Advertisement

ದೇವಿ ಸನ್ನಿಧಿಯಲ್ಲಿ ಮೈತ್ರಿ ಸರ್ಕಾರ ಕೆಡವಲು ಮುಹೂರ್ತ

03:11 PM Jul 30, 2019 | Team Udayavani |

ಮೈಸೂರು: ಆರಂಭದ ದಿನದಿಂದಲೂ ಶಾಸಕರ ಬಂಡಾಯವನ್ನು ಜೀರ್ಣಿಸಿಕೊಂಡೇ ಮುನ್ನಡೆದಿದ್ದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೆ ಶಕ್ತಿ ದೇವತೆ ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಡಗೂರು ಎಚ್.ವಿಶ್ವನಾಥ್‌ ಮುಹೂರ್ತ ಇಟ್ಟು ಸಫ‌ಲರಾದರಾ? ಹೌದು ಎನ್ನುತ್ತವೆ ಮೂಲಗಳು.

Advertisement

ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಉರುಳಿ ಸಲು ರಾಜ್ಯ ಬಿಜೆಪಿ ನಾಯಕರು ಹಲವಾರು ಬಾರಿ ಆಪರೇಷನ್‌ ಕಮಲಕ್ಕೆ ಕೈ ಹಾಕಿ ವಿಫ‌ಲರಾಗಿದ್ದರು. ಜೊತೆಗೆ ಕುಮಾರಸ್ವಾಮಿ ಅವರ ಮಂತ್ರಿ ಮಂಡಲ ದಲ್ಲಿದ್ದ ರಮೇಶ್‌ ಜಾರಕಿಹೊಳಿ, ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪವನ್ನು ಸಹಿಸದೆ ಬಂಡಾಯದ ಬಾವುಟವನ್ನು ಹಾರಿಸಿ ಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರಿಂದ ಈ ಸರ್ಕಾರವನ್ನು ಉರುಳಿಸಲೇಬೇಕು ಎಂದು ಸಮಾನ ಮನಸ್ಕ ಶಾಸಕ ರನ್ನು ಒಗ್ಗೂಡಿಸುವ ಕೆಲಸಕ್ಕೆ ಕೈಹಾಕಿದರಾದರೂ ಅವರ ಪ್ರಯತ್ನ ನಿರೀಕ್ಷಿತ ಫ‌ಲ ನೀಡಿರಲಿಲ್ಲ. ಆದರೆ, ಕಾಂಗ್ರೆಸ್‌ನಿಂದ ಹೊರಬಂದು ಅತಂತ್ರರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ಶಾಸಕರಾಗಲು ಅವಕಾಶ ನೀಡುವ ಮೂಲಕ ರಾಜಕೀಯವಾಗಿ ಪುನರ್‌ಜನ್ಮ ನೀಡಿದರು ಎಂಬ ಕಾರಣಕ್ಕೆ ಜೆಡಿಎಸ್‌ ವರಿಷ್ಠ ಎಚ್. ಡಿ. ದೇವೇಗೌಡರ ಮಾತನ್ನು ಅಲ್ಲಗಳೆಯಲಾಗದೆ ಒಲ್ಲದ ಮನಸ್ಸಿನಿಂದಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡರಾದರೂ ಜೆಡಿಎಸ್‌ನಲ್ಲಿ ಗೌಡರ ಕುಟುಂಬದವರ ಮಾತು ಬಿಟ್ಟು ಆ ಪಕ್ಷದ ಮುಖಂಡರು, ಕಾರ್ಯಕರ್ತರು ಇನ್ಯಾರ ಮಾತು ಕೇಳಲಾರರು.

ಬೂತ್‌ಮಟ್ಟದ ಕಾರ್ಯಕರ್ತ ಕೂಡ ಗೌಡರು, ಕುಮಾರಣ್ಣ ಹೇಳಿದರೆ ಮಾತ್ರ ನಾವು ಕೇಳುವುದು ಎಂಬ ಮನಸ್ಥಿತಿ ತೋರಿದ್ದಲ್ಲದೆ, ತಮಗೆ ಪಕ್ಷದ ನಾಮಕಾವಾಸ್ತೇ ರಾಜ್ಯಾಧ್ಯಕ್ಷ ಸ್ಥಾನನೀಡಿ, ಯಾವುದೇ ಅಧಿಕಾರ ನೀಡದೆ, ತಮ್ಮ ಹಿರಿತನ ಮತ್ತು ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣಕ್ಕೆ ಅಸಮಾಧಾನಗೊಂಡಿದ್ದ ವಿಶ್ವನಾಥ್‌ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಎಂಬ ಹುದ್ದೆ ಹೊರತುಪಡಿ ಸಿದರೆ ಯಾವುದೇ ಅಧಿಕಾರ ಚಲಾಯಿಸಲಾಗದೆ ಅಸಹಾಯಕರಾಗಿದ್ದರು. ಲೋಕಸಭಾ ಚುನಾವಣೆ ಯಲ್ಲೂ ತಮ್ಮನ್ನು ಬಳಸಿಕೊಳ್ಳಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ರಾಗಿದ್ದು ಯಾವಾಗ? ಎಲ್ಲಿ? ಚುನಾವಣಾ ಪ್ರಚಾರ ಸಭೆಗಳು ನಡೆಯುತ್ತವೆ ಎಂಬುದನ್ನು ಮೂರನೇ ವ್ಯಕ್ತಿಯಿಂದ ತಿಳಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದಲ್ಲದೆ, ತವರು ಜಿಲ್ಲೆ ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್‌ ಪರ ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ.ಕುಮಾರ ಸ್ವಾಮಿ ಅವರು ಸಮಾವೇಶ ನಡೆಸಿದರಾದರೂ ಅಲ್ಲಿಂದಲೂ ಇವರನ್ನು ಹೊರಗಿಡಲಾಗಿತ್ತು.

ಅಷ್ಟೇ ಅಲ್ಲದೇ ತಾವು ಚುನಾವಣಾ ರಾಜಕೀಯ ಆರಂಭಿಸಿ ಮೂರು ಬಾರಿ ಶಾಸಕರಾಗಿದ್ದ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಿಂದಲೂ ಹೊರಗಿಡ ಲಾಗಿತ್ತು. ನಂತರದ ದಿನಗಳಲ್ಲಿ ನಡೆದ ಕೆ.ಆರ್‌.ನಗರ ಪುರಸಭೆ ಚುನಾವಣೆಯಲ್ಲಿ ತಾವು ಶಿಫಾರಸು ಮಾಡಿದವರಿಗೆ ಟಿಕೆಟ್ ನೀಡದೆ, ಮುಖ್ಯಮಂತ್ರಿ ಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಪ್ತರು ಎಂಬ ಕಾರಣಕ್ಕೆ ಎಲ್ಲ ವಿಚಾರಗಳಲ್ಲೂ ಸಚಿವರಾಗಿದ್ದ ಸಾ.ರಾ.ಮಹೇಶ್‌ ಅವರಿಗೆ ಆದ್ಯತೆ ನೀಡುತ್ತಾ, ತಮ್ಮನ್ನು ಕಡೆಗಣಿಸಿದ್ದರಿಂದ ಕೆರಳಿದ್ದ ಎಚ್. ವಿಶ್ವನಾಥ್‌ ಸಂದರ್ಭಕ್ಕಾಗಿ ಕಾದು ಕುಳಿತಿದ್ದರು.

ದೇವಿ ದರ್ಶನ: ಎಚ್.ಡಿ.ದೇವೇಗೌಡರ ಮನವೊಲಿಕೆಗೆ ಬಗ್ಗದೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವುದಾಗಿ ಹೇಳಿದ್ದ ಎಚ್.ವಿಶ್ವನಾಥ್‌ ಅವರು ಜುಲೈ 1ರಂದು ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ (ಅತೃಪ್ತ ಶಾಸಕರಲ್ಲ) ಅಸ್ಸಾಂನ ಗುವಾಹಟಿ ತೆರಳಿ ತಂಗಿದ್ದರು.

Advertisement

ಜುಲೈ 2ರ ಮಂಗಳವಾರ ಅಮಾ ವಾಸ್ಯೆಯ ಗ್ರಹಣದ ದಿನ ಗುವಾಹಟಿಯ ನೀಲಾಚಲ ಬೆಟ್ಟದಲ್ಲಿ ನೆಲೆಸಿರುವ ಶಕ್ತಿ ದೇವತೆ ಕಾಮಾಕ್ಯ ದೇವಿಯ ದರ್ಶನ ಪಡೆದು, ದೇವಿಯ ಸನ್ನಿಧಿಯಲ್ಲಿ ನಿಂತು ಕುಮಾರಸ್ವಾಮಿ ಸರ್ಕಾರ ಕಿತ್ತೂಗೆಯುವ ಸಂಕಲ್ಪ ಮಾಡಿದವರು, ಅಲ್ಲಿಂದ ದೆಹಲಿಗೆ ತೆರಳಿ ಜು.3ರಂದು ಕರ್ನಾಟಕ ಭವನದಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿ ಕೊಂಡರು. ಜು.4ರಂದು ಬೆಂಗಳೂರಿಗೆ ಬಂದು ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದವರೇ ಮುಂಬೈ ವಿಮಾನ ಹತ್ತಿದರು. ಅದರೊಂದಿಗೆ ಆರಂಭವಾದ ಎಚ್. ಡಿ.ಕುಮಾರಸ್ವಾಮಿ ಸರ್ಕಾರದ ಪತನ ಪರ್ವ ಜು.2ರಂದು ಶಕ್ತಿದೇವತೆ ಕಾಮಾಕ್ಯ ದೇವಿಯ ಮುಂದೆ ಮಾಡಿದ ಸಂಕಲ್ಪದಂತೆ 21 ದಿನಗಳಲ್ಲಿ ಅದೂ ಕೂಡ ಮಂಗಳವಾರವೇ ಮೈತ್ರಿ ಸರ್ಕಾರ ಪತನವಾಯಿತು ಎನ್ನುತ್ತಾರೆ ಎಚ್. ವಿಶ್ವನಾಥ್‌ ಜತೆಗಿದ್ದವರು.

 

● ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next