Advertisement
ಕಾಗಿನೆಲೆ ಕನಕ ಕಲಾಭವನದಲ್ಲಿ ಜಿಲ್ಲಾ ಪಂಚಾಯಿತಿ, ಬ್ಯಾಡಗಿ ತಾಲೂಕು ಪಂಚಾಯಿತಿ ಹಾಗೂ ಕಾಗಿನೆಲೆ ಗ್ರಾಮ ಪಂಚಾಯತಿ ಸಹಯೋಗದಲ್ಲಿ ‘ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್’ ವಿಷಯ ಕುರಿತು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
Related Articles
Advertisement
ಇದೇ ಮಾದರಿಯನ್ನು ಕೇರಳ ಸರ್ಕಾರ ಮಾಡಿತ್ತು. ಅಲ್ಲಿನ ಮುಖ್ಯಮಂತ್ರಿಗಳು ಸಮಾಜದ ವಿವಿಧ ತಜ್ಞರಿಗೆ ಖುದ್ದಾಗಿ ಪತ್ರ ಬರೆದು ಜನಪರ ಯೋಜನೆಗಳನ್ನು ರೂಪಿಸಲು ತಜ್ಞರ ಸಲಹೆಗಳನ್ನು ಕೋರಿದರು. ಎಲ್ಲರನ್ನೂ ಒಂದೆಡೆ ಸೇರಿಸಿದರು. ಇಂತಹ ಜನಾಂದೋಲನದಿಂದ ಗ್ರಾಮೀಣಾಭಿವೃದ್ಧಿ ಯೋಜನೆಗಳು ಕೇರಳದಲ್ಲಿ ಯಶಸ್ವಿಯಾಯಿತು. ಈ ಮಾದರಿ ಸಮಗ್ರ ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಸಾಮಾಜಿಕ ಸುಧಾರಣೆ, ಜಾತಿ ಮತ್ತು ಬಡತನ ನಿರ್ಮೂಲನೆ, ದುರ್ಬಲ, ವಿಕಲಚೇತನರ ಏಳ್ಗೆಗೆ ಶೂನ್ಯ ಬಂಡವಾಳದ ಯೋಜನೆ ರೂಪಿತವಾಗಬೇಕು. ಜನರ ಸಾಮೂಹಿಕ ಸಹಭಾಗಿತ್ವ ಈ ಕ್ಷೇತ್ರದಲ್ಲಿ ಹೆಚ್ಚಾಗಬೇಕು. ಮಹಾತ್ಮ ಗಾಂಧಿಧೀಜಿ ಅವರ ಗ್ರಾಮ ಸ್ವರಾಜ್‌ದ ಕಲ್ಪನೆಯಂತೆ ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯ ದೃಷ್ಟಿಕೋನದಿಂದ ಯೋಜನೆಗಳನ್ನು ರೂಪಿಸಲು ಬದ್ಧರಾಗಬೇಕು ಎಂದರು.
ಗಾಂಧಿಧೀಜಿ ಅವರ 150ನೇ ವರ್ಷಾಚರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅವರು ಕಂಡ ಗ್ರಾಮ ಸ್ವರಾಜ್ ಕಲ್ಪನೆ ಸಹಕಾರಗೊಳಿಸಬೇಕು. ಗ್ರಾಮ ಸಭೆಗಳಲ್ಲೇ ಯೋಜನೆಗಳು ತಯಾರಾಗಬೇಕು. ಗ್ರಾಮೀಣ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆಗಳು, 14ನೇ ಹಣಕಾಸು ಯೋಜನೆಯ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಹಳಷ್ಟು ಅನುದಾನ ಬರುತ್ತಿದೆ. ಈ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಬಹು ಹಂತದ ಬಹು ಸಾಧ್ಯತೆಯ ಸಮಗ್ರ ಅಭಿವೃದ್ಧಿಯ ಯೋಜನೆ ಜತೆಗೆ ಜೀವ ವೈವಿದ್ಯತೆಗಳ ರಕ್ಷಣೆಗೆ ಆದ್ಯತೆ ನೀಡಿ ಜನಪರ ಯೋಜನೆಗಳನ್ನು ರೂಪಿಸಬೇಕು ಎಂದರು.
ಉದ್ಯೋಗ ಸೃಜನೆ, ಆರೋಗ್ಯ ಹಾಗೂ ಶಿಕ್ಷಣದ ಬೆಳವಣಿಗೆ, ಸೇವಾಲಯದ ಸುಧಾರಣೆ, ಮೂಲ ಸೌಕರ್ಯಗಳ ಸುಧಾರಣೆ, ಆರ್ಥಿಕ ಬೆಳವಣಿಗೆ, ಸಾಮಾಜಿಕ ಸುಧಾರಣೆ, ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಯೋಜನೆ ರೂಪಿಸಿ ಒಂದು ನಿರ್ಧಿಷ್ಟ ಅವಧಿಯಲ್ಲಿ ಯೋಜನೆಗಳು ಪೂರ್ಣಗೊಳ್ಳವಂತೆ ಕ್ರಮವಹಿಸಿ ಎಂದು ಹೇಳಿದರು.
ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮದ ಜನರಿಗೆ ಯೋಜನೆ ರೂಪಿಸುವುದು ಎಂದರೆ ಏನು ಎಂದು ತಿಳಿಯಬೇಕು. ಯೋಜನೆಗಳನ್ನು ರೂಪಿಸುವಾಗ ಯಾವ ಅಂಶಗಳನ್ನು ಗ್ರಹಿಸಬೇಕು ಎಂಬ ಅರಿವು ಇರಬೇಕು. ಯೋಜನೆಯನ್ನು ರೂಪಿಸುವ ಸಮಿತಿಗಳ ಸದಸ್ಯರು ತಮ್ಮ ಕೆಲಸ ಕೇವಲ ಪುನಾರವರ್ತಿತ ಕೆಲಸವೆಂದು ಭಾವಿಸದೇ ಹೊಸದನ್ನು ಚಿಂತಿಸಬೇಕು. ಹೀಗಾದಾಗ ಮಾತ್ರ ಸಮಗ್ರ ಯೋಜನೆ ತಯಾರಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಮಾತನಾಡಿ, ಸರ್ಕಾರವು ಗ್ರಾಮದ ಅಭಿವೃದ್ಧಿಯ ಹೊಣೆ ನಮಗೆ ನೀಡಿದೆ. ಪ್ರತಿ ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಜನರ ಸಹಭಾಗಿತ್ವದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಅತ್ಯಂತ ಬಲಿಷ್ಠವಾಗಿವೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಅಧಿಕಾರವಿದೆ. ಗ್ರಾಮದ ಅಭಿವೃದ್ಧಿಗೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಯಾರೂ ಬದಲಾಯಿಸುವಂತಿಲ್ಲ. ತಮಗಿರುವ ಅಧಿಕಾರವನ್ನು ಬಳಸಿಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಜೀವ ವೈವಿದ್ಯತೆಗಳ ರಕ್ಷಣೆ, ಜಲ ಮೂಲಗಳ ರಕ್ಷಣೆ, ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ದೂರದೃಷ್ಟಿಯಿಂದ ಜನಾಭಿಪ್ರಾಯ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ. ಲೀಲಾವತಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗಣೇಶ ಪ್ರಸಾದ, ಮಾಜಿ ಶಾಸಕ ಡಿ.ಆರ್.ಪಾಟೀಲ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ರಮೇಶ ಸುತ್ತಕೋಟಿ, ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಹಯಾತಬಿ ಮತ್ತಿಹಳ್ಳಿ ಇದ್ದರು.
ಕಾರ್ಯಾಗಾರದಲ್ಲಿ ಜಿಪಂ ಸದಸ್ಯರು, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.