Advertisement

ಕಾರಂತರ ಕರ್ಮಭೂಮಿಗೆ ಜೀವ ತುಂಬುವ ಯೋಜನೆ

11:14 PM Feb 03, 2020 | mahesh |

ಪುತ್ತೂರು: ಕಡಲತಡಿಯ ಭಾರ್ಗವ, ಜ್ಞಾನಪೀಠ ಪುರಸ್ಕೃತ ಡಾ| ಶಿವರಾಮ ಕಾರಂತರ ಕರ್ಮಭೂಮಿಯಾದ ಪರ್ಲಡ್ಕದ ಬಾಲವನವನ್ನು ಇನ್ನಷ್ಟು ಸಾಹಿತ್ಯ-ಸಾಂಸ್ಕೃತಿಕ ತಾಣವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌ ತಿಳಿಸಿದ್ದಾರೆ. ಸೋಮವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಾಲವನಕ್ಕೆ ಇನ್ನಷ್ಟು ಜನರನ್ನು ಸೆಳೆಯುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.

Advertisement

ಬಾಲವನಕ್ಕೆ ನಮ್ಮ ನಡಿಗೆ
“ಬಾಲವನದತ್ತ ಹೆಜ್ಜೆ ಇಡೋಣ, ಕಾರಂತರ ಕನಸುಗಳಿಗೆ ಜೀವ ತುಂಬೋಣ’ ಎಂಬ ಧ್ಯೇಯದೊಂದಿಗೆ ಬಾಲವನಕ್ಕೆ ನಮ್ಮ ನಡಿಗೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸಾಹಿತಿಗಳು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಸಂಘ ಸಂಸ್ಥೆಗಳು, ಮಕ್ಕಳು ಪತ್ರಕರ್ತರನ್ನು ಸೇರಿಸಿಕೊಳ್ಳಲಾಗುವುದು ಹಾಗೂ 5 ಸಾಂಸ್ಕೃತಿಕ ತಂಡಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸೇರ್ಪಡೆಗೊಳಿಸಿಕೊಂಡು ಪುತ್ತೂರು ಬಸ್‌ ನಿಲ್ದಾಣದ ಬಳಿಯ ಗಾಂಧಿಕಟ್ಟೆಯಿಂದ ಪರ್ಲಡ್ಕದ ಬಾಲವನದ ತನಕ ಜಾಥಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ನಾಟ್ಯರೂಪ ಶಿಲ್ಪ ನಿರ್ಮಾಣ
ಬಾಲವನದಲ್ಲಿ ಕಾರಂತರ ಕಾದಂಬರಿಗಳ ವಸ್ತುಗಳನ್ನು ಬಳಸಿಕೊಂಡು ಚಿತ್ರ ಗ್ಯಾಲರಿ ಮಾಡಲಾಗಿದೆ. ಬಾಲವನವನ್ನು ನಾಟ್ಯರೂಪಿ ಶಿಲ್ಪಗಳ ಬಾಲವನವನ್ನಾಗಿಸುವ ಹಿನ್ನೆಲೆಯಲ್ಲಿ ಇದೀಗ ಕಾರಂತರ ಯಕ್ಷಗಾನದ ವಿವಿಧ ನಾಟ್ಯರೂಪ ಶಿಲ್ಪಗಳನ್ನು ಸಿಮೆಂಟ್‌ ಅಥವಾ ಕ್ಲೇ ಮಾಡೆಲಿಂಗ್‌ ಮೂಲಕ ರಚಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆ ಮೂಲಕ ಬಾಲವನವನ್ನು “ಕಾರಂತ ಥೀಮ್‌ ಪಾರ್ಕ್‌’ ಮಾಡಲು ಉದ್ದೇಶಿಸಲಾಗಿದೆ ಎಂದು ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌ ತಿಳಿಸಿದರು.

ಬಾಲವನ ಯೋಗ ಕೇಂದ್ರ
ಬಾಲವನದಲ್ಲಿ ಯೋಗ ಕೇಂದ್ರವನ್ನು ಮಾಡಲು ಉದ್ದೇಶಿಸಲಾಗಿದೆ. ಬಾಲವನ ವೆಬ್‌ಸೈಟ್‌ ಅಭಿವೃದ್ಧಿ ಪಡಿಸುವುದು, ಕಾರಂತರ ಜ್ಞಾನಪೀಠ ಪ್ರಶಸ್ತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಬಾಲವನದಲ್ಲಿ ವ್ಯವಸ್ಥೆಗೊಳಿಸುವುದು, ಕಾರಂತರ ಕಾದಂಬರಿಗಳ ಚಿತ್ರಪಟಗಳನ್ನು ಖ್ಯಾತ ಕಲಾವಿದರ ಮೂಲಕ ರಚಿಸುವುದು, ಚಿತ್ರ ಗ್ಯಾಲರಿಯ ಕಟ್ಟಡ ಅಭಿವೃದ್ಧಿ ಸಹಿತ ಹಲವು ಯೋಜನೆಗಳನ್ನು ಕಾರ್ಯಗತ ಮಾಡಲು ಚಿಂತನೆ ನಡೆಸಲಾಗಿದೆ. ಬಾಲವನ ಅಭಿವೃದ್ಧಿಗೆ ರಾಜ್ಯಮಟ್ಟದಲ್ಲಿ ಸಮಿತಿ ಇರುವ ಹಾಗೆಯೇ ಸ್ಥಳೀಯವಾಗಿ ಬಾಲವನ ಅಭಿವೃದ್ಧಿ ಚಿಂತಕರನ್ನು ಒಗ್ಗೂಡಿಸಿಕೊಂಡು ಕಾರಂತ ತಪೋವನವನ್ನು ಕಾರಂತ ಪರಿಸರವನ್ನಾಗಿಸುವುದು ನಮ್ಮ ಉದ್ದೇಶ. ಬಾಲವನದತ್ತ ಜನತೆ ಹೆಜ್ಜೆ ಇಡುವಂತಾಗಲು ಈ ಪ್ರಯತ್ನ ಎಂದು ಅವರು ತಿಳಿಸಿದರು.

ಮಾ. 20ರಿಂದ ರಂಗಾಯಣ ನಾಟಕೋತ್ಸವ
ಕಾರಂತರ ಬಾಲವನದಲ್ಲಿ ಮೈಸೂರಿನ ರಂಗಾಯಣದ ಮೂರು ದಿನಗಳ ನಾಟಕೋತ್ಸವ ನಡೆಯಲಿದೆ. ಮಾ. 20, 21 ಮತ್ತು 22ರಂದು ಸಂಜೆ 7 ಗಂಟೆಯಿಂದ ರಾತ್ರಿ 9.30ರ ತನಕ ನಡೆಯಲಿದೆ ಎಂದು ಡಾ| ಯತೀಶ್‌ ಮಾಹಿತಿ ನೀಡಿದರು.ಪುತ್ತೂರು ತಹಶೀಲ್ದಾರ್‌ ರಾಹುಲ್‌ ಶಿಂಧೆ, ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌, ಕಲಾವಿದ ಕೃಷ್ಣಪ್ಪ ಬಂಬಿಲ ಉಪಸ್ಥಿತರಿದ್ದರು.

Advertisement

“ಲಾಂಛನ’ ರಚಿಸುವ ಸ್ಪರ್ಧೆ
ಕಾರಂತರ ಬಾಲವನಕ್ಕೆ ಅದರದ್ದೇ ಆದ ಲಾಂಛನವೊಂದನ್ನು ತಯಾರಿಸುವ ನಿಟ್ಟಿನಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ. ಕಾರಂತರ ಕಲ್ಪನೆ, ಸಾಹಿತ್ಯ, ಹಸಿರು, ಸಂಸ್ಕೃತಿ, ಬಾಲವನ, ಕಾದಂಬರಿಗಳು, ಅವರ ಅಸ್ಮಿತೆ, ಪುತ್ತೂರು ಸಹಿತ ಇಡೀ ಕಾರಂತರ ಬದುಕನ್ನು ಅವಲೋಕನ ಮಾಡುವ ಲಾಂಛನ ರಚನೆಯಾಗಬೇಕಾಗಿದ್ದು, ಸಾರ್ವಜನಿಕರು ಮುಕ್ತವಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಥಮ ಸ್ಥಾನ ಪಡೆದ ಲಾಂಛನಕ್ಕೆ ಬಹುಮಾನ ಹಾಗೂ ಆಯ್ಕೆಗೊಂಡ ಮೊದಲ 10 ಲಾಂಛನಗಳನ್ನು ಬಾಲವನದಲ್ಲಿ ಪ್ರದರ್ಶನ ಮಾಡಲಾಗುವುದು. ಮಾಣಿ – ಮೈಸೂರು ಹೆದ್ದಾರಿಯ ಬೈಪಾಸ್‌ ಬಳಿ ಈ ಲಾಂಛನ ಸಹಿತ ಬಾಲವನ ಪ್ರವೇಶ ದ್ವಾರವನ್ನೂ ರಚಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next