Advertisement

ದೇವನಗರಿ ಸುಂದರ-ಶುಚಿತ್ವಕ್ಕೆ ಯೋಜನೆ

09:30 AM Jul 23, 2019 | Suhan S |

ದಾವಣಗೆರೆ: ಪರಿಸರ ಸ್ನೇಹಿ ಹಾಗೂ ಮಾಲಿನ್ಯಮುಕ್ತ ದಾವಣಗೆರೆ ನಗರವನ್ನಾಗಿಸಲು ಉದ್ಯಮಿಗಳ ಸಹಯೋಗದಲ್ಲಿ ಕಾರ್ಯಯೋಜನೆ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

Advertisement

ನಗರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾರ್ಯಕ್ರಮ ರೂಪಿಸಲಾಗಿದೆ. ಅದರ ಜತೆಗೆ ನಗರವನ್ನು ಮತ್ತಷ್ಟು ಸುಂದರೀಕರಣ ಹಾಗೂ ಶುಚಿತ್ವ ಕಾಪಾಡುವ ಹಿನ್ನೆಲೆಯಲ್ಲಿ ಆಯ್ದ ಉದ್ಯಮಿಗಳ ನೆರವಿನೊಂದಿಗೆ ಯೋಜನೆ ಕಾರ್ಯಗತಗೊಳಿಸಲಾಗುವುದು. ಈ ಸಂಬಂಧ ಅವರೊಂದಿಗೆ ಸೋಮವಾರ ಬೆಳಿಗ್ಗೆ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕುಂದುವಾಡ ಕೆರೆ, ಜಿಲ್ಲಾ ಆಸ್ಪತ್ರೆ ಉದ್ಯಾನವನ, ನಗರದ ಪ್ರಮುಖ ವೃತ್ತಗಳನ್ನು ಅಭಿವೃದ್ಧಿ ಪಡಿಸಿ, ಅವುಗಳ ನಿರ್ವಹಣೆ ಹೊಣೆಯನ್ನು ಉದ್ಯಮಿಗಳು ನಿಭಾಯಿಸಲಿದ್ದಾರೆ. ಉದ್ಯಮಿಗಳು ತಮ್ಮ ಲಾಭಾಂಶ ಶೇ.2 ರಷ್ಟು ಮೊತ್ತವನ್ನು ಈ ಕಾರ್ಯಕ್ಕೆ ವಿನಿಯೋಗಿಸಲಿದ್ದಾರೆ. ನಗರದ ಸೌಂದರಿಕರಣ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆಂದೋಲನದ ರೀತಿ ಕಾರ್ಯಗತವಾಗಲಿರುವ ಯೋಜನೆಯ ರೂಪುರೇಷೆ ವಾರದೊಳಗೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕುಂದುವಾಡ ಕೆರೆ ಕಾರಂಜಿ ಉತ್ಕೃಷ್ಟವಾದದ್ದು. ನೀರಿನ ಸಮಸ್ಯೆಯಿಂದಾಗಿ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಕುಂದುವಾಡ ಕೆರೆ ಅಭಿವೃದ್ಧಿ ಜತೆಗೆ ಅದನ್ನು ಮತ್ತಷ್ಟು ಸುಂದರಗೊಳಿಸಲಾಗುವುದು. ಅಲ್ಲಿ ವಾಯುವಿಹಾರಕ್ಕಾಗಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಮಂದಿ ತೆರಳುತ್ತಾರೆ. ವಾಕರ್ ಪಾಥ್‌, ಕೆರೆ ಸಂರಕ್ಷಣೆ, ಆಕರ್ಷಕ ಹೂವಿನ ಗಿಡ ಬೆಳೆಸುವುದು ಸೇರಿದಂತೆ ಹಲವು ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ನಗರದ ಪ್ರಮುಖ ವೃತ್ತಗಳಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಅವುಗಳನ್ನು ಸುಂದರಗೊಳಿಸಲಾಗುವುದು. ಆ ವೃತ್ತಗಳಲ್ಲಿ ಕಸದ ಬುಟ್ಟಿ ಇರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಖಾಲಿ ಜಾಗದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಗಿಡ ಬೆಳೆಸಲಾಗುವುದು. ಮುಂದಿನ ದಿನಗಳಲ್ಲಿ ಮನೆ ಮನೆಗೂ ಎರಡು ಡಸ್ಟ್‌ ಬಿನ್‌ ವ್ಯವಸ್ಥೆ ಮಾಡಲಾಗುವುದು. ಇದು ಮಾಲಿನ್ಯ ನಿಯಂತ್ರಿಸಲು ಸಹಕಾರಿಯಾಗಲಿದೆ. ಮುಖ್ಯವಾಗಿ ರೋಗ ರುಜಿನ ತಡೆಗೂ ಅನುಕೂಲವಾಗಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿಯೂ ಹಲವಾರು ಕಾರ್ಯಕ್ರಮ ಅನುಷ್ಠಾಗೊಳ್ಳುವುದರಿಂದ ದಾವಣಗೆರೆ ನಗರ ಸುಂದರವಾಗಲಿದೆ ಎಂದು ತಿಳಿಸಿದರು. ನಗರದ ಶುಚಿತ್ವ ಹಾಗೂ ಸುಂದರೀಕರಣದ ಕಾರ್ಯದಲ್ಲಿ ಉದ್ಯಮಿಗಳ ಜತೆಗೆ ನಗರದ ಸಂಘ ಸಂಸ್ಥೆಗಳು, ಕಂಪನಿಗಳು ಮುಂದೆ ಬಂದು ಈ ಆಂದೋಲನಕ್ಕೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

Advertisement

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೆ.ವಿ. ಕೊಟ್ರೇಶ್‌ ಈ ಸಂದರ್ಭದಲ್ಲಿದ್ದರು.

ಯಾರ್ಯಾರಿಗೆ ಯಾವ್ಯಾವ ಅಭಿವೃದ್ಧಿಯ ಜವಾಬ್ದಾರಿ, ನಿರ್ವಹಣೆ ಉಸ್ತುವಾರಿ

ಆರಾಧ್ಯ ಸ್ಟೀಲ್ ಅ್ಯಂಡ್‌ ವೈರ್‌ ರೋಪ್‌ ಇಂಡಸ್ಟ್ರೀಸ್‌- ಕುಂದುವಾಡ ಕೆರೆ ಕಾರಂಜಿ.
ಕಾರ್ಗಿಲ್ ಇಂಡಿಯಾ ಲಿ.ಬೆಳ್ಳೂಡಿ-ಕುಂದುವಾಡ ಕೆರೆ ಫುಟ್ಪಾತ್‌, ಗಾರ್ಡನಿಂಗ್‌.
ಮಹಾರಾಜ ಸೋಪ್ಸ್‌ ಆ್ಯಂಡ್‌ ಡಿಟರ್‌ಜೆಂಟ್ಸ್‌-ಚಿಗಟೇರಿ ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಉದ್ಯಾನವನಅಭಿವೃದ್ಧಿ ಜತೆಗೆ ನೀರಿನ ವ್ಯವಸ್ಥೆ ಮತ್ತು ಗುಂಡಿ ಮಹಾದೇವಪ್ಪ ವೃತ್ತ ನವೀಕರಣ.
ರಿಲಯನ್ಸ್‌ ಮಾರ್ಟ್‌ ಪಿಬಿ ರಸ್ತೆ-ವಿದ್ಯಾನಗರ ವೃತ್ತ ಹಾಗೂ ವಿದ್ಯಾನಗರ 2ನೇ ಬಸ್‌ ನಿಲ್ದಾಣ ಉದ್ಯಾನವನ.
ಗ್ರಾಸಿಂ ಇಂಡಸ್ಟ್ರೀಸ್‌ ಕುಮಾರಪಟ್ಟಣಂ-ಡಿಸಿ ವೃತ್ತ (ಕ್ಲಾಕ್‌ ಟವರ್‌ 100 ಅಡಿ ರಸ್ತೆ) ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಡಿಸಿ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ್ತದವರೆಗಿನ ರಸ್ತೆ ವಿಭಜಕ ಅಭಿವೃದ್ಧಿ.
ಹ್ಯಾಟ್ಸನ್‌ ಆಗ್ರೋ ಪ್ರಾಡಕ್ಟ್ , ಕುಂದೂರು- ಎಂಸಿಸಿ ಎ ಬ್ಲಾಕ್‌.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ-ದೇವರಾಜ ಅರಸು ವೃತ್ತ.
ಮಹಾನಗರ ಪಾಲಿಕೆ-ಜಯದೇವ ವೃತ್ತ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ-ಟ್ರೀ ಗಾರ್ಡ್‌ ಸರಬರಾಜು.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ:

ಹಂದಿ ಸ್ಥಳಾಂತರದ ಬಗ್ಗೆ ತಾಂತ್ರಿಕ ಅಡಚಣೆ ಇದೆ. ಅವುಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಆ ಕಾರ್ಯ ಸ್ಥಗಿತವಾಗಿದೆ. ನ್ಯಾಯಾಲಯದ ಆದೇಶದಿಂದಾಗಿ ದಾವಣಗೆರೆ ನಗರವಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ಈ ಆದೇಶ ಅನ್ವಯವಾಗಿದೆ. ಹಾಗಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದರು. ರಸ್ತೆ ಬದಿ ಲಾರಿ ಹಾಗೂ ಟ್ಯಾಕ್ಸಿಗಳ ನಿಲುಗಡೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದರಿಂದ ಅವುಗಳ ನಿಲ್ದಾಣಕ್ಕಾಗಿ ಪರ್ಯಾಯ ಜಾಗ ಹುಡುಕಲಾಗುತ್ತಿದೆ. ನಗರ ಬೆಳೆಯುತ್ತಿರುವುದರಿಂದ ಜಾಗ ದೊರೆಯುತ್ತಿಲ್ಲ. ಆದರೂ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next