ಮಂಡ್ಯ: ರಾಮನಗರ ಹಾಗೂ ಚನ್ನಪಟ್ಟಣ ಮಧ್ಯೆ 300 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ರೇಷ್ಟೆ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರೆಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ, ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ, ಅಭಿನಂದನೆ, ಉಸ್ತುವಾರಿ ಸಚಿವರೊಂದಿಗೆ ಸಂವಾದ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೇಷ್ಮೆ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ರಾಮನಗರ-ಚನ್ನಪಟ್ಟಣ ಮಧ್ಯೆ ಅಂತಾರಾಷ್ಟ್ರೀಯ ರೇಷ್ಟೆ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್‌ನಿಂದ ಸಂಕಷ್ಟ: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ರೈತರು ಸೇರಿದಂತೆ ಎಲ್ಲ ವರ್ಗದ ಜನತೆ ಸಂಕಷ್ಟ ಅನುಭವಿಸಿದರು. ತರಕಾರಿ ಬೆಳೆಗಾರರು ಸಹ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ತೊಂದರೆ ಅನುಭವಿಸಿದರು. ಇದನ್ನು ಮನಗಂಡು ತರಕಾರಿಗಳನ್ನು ರಫ್ತು ಮಾಡಲು ಯೋಜನೆ ರೂಪಿ ಸಲಾಯಿತು. ಅಂದು ಶೇ.5.5ರಷ್ಟು ತರಕಾರಿಗಳನ್ನು ಹೊರಗೆ ಕಳುಹಿಸಲಾಗುತ್ತಿತ್ತು. ಇದು ಮಾಧ್ಯಮಗಳಿಂದ ಸಾಧ್ಯವಾಯಿತು ಎಂದರು.
ರೇಷ್ಮೆಗೆ ಹೆಚ್ಚಿನ ಉತ್ತೇಜನ: ಇದೇ ಮಾದರಿಯಲ್ಲಿ ರೇಷ್ಮೆ ಬೆಳೆಗಾರರು ತೊಂದರೆ ಅನುಭವಿಸುತ್ತಿರುವುದನ್ನು ಕಂಡು ರೇಷ್ಮೆಗೂ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ಮೈಸೂರು ರೇಷ್ಮೆ ಸೀರೆಗೆ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಪತ್ರಕರ್ತರಿಗೆ ವಿಮೆ: ಕೋವಿಡ್-19 ಸಂಕಷ್ಟ ಸೇರಿದಂತೆ ಹಲವಾರು ಸಮಸ್ಯೆಗಳು ಬಂದರು ದಿಟ್ಟತನದಿಂದ ಪತ್ರಕರ್ತರು ಕೆಲಸ ಮಾಡುತ್ತಾರೆ. ಪತ್ರಕರ್ತರಿಗೆ ರಾಷ್ಟ್ರೀಯ ವಿಮಾ ಯೋಜನೆ ರೂಪಿಸಲು ಸರ್ಕಾರದ ಜೊತೆ ಚರ್ಚೆ ನಡೆಸಲಾ ಗುವುದು. ಈ ಯೋಜನೆಯಿಂದ ಪತ್ರಕರ್ತರ ಕುಟುಂಬಕ್ಕೂ ಶಕ್ತಿ ದೊರೆಯುತ್ತದೆ. ಜೊತೆಗೆ ಅಂತಹ ಕುಟುಂಬಗಳಿಗೆ ಸರ್ಕಾರಿ ಕೆಲಸ ಇಲ್ಲವೇ ಬೇರೆ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚಿಸಲಾ ಗುವುದು ಎಂದು ಹೇಳಿದರು.
ಮೂರು ಬಾರಿ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದೇನೆ. ನನ್ನ ಸಮಾಜ ಸೇವೆಯನ್ನು ಗಮನಿಸಿ ಮಹಾರಾಷ್ಟ್ರದಲ್ಲೂ ನನಗೆ ದೊಡ್ಡ ಸ್ಥಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಇದರ ಜೊತೆಗೆ ಸಮಾರಂಭದಲ್ಲಿ ಮೂರು ಗೋಷ್ಠಿಗಳು ನಡೆದವು. ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪರಶುರಾಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಪತ್ರಕರ್ತರಾದ ಅಣ್ಣೂರು ಲಕ್ಷ್ಮಣ್, ಪಿ.ಜೆ. ಚೈತನ್ಯಕುಮಾರ್, ಕೆ.ಎನ್. ರವಿ, ಕೃಷ್ಣ ಸ್ವರ್ಣಸಂದ್ರ, ಸೋಮಶೇಖರ್ ಕೆರಗೋಡು, ಲಿಂಗರಾಜು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.