ಜೈಪುರ: ಪ್ರೊ ಕಬಡ್ಡಿ 7ನೇ ಆವೃತ್ತಿಯ ಜೈಪುರ ಚರಣದ ಸೋಮವಾರದ ಪಂದ್ಯದಲ್ಲಿ ಡೆಲ್ಲಿಯ ಓಟವನ್ನು ತಡೆಹಿಡಿದ ಬುಲ್ಸ್, 39-39 ಟೈಯೊಂದಿಗೆ ಮೆರೆದಿದೆ. ಪ್ಲೇ-ಆಫ್ ರೇಸ್‌ನಲ್ಲಿ ಮುಂದುವರಿದಿದೆ. ಟೇಬಲ್ ಟಾಪರ್ ದಬಾಂಗ್ ಡೆಲ್ಲಿ ಮತ್ತು ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ನಡುವಿನ ಈ ಮುಖಾಮುಖಿ ಆರಂಭದಿಂದಲೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಂತಿಮ ರೈಡ್‌ನಲ್ಲಿ ಡೆಲ್ಲಿಯ ಸ್ಟಾರ್ ರೈಡರ್ ನವೀನ್ ಕುಮಾರ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಯಶಸ್ವಿಯಾದ ಬುಲ್ಸ್ ಪಂದ್ಯವನ್ನು 39-39 ಅಂಕಗಳಿಂದ ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಯಿತು.
ರೋಹಿತ್ ಕುಮಾರ್ ಅನುಪಸ್ಥಿತಿಯಲ್ಲಿ ಪವನ್ ಶೆಹ್ರಾವತ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು. ಪಾಟ್ನಾವನ್ನು ಮಗುಚಿದ ಹರ್ಯಾಣ ದಿನದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 39-34 ಅಂಕಗಳ ಅಂತರದಿಂದ ಸೋಲಿಸಿದ ಹರ್ಯಾಣ ಸ್ಟೀಲರ್ಸ್ ಪ್ಲೇ-ಆಫ್ಗೆ ಇನ್ನಷ್ಟು ಹತ್ತಿರವಾಯಿತು.
ಪಾಟ್ನಾ ಪರ ಪರ್‌ದೀಪ್ (17 ರೈಡಿಂಗ್ ಅಂಕ) ಹಾಗೂ ಜಾಂಗ್ ಕುನ್ ಲೀ (7 ರೈಡಿಂಗ್ ಅಂಕ) ಅಪ್ರತಿಮ ಹೋರಾಟ ಪ್ರದರ್ಶಿಸಿದರು. ಆದರೂ ತಂಡವನ್ನು ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಹರ್ಯಾಣ ಪರ ವಿಕಾಸ್ ಕಂಡೋಲ (13 ಅಂಕ) ಮತ್ತು ಕನ್ನಡಿಗ ಪ್ರಶಾಂತ್ ಕುಮಾರ್ ರೈ (8 ರೈಡಿಂಗ್ ಅಂಕ) ಅಮೋಘ ಆಟವಾಡಿದರು. ತಂಡ ಜಯದ ನಗು ಬೀರಿತು.
ಪ್ಲೇ-ಆಫ್ಗೆ ಡೆಲ್ಲಿ, ಬೆಂಗಾಲ್
ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ಲೇ-ಆಫ್ ಹಂತಕ್ಕೆ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ ಪ್ರವೇಶ ಪಡೆದುಕೊಂಡಿವೆ.
ಅಗ್ರ 6 ತಂಡಗಳು
ಡೆಲ್ಲಿ (72), ಬೆಂಗಾಲ್ (68), ಹರ್ಯಾಣ (59), ಮುಂಬಾ (53), ಬುಲ್ಸ್ (53) ಮತ್ತು ಯೋಧಾ (53) ಮೊದಲ 6 ಸ್ಥಾನದಲ್ಲಿರುವ ತಂಡಗಳಾಗಿವೆ.