ಬಳ್ಳಾರಿ: ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆಯ ಎರಡನೇ ಹಂತದ ಕಾರ್ಯಕ್ರಮವನ್ನು ಶಾಸಕ ಜಿ. ಸೋಮಶೇಖರರೆಡ್ಡಿ ಶನಿವಾರ ಉದ್ಘಾಟಿಸಿದರು.
ನಗರದ ಪಶುಸಂಗೋಪನಾ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗೋಮಾತೆಯನ್ನು ಸಂರಕ್ಷಿಸುವ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಲಾಖೆಯ ಅಪರ ನಿರ್ದೇಶಕ ಡಾ| ಮಂಜುನಾಥ್ ಎಸ್.ಪಾಳೇಗಾರ್ ಅವರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಜಿಲ್ಲೆಯ ಆಯ್ದ 500 ಗ್ರಾಮಗಳಲ್ಲಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು. ಇಲಾಖೆಯ ಸಿಬ್ಬಂದಿಗಳು ರೈತರ ಮನೆಗಳಿಗೆ ಹೋಗಿ ಬೆದೆಗೆ ಬಂದ ಹಸು ಮತ್ತು ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಕಡಿಮೆ ಉತ್ಪಾದನಾ ಸಾಮರ್ಥ್ಯ ಹೊಂದಿದ ತಳಿ ಸಂವರ್ಧನೆಗೆ ಯೋಗ್ಯವಿರುವ ಹಸು ಮತ್ತು ಎಮ್ಮೆಗಳಿಗೆ ಉತ್ಕೃಷ್ಟ ತಳಿ
ಹೋರಿ/ಕೋಣದ ವೀರ್ಯವನ್ನು ಉಪಯೋಗಿಸಿ ತಳಿ ಉನ್ನತೀಕರಿಸಿ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದರ ಮೂಲಕ ರೈತರು ಹೆಚ್ಚಿನ ಹಾಲು ಉತ್ಪಾದಿಸಲು ಹಾಗೂ ಆರ್ಥಿಕವಾಗಿ ಹೆಚ್ಚಿನ ಲಾಭಗಳಿಸಲು ಅನುಕೂಲ ಕಲ್ಪಿಸಲಾಗುವುದು ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃತಕ ಗರ್ಭದಾರಣೆಗೆ ಒಳಪಡಿಸಿದ ಪ್ರತಿ ಹಸುಗೆ ವಿಶಿಷ್ಟ ಗುರುತಿನ ಕಿವಿಯೋಲೆಯನ್ನು ಅಳವಡಿಸಲಾಗುವುದು ಹಾಗೂ ಮಾಹಿತಿಯನ್ನು ಐಎನ್‌ಎಪಿಎಚ್ (ಇನ ರ್ಮೇಶನ್ ನೆಟ್‌ವರ್ಕ್ ಫಾರ್ ಅನಿಮಲ್ ಪ್ರಡಕ್ಟಿವಿಟಿ ಅಂಡ್ ಹೆಲ್ತ್) ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಈ ಯೋಜನೆಯನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ವೀರಶೇಖರ ರೆಡ್ಡಿ, ರೈತ ಮುಖಂಡರಾದ ಜಿ. ಪುರುಷೋತ್ತಮಗೌಡ, ಇಲಾಖೆಯ ಉಪನಿರ್ದೇಶಕ ಡಾ| ಬಿ.ಎಲ್. ಪರಮೇಶ್ವರ ನಾಯ್ಕ, ಜಿಲ್ಲೆಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.