ಶಿವಮೊಗ್ಗ: ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ಅಡಿಯ ಯೋಜನೆಗಳನ್ನು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಜಿ.ಪಂ. ಸದಸ್ಯೆ ಕೆ.ಅನಿತಾಕುಮಾರಿ ಭರವಸೆ ನೀಡಿದರು.
ಭದ್ರಾವತಿಯ ಹುತ್ತಾ ಕಾಲೋನಿಯಲ್ಲಿ ಭಾನುವಾರ ಮಹಿಳೆಯರ ಅಹವಾಲು ಆಲಿಸಿ ಮಾತನಾಡಿದ ಅವರು, ಮಹಿಳೆಯರಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ವಿಳಂಬವಾಗುತ್ತಿದೆ. ಇದರಿಂದಾಗಿ ಫಲಾನುಭವಿಗಳು ತೊಂದರೆ ಅನುಭವಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಯ ನಿರ್ದೇಶನಲಾಯವು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ, ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ನೇರವು ಯೋಜನೆ, ಅಂತ್ಯ ಸಂಸ್ಕಾರ ಸಹಾಯ ಧನ ಯೋಜನೆ, ಆಮ್ ಆದ್ಮಿ ಬಿಮಾ (ಜನಶ್ರೀ) ಯೋಜನೆ, ಮನಸ್ವಿನಿ, ಮೈತ್ರಿ ಸೇರಿದಂತೆ ಅಸಹಾಯಕ, ಅಶಕ್ತ ವ್ಯಕ್ತಿಗಳು, ನಿರ್ಗತಿಕ ವಿಧವೆಯರು, ಅಂಗವಿಕಲರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುತ್ತಿದೆ. ತಹಶೀಲ್ದಾರರು ತಾಲೂಕು ಮಟ್ಟದಲ್ಲಿ ಇದನ್ನು ಕಾರ್ಯಗತ ಗೊಳಿಸುತ್ತಿದ್ದಾರೆ ಎಂದರು.
ಕೆಲವು ತಾಲೂಕುಗಳಲ್ಲಿ ಈ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಫಲಾನುಭವಿಗಳು ಜನಪ್ರತಿನಿಧಿಗಳನ್ನು ದೂರುತ್ತಿದ್ದಾರೆ. ಫಲಾನುಭವಿಗಳ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಸದಾ ಸಿದ್ಧವಿದೆ. ಯೋಜನೆಯ ಪ್ರತಿಫಲ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿರುವ ಸಾಮಾಜಿಕ ಭದ್ರತೆಯ ಫಲಾನುಭವಿಗಳು ತಮ್ಮನ್ನು ಸಂಪರ್ಕಿಸಿದಲ್ಲಿ ಅಗತ್ಯ ನೆರವು ನೀಡಲಾಗುವುದೆಂದು ಭರವಸೆ ನೀಡಿದರು.