Advertisement

ನಮ್ಮ ಕಾಡು ಜೀವ ವೈವಿಧ್ಯಗಳ ಬೀಡು 

04:01 PM Sep 22, 2018 | |

ಜೀವವೈವಿಧ್ಯದ ಜಗತ್ತಿನ ಅತ್ಯುತ್ತಮ ತಾಣ ಪಶ್ಚಿಮ ಘಟ್ಟ ಶ್ರೇಣಿ. ಇದು ಭೂಮಂಡಲದ ವಕ್ಷಸ್ಥಳವಿದ್ದಂತೆ. ಈ ಸೂಕ್ಷ್ಮ ಪರಿಸರ ತಾಣಕ್ಕೆ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಆಘಾತಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಶ್ರಮಿಸುತ್ತಿದೆ. 

Advertisement

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಅಧ್ಯಯನ ಕೇಂದ್ರದ ಡಾ. ಟಿ.ವಿ. ರಾಮಚಂದ್ರ ಅವರ ಪ್ರಕಾರ ಅರಣ್ಯ ಎಂದು ಘೋಷಿಸಿರುವ ಪ್ರದೇಶದಲ್ಲಿ ಕನಿಷ್ಠ ಶೇ.40 ರಷ್ಟು ಅರಣ್ಯ ಇರಲೇಬೇಕು. ಕೊಡಗಿನ ಸಂಗತಿಗೆ ಬಂದರೆ ಕೆಲವು ಭಾಗದಲ್ಲಿ ಶೇ.18 ಕ್ಕೂ ಕಡಿಮೆ ಇದೆ. ಇನ್ನು ಕೆಲವು ಕಡೆಗಳಲ್ಲಿ ಕಾಡಿನ ಪ್ರಮಾಣ ಶೇ.2 ಕ್ಕೂ ಕಡಿಮೆ ಇದೆ. ಸರ್ಕಾರಿ ದಾಖಲೆಗಳ ಪ್ರಕಾರ ಅರಣ್ಯ ಹೊದಿಕೆಯಿರುವ 33,238 ಚ.ಕಿ.ಮೀ. ಪ್ರದೇಶದಲ್ಲಿ ದಟ್ಟ ಅರಣ್ಯದ ವಿಸ್ತೀರ್ಣ 28,144 ಚ.ಕಿ.ಮೀ.ಗಳು. ಹೆಚ್ಚಿನ ಭಾಗ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿದೆ. ತೆರೆದ ಅರಣ್ಯ ಪ್ರದೇಶ 15,912 ಚ.ಕಿ.ಮೀ. ಮತ್ತು ಅಳಿವೆ ಅರಣ್ಯ (ಮ್ಯಾನ್‌ಗ್ರೋವ್‌) ಉಳಿದಿರುವುದು ಮೂರು ಚ.ಕಿ.ಮೀ. ಮಾತ್ರ. ಅರಣ್ಯ ರಕ್ಷಣೆ ಹಾಗೂ ಜೀವಜಗತ್ತಿನ ಸಂರಕ್ಷಣೆಗೆ ಬದ್ಧವಾಗಿರುವ ಕರ್ನಾಟಕ ಸರ್ಕಾರ ಬಂಡಿಪುರ ಕಾರಿಡಾರ್‌ ಯೋಜನೆಯ ಪ್ರಸ್ತಾವನೆ ಕೈಬಿಟ್ಟು ರಾಜ್ಯವನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಅದಕ್ಕಾಗಿ ಬೀಜದುಂಡೆ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಲ್ಲದೆ, ಹಸಿರು ಕರ್ನಾಟಕ ಯೋಜನೆಯನ್ನೂ ಕೈಗೆತ್ತಿಕೊಂಡಿದೆ.

 ಸಾಮಾಜಿಕ ಅರಣ್ಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಣ್ಣ-ಪುಟ್ಟ ಬೆಟ್ಟ ಗುಡ್ಡಗಳು, ಗೋಮಾಳಗಳು ಮತ್ತು ಕೆರೆಗಳ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಬೆಳೆಯುವ ಸ್ಥಳೀಯ ಜಾತಿಯ ಮರ-ಗಿಡಗಳನ್ನು ವ್ಯಾಪಕವಾಗಿ ಬೆಳೆಸುವುದು.  ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಬೆಳೆಸಿ, ಹಸಿರು ಹೊದಿಕೆ ಹೆಚ್ಚಿಸುವ ಮೂಲಕ “ಹಸಿರು ಕರ್ನಾಟಕ’  ಮಾಡುವುದೇ ಅರಣ್ಯ ಇಲಾಖೆಯ ಮುಖ್ಯ ಉದ್ದೇಶ. ಈ ಸಂಬಂಧವಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಪುನಾಟಿ ಶ್ರೀಧರ್‌ ತಿಳಿಸಿದ್ದಾರೆ. ಅಲ್ಲದೆ, ಮಹತ್ವದ ಮತ್ತಷ್ಟು ಸಂಗತಿಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

ಕಾಡಿನ ಅಪರಾಧಗಳ ವಿಂಗಡಣೆ ಹೇಗೆ?
ಕಾಡಿನಂಚಿನಲ್ಲಿ ವಾಸಿಸುವವರು, ಸಾರ್ವಜನಿಕರು ಅರಣ್ಯದೊಳಗೆ ಪ್ರವೇಶಿಸಿ ಅರಿಯದೆ ಮಾಡಿದ ತಪ್ಪನ್ನು ನಾನ್‌ ಕಾಗ್ನಿಜೆಬಲ್‌ ಅಪರಾಧ ಎಂದು ಪರಿಗಣಿಸಿ, ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗುವುದು. ಉದ್ದೇಶಪೂರ್ವಕವಾಗಿ ಕಾಡಿನೊಳಗೆ ಅತಿಕ್ರಮಣ ಮಾಡಿ ಪ್ರಾಣಿ, ಪಕ್ಷಿಗಳಿಗೆ ತೊಂದರೆ ಕೊಡುವುದು, ಕೊಲ್ಲುವುದು, ಅರಣ್ಯ ಪ್ರದೇಶವನ್ನು ನಾಶಗೊಳಿಸುವುದು, ಮರ-ಗಿಡಗಳನ್ನು ಕಡಿದು ಕದ್ದೊಯ್ಯುವುದು, ಕಾಡಿಗೆ ಬೆಂಕಿ ಹಚ್ಚುವುದು ಇಲ್ಲವೇ ಭೂಮಿ ಒತ್ತುವರಿ ಮಾಡಿ ಮನೆ, ಹೋಂ ಸ್ಟೇ, ರಿಸಾರ್ಟ್‌, ಎಸ್ಟೇಟ್‌ ಮುಂತಾದವನ್ನು ನಿರ್ಮಾಣ ಮಾಡುವುದು ಕ್ಷಮಿಸಲಾರದ (ಕಾಗ್ನಿಜೆಬಲ್‌ )ಅಪರಾಧ. ಅಂತಹ ಆರೋಪಿಗಳನ್ನು ಬಂಧಿಸಿ ಕೋರ್ಟ್‌ಗೆ ಒಪ್ಪಿಸುತ್ತೇವೆ. ನ್ಯಾಯಾಲಯ ಅವರಿಗೆ ಶಿಕ್ಷೆ ನೀಡಿ ಜೈಲಿಗೆ ಅಟ್ಟುವ ತೀರ್ಮಾನ ತೆಗೆದುಕೊಳ್ಳುತ್ತದೆ. 

Advertisement

ಆನೆ ಕಾರಿಡಾರ್‌ ಪರಿಸ್ಥಿತಿ ಹೇಗಿದೆ?
ಆನೆಗಳು ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸಲು ಗುರುತಿಸಿಕೊಂಡಿರುವ ಪಥವೇ ಆನೆ ಕಾರಿಡಾರ್‌. ಕೊಡಗಿನಿಂದ ಬೆಳಗಾವಿವರೆಗಿನ ಪಶ್ಚಿಮ ಘಟ್ಟದ ದಟ್ಟಾರಣ್ಯದೊಳಗೆ ಆನೆಗಳು ತಮ್ಮದೆ ಹಾದಿಯನ್ನು ಮಾಡಿಕೊಂಡಿವೆ. ಪ್ರವಾಸೋದ್ಯಮದ ಹೆಸರಿನಲ್ಲಿ ಜಂಗಲ್‌ಗ‌ಳೆಲ್ಲ ಎಸ್ಟೇಟ್‌ಗಳಾಗಿ, ಹೋಂ ಸ್ಟೇಗಳಾಗಿ ಕಾರಿಡಾರ್‌ಗೂ ಕುತ್ತು ಬಂದಿದೆ. ಇದರಿಂದ ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಹೀಗೆ ನುಗ್ಗಿದ ಆನೆಗಳಿಗೆ ಮಾಲೀಕರು ಗುಂಡು ಹೊಡೆದು ಗಾಯಗೊಳಿಸುತ್ತಿದ್ದಾರೆ. ಗಾಯಗೊಂಡ ಕಾಡು ಪ್ರಾಣಿಗಳು ಕ್ರಮೇಣ ನೋವಿನಿಂದ ಸಾವನ್ನಪ್ಪುತ್ತಿವೆ. ಇದು ಇಂದಿನ ಪರಿಸ್ಥಿತಿ. ಇದನ್ನು ತಡೆಯಲು ಬಂದ ಅಧಿಕಾರಿಗಳು, ಸಿಬ್ಬಂದಿಗಳನ್ನು ಶಿಕ್ಷಿಸುತ್ತಾರೆ. ಭಯದ ವಾತಾವರಣದಲ್ಲಿ ಕೆಲಸ ಮಾಡುವ ಸ್ಥಿತಿ ಒದಗಿಬಂದಿದೆ. ಇದರ ಹೊರತಾಗಿಯೂ ಆನೆ ಕಾರಿಡಾರ್‌ ಉದ್ದಕ್ಕೂ ಅಲ್ಲಲ್ಲಿ ಸೈನಿಂಗ್‌ ಬೋರ್ಡ್ಸ್‌, ಎಲೆಕ್ಟ್ರಾನಿಕ್ಸ್‌ ಬೋರ್ಡ್‌ ಹಾಕಿದ್ದೇವೆ. ಮೊಬೈಲ್‌ ವಾರ್ನಿಂಗ್‌ ಸಿಸ್ಟಂ ಅನುಸರಿಸಲು ತಿಳಿಸಿದ್ದೇವೆ. 

ಉಪದ್ರವಕ್ಕೊಳಗಾದವರಿಗೆ ಪರಿಹಾರ ಸಿಗುತ್ತದೆಯೇ?
ನೋಡಿ. ಕರ್ನಾಟಕದ ಕಾಡುಗಳಲ್ಲಿ 6000 ಆನೆಗಳಿವೆ. ಕಾಡು ನಶಿಸಿರುವುದರಿಂದ ಪ್ರಾಣಿಗಳು ಆಹಾರ ಹುಡುಕಿಕೊಂಡು ಬರುತ್ತವೆ. ಕಾಡಿನಂಚಿನಲ್ಲಿ ಬೆಳೆದ ಬೆಳೆಗಳನ್ನು ತಿನ್ನುತ್ತವೆ. ಅಷ್ಟಕ್ಕೆ ಬಿಟ್ಟರೆ ತಿಂದು ತನ್ನಷ್ಟಕ್ಕೆ ತಾನು ಹೊರಟು ಹೋಗುತ್ತವೆ. ಹುಲಿಗಳ ಸಂಗತಿಯೂ ಇದೇ ತರಹದ್ದಾಗಿದೆ. ತಾರುಣ್ಯಕ್ಕೆ ಬಂದ‌ ಹುಲಿಗಳು ಗುಂಪಿನಿಂದ ಹೊರದೂಡಲ್ಪಡುತ್ತವೆ. ಗುಂಪಿನಿಂದ ಹೊರಬಂದ ಹುಲಿಗಳು ಆಹಾರ ಹುಡುಕಿಕೊಂಡು ಕಾಡಿನ ಅಂಚಿನ ಜನವಸತಿ ಪ್ರದೇಶಗಳತ್ತ ಬರುತ್ತವೆ. ಈ ಸಂದರ್ಭದಲ್ಲಿ ಜನರಿಗೆ, ಸಿಬ್ಬಂದಿಗೆ ಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಎಲ್ಲ ಸಂದರ್ಭದಲ್ಲಿ ಹೊಲ, ಗದ್ದೆ, ತೋಟಗಳ ನಾಶವಾದರೆ ಇಲ್ಲವೇ ಜೀವಕ್ಕೆ ಹಾನಿಯಾದರೆ ಅವರ ಕುಟುಂಬದವರಿಗೆ ಸಾಂತ್ವನ ರೂಪದಲ್ಲಿ ಎಕ್ಸ್‌ಗ್ರೇಷಿಯಾ ಕೊಡಲಾಗುತ್ತದೆ. ಪೂರ್ಣ ಪ್ರಮಾಣದ ಅಂಗವಿಕಲತೆ ಅಥವಾ ಸಾವು ಸಂಭವಿಸಿದ್ದಲ್ಲಿ 5 ಲಕ್ಷ ರೂ. ಹಾಗೂ ಅರೆ ಪ್ರಮಾಣದ ಅಂಗವಿಕಲತೆಗೆ 2.5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

ಹುಲಿ ಸಂಖ್ಯೆ ಹಾಗೂ ಸಂರಕ್ಷಣೆ ಹೇಗಿದೆ?
ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಭಾರತದಲ್ಲೇ ಅಗ್ರ ಸ್ಥಾನದಲ್ಲಿದೆ. 2014ರ ಗಣತಿ ಪ್ರಕಾರ ರಾಜ್ಯದಲ್ಲಿ 407 ಹುಲಿಗಳಿದ್ದು, ದೇಶದ ನಂ.1 ಸ್ಥಾನದಲ್ಲಿದ್ದೇವೆ. 2018ರ ಮಾಹಿತಿ ಇನ್ನಷ್ಟೇ ಬರಬೇಕಿದೆ. ಅದರಲ್ಲೂ ನಂ.1 ಆಗುವ ಸಾಧ್ಯತೆ ಇದೆ. ನಮ್ಮಲ್ಲಿ ಹುಲಿ ಸಂತತಿಗೆ ಯಾವುದೇ ತೊಡಕಿಲ್ಲವಾದ್ದರಿಂದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ಗೋಪಾಲ್‌ ತಿಮ್ಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next