Advertisement

ಯುವಜನರಲ್ಲಿ ನಾಯಕತ್ವ ಬೆಳೆಸಲು ಯೋಜನೆ

09:59 AM Dec 30, 2019 | sudhir |

ಉಡುಪಿ: ನಾಡಿನ ಯುವ ಸಮು ದಾಯದಲ್ಲಿ ನಾಯಕತ್ವದ ಗುಣ ಬೆಳೆಸಲು ನಿರ್ದಿಷ್ಟ ಸ್ವರೂಪದ ಮಹತ್ವದ ಯೋಜನೆಯೊಂದನ್ನು ಪ್ರಕಟಿಸುವುದಾಗಿ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಹೇಳಿದ್ದಾರೆ.

Advertisement

ಐಪಿಎಸ್‌ ಹುದ್ದೆಯನ್ನು ತೊರೆದು ಸಮಾಜಮುಖೀ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಣ್ಣಾಮಲೈ ಅವರು ಶನಿವಾರ ಉದಯವಾಣಿ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಅವರು ತಮ್ಮ ಯೋಜನೆಯ ಬಗ್ಗೆ ಮಾತುಕತೆ ನಡೆಸಿದರು. ಅದರ ಪ್ರಮುಖ ಅಂಶಗಳು ಹೀಗಿವೆ.

ಇವತ್ತು ನಮ್ಮ ಸಮಾಜದಲ್ಲಿ ತಳಮಟ್ಟದ ನಾಯಕತ್ವದ ಕೊರತೆ ಇದೆ. ರಾಜ್ಯ ಮಟ್ಟ ಅಥವಾ ಕೇಂದ್ರ ಮಟ್ಟದಲ್ಲಿ ಪ್ರಬಲ ನಾಯಕತ್ವ ಇರುವುದು ಬೇರೆ ವಿಚಾರ. ಆದರೆ ನಮ್ಮ ನಿಮ್ಮ ನಡುವಿನಿಂದಲೇ ನಾಯಕರು ಹುಟ್ಟಿ ಬರಬೇಕಾಗಿರುವುದು ಇಂದಿನ ತುರ್ತು ಆವಶ್ಯಕತೆಯಾಗಿದೆ.

ಇದಕ್ಕೆ ಉದಾಹರಣೆಯಾಗಿ ಹೇಳುವುದಿದ್ದರೆ ಕಳೆದ ಐದು ವರ್ಷಗಳಲ್ಲಿ ಸುಮಾರು 65 ಪ್ರತಿಶತ ಉದ್ಯೋಗ ಸೇವಾ ಕ್ಷೇತ್ರಗಳಲ್ಲಿ ನಿರ್ಮಾಣವಾಗಿದೆ. ಅದು ಆಹಾರ ಸೇವಾ ಕ್ಷೇತ್ರಗಳಾಗಿರಬಹುದು, ಸಂಚಾರಿ ಸೇವಾ ಕ್ಷೇತ್ರಗಳಾಗಿರಬಹುದು. ಇದು ನನ್ನ ಪ್ರಕಾರ ಆಶಾದಾಯಕ ಬೆಳವಣಿಗೆಯಲ್ಲ.

ಇವತ್ತು ಫ‌ುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ ಯುವಕ ನಾಳೆ ತಾನೇ ಸ್ವತಃ ಒಂದು ಫ‌ುಡ್‌ ಸಪ್ಲೆ„ ಕಂಪೆನಿಯನ್ನು ತೆರೆಯುವಂತಾದರೆ ಅದು ಖುಷಿಯ ವಿಚಾರ. ಹೀಗೆ ಎಲ್ಲ ಕ್ಷೇತ್ರದಲ್ಲಿ ಆಗಬೇಕೆಂದು ನನ್ನ ಬಯಕೆ ಎಂದು ಅಣ್ಣಾಮಲೈ ಹೇಳಿದರು.

Advertisement

ನಾಯಕತ್ವದ ಕೊರತೆ
ಮೊನ್ನೆ ಮಂಗಳೂರಿನಲ್ಲಿ ನಡೆದ ಘಟನೆ ಹಾಗೂ ಇದೇ ರೀತಿ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ನಮಗಲ್ಲಿ ಕಾಣುವ ಮುಖ್ಯ ಅಂಶವೆಂದರೆ ಸಮರ್ಥ ನಾಯಕತ್ವದ ಕೊರತೆ. ನಾನಿಲ್ಲಿ ಹೇಳುತ್ತಿರುವುದು ರಾಜಕೀಯ ಮುಖಂಡರ ವಿಚಾರವಲ್ಲ, ಬದಲಿಗೆ ಸಮಾಜದ ವಿವಿಧ ಸಮುದಾಯಗಳಲ್ಲಿ ಇವತ್ತು ಜವಾಬ್ದಾರಿಯುತವಾಗಿ ಮಾತನಾಡುವವರು ಮೌನಕ್ಕೆ ಶರಣಾಗಿ¨ªಾರೆ. ಇದರಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶ ನಮ್ಮ ಸಮಾಜದಲ್ಲಿ ಹರಿದಾಡಿ ಅಶಾಂತಿಗೆ ಕಾರಣವಾಗುತ್ತಿದೆ. ನಿಜ ಹೇಳಬೇಕೆಂದರೆ ಸಿಎಎ ಕುರಿತಾಗಿ ಐದು ಪಾಯಿಂಟ್‌ ಸರಿಯಾಗಿ ಹೇಳಿ ಎಂದರೆ ಅದನ್ನು ಪ್ರತಿಪಾದಿಸುವವರಿಗೂ ಗೊತ್ತಿಲ್ಲ ವಿರೋಧಿಸುವವರಿಗೂ ಗೊತ್ತಿಲ್ಲ. ಇದೇ ನಮ್ಮನ್ನು ಇವತ್ತು ಗಂಭೀರವಾಗಿ ಕಾಡುತ್ತಿರುವ ಪರಿಣಾಮಕಾರಿ ನಾಯಕತ್ವದ ಕೊರತೆ ವಿಚಾರ.

ಸಮಾಜದ ತಳಮಟ್ಟದಲ್ಲಿ ನಾಯಕತ್ವ ಗುಣ ಬೆಳೆಯದೇ ಹೋದಾಗ ಖಂಡಿತವಾಗಿಯೂ ಅಲ್ಲೊಂದು ಟೈಮ್ ಬಾಂಬ್’ ಸ್ಥಿತಿ ನಿರ್ಮಾಣವಾಗುತ್ತದೆ.

ಜಾತಿ- ಜಾತಿಗಳ ಮಧ್ಯೆ ಒಡಕು ಮೂಡುತ್ತದೆ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ಬೆಳೆಸುವುದು ಇಂದಿನ ತುರ್ತು ಎಂದವರು ಅಭಿಪ್ರಾಯಪಟ್ಟರು.

ಸದ್ಯದಲ್ಲೇ ನಾವು ಪ್ರಾರಂಭಿಸಬೇಕೆಂದಿರುವ ಹೊಸ ಯೋಜನೆಯಲ್ಲಿ ಮಂಗಳೂರು, ಉಡುಪಿ, ಕೊಯಮತ್ತೂರುಗಳಂತಹ ನಗರಗಳನ್ನು ಮೂಲವಾಗಿರಿಸಿಕೊಂಡು ಇಲ್ಲಿರುವ ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಮತ್ತು ಆ ಮೂಲಕ ನಿಧಾನವಾಗಿ ಉಳಿದ ಪ್ರದೇಶಗಳಿಗೂ ಇದನ್ನು ಹಂತಹಂತವಾಗಿ ವಿಸ್ತರಿಸುವ ಯೋಜನೆ ನಮ್ಮದಾಗಿದೆ ಎಂದು ತಮ್ಮ ಭವಿಷ್ಯದ ಡ್ರೀಂ ಪ್ರಾಜೆಕ್ಟ್ ಕುರಿತಾಗಿ ಮಾಹಿತಿ ನೀಡಿದರು.

ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಉದಯವಾಣಿಗೆ ಶುಭ ಹಾರೈಸಿದ ಅಣ್ಣಾಮಲೈ ಅವರು ಬಳಿಕ ಸಂಪಾದಕೀಯ ವಿಭಾಗ ಸಹಿತ ಮುದ್ರಣ ವಿಭಾಗಗಳಿಗೆ ಭೇಟಿ ನೀಡಿ ಪತ್ರಿಕೆಯ ಕಾರ್ಯವೈಖರಿಯ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.

ಧರ್ಮ, ರಾಜಕೀಯ ರಹಿತ ವೇದಿಕೆ
ಇವತ್ತು ಐಟಿ ಎಂಜಿನಿಯರ್‌ ಆಗಿರುವ ಒಬ್ಬ ಯುವಕ ಅಥವಾ ಡೆಲಿವರಿ ಬಾಯ್‌ ಆಗಿರು ವರು ಮುಂದಿನ ಕೆಲ ವರ್ಷಗಳಲ್ಲಿ ನಾಯಕರಾಗಿ ಬೆಳೆಯಬೇಕು. ಅದಕ್ಕೆ ಬೇಕಾದ ವೇದಿಕೆಯನ್ನು ನಾವು ಒದಗಿಸಿಕೊಡಲಿದ್ದೇವೆ. ಯಾವುದೇ ಪಕ್ಷಗಳ, ಧರ್ಮದ ಅಥವಾ ಸಮುದಾಯದ ಪರವಾಗಿರದೆ, ಸತ್ಯಾಂಶವನ್ನು ಸಮಾಜಕ್ಕೆ ತಿಳಿಸುವ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಇದರ ರೂಪರೇಖೆಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ಸಾರ್ವಜನಿಕವಾಗಿ ಬಹಿರಂಗಗೊಳಿಸುತ್ತೇನೆ ಎಂದು ಅಣ್ಣಾಮಲೈ ಅವರು ತಮ್ಮ ಮುಂದಿನ ಕನಸಿನ ಯೋಜನೆ ಕುರಿತಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next