬಳ್ಳಿಯ ಭಾಗದಲ್ಲಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಸದರಸೋಫಾ, ಕುಂಬಾರ ಓಣಿ, ಬ್ಯಾಹಟ್ಟಿ ಪ್ಲಾಟ್, ನಾರಾಯಣ ಸೋಫಾ, ಕರೀಮಿಯಾ ನಗರ, ಪಾಂಡುರಂಗ ಕಾಲೋನಿ, ಮೇದಾರ ಓಣಿ, ಕಮ್ಮಾರ ಸಾಲ್, ಬಿಡ್ನಾಳ ಮತ್ತಿತರ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಹಳೇ ಹುಬ್ಬಳ್ಳಿ ಭಾಗದ ಬಹುತೇಕ ಕಡೆ ಜನರು ನಾಲಾ ಪಕ್ಕದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದು, ಮಳೆಗಾಲದಲ್ಲಿ ನಾಲಾ ನೀರು ನುಗ್ಗಿ ಹಾನಿಯಾಗುತ್ತಿದೆ. ಈಗಾಗಲೇ ಕೆಲವೆಡೆ ನಾಲಾಕ್ಕೆ ತಡೆಗೋಡೆ ನಿರ್ಮಿಸಿದ್ದರಿಂದ ಹಾಗೂ ತಡೆಗೋಡೆ ಗಾತ್ರ ಹೆಚ್ಚಿಸಿದ್ದರಿಂದ ಹಾನಿ ಪ್ರಮಾಣ ತಗ್ಗಿದೆ. ಮಳೆಗಾಲ ಮುಗಿದ ಕೂಡಲೇ ಸಂಬಂಧಿಸಿದ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ನಾಲಾದ ಹೂಳು ತೆಗೆಯುವುದು, ತಡೆಗೋಡೆ, ಗಟಾರ ನಿರ್ಮಿಸುವ ಕುರಿತಾಗಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಭವಿಸಿದ ನೆರೆಯಲ್ಲಿ ಹಾನಿಗೊಳಗಾದ ಬಹುತೇಕ ಕುಟುಂಬಗಳಿಗೆ ಅಗತ್ಯ ಪರಿಹಾರ ಒದಗಿಸಲಾಗಿದೆ. ಕೆಲ ಕುಟುಂಬಗಳಿಗೆ ಪರಿಹಾರ ಧನ ಬಂದಿಲ್ಲ. ಈ ಕುರಿತು ತಹಶೀಲ್ದಾರ್‌ರೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಮಾಜಿ ಸದಸ್ಯರಾದ ಗಣೇಶ ಟಗರಗುಂಟಿ, ಬಷೀರ್ ಅಹ್ಮದ್ ಗುಡಮಾಲ್, ಯಮನೂರುಜಾಧವ್, ಮುತುವಲ್ಲಿ ಮುದಕವಿ, ಸ್ಥಳೀಯರಾದ ಪಿತಾಂಬರಪ್ಪ ಬಿಳಾರ, ಅಸ್ಲಂ ಮುಲ್ಲಾ, , ತಾಜುದ್ದಿನ್ ಮುನವಳ್ಳಿ, ಇಕ್ಬಾಲ್ ಕರಡಿಗುಡ್ಡ, ಬುಡೇನ್ ಶಿರೂರ, ವಿಜಯ ಬದ್ದಿ, ಪವನ್ ಜರತಾರಘರ, ರಾಘವೇಂದ್ರ ಮೆಹರವಾಡೆ, ಬಂಟು ನಾಕೋಡ, ಪಾಲಿಕೆ ವಲಯ ಅ ಧಿಕಾರಿಗಳಾದ ಬಸವರಾಜ ಲಮಾಣಿ, ಆನಂದ ಕಾಂಬ್ಳೆ, ಗ್ರಾಮಲೆಕ್ಕಾಧಿಕಾರಿಗಳಾದ ಗುರುನಾಥ ಸುಣಗಾರ, ಅಯ್ಯನಗೌಡ್ರ ಇನ್ನಿತರರಿದ್ದರು.